ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತುಳುನಾಡಿನ ಅರ್ಜುನ್‌ ದೇವ್‌ ನಟನೆಯ ʻಟಾಸ್‌ʼ ಚಿತ್ರಕ್ಕೆ ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಕೈಜೋಡಿಸಿದ್ದೇಕೆ? ಇಂಟರೆಸ್ಟಿಂಗ್‌ ವಿಚಾರ ಬಿಚ್ಚಿಟ್ಟ ಗಣಪ! ‌

ತುಳುನಾಡಿನ ಪ್ರತಿಭೆ ಅರ್ಜುನ್ ಕಾಪಿಕಾಡ್ ಸಾರಥ್ಯದ ಟಾಸ್ ಚಿತ್ರವನ್ನು ನಟ ಗಣೇಶ್ ತಮ್ಮ ‘ಗೋಲ್ಡನ್ ಮೂವೀಸ್’ ಬ್ಯಾನರ್ ಅಡಿಯಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಉತ್ತಮ ಕಂಟೆಂಟ್ ಬೆಂಬಲಿಸುವ ಉದ್ದೇಶದಿಂದ ಕೈಜೋಡಿಸಿರುವ ಗಣೇಶ್, ಭವಿಷ್ಯದಲ್ಲಿ ಅರ್ಜುನ್ ಜೊತೆ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ತುಳುನಾಡಿನ ಜನಪ್ರಿಯ ಕಲಾವಿದ ಅರ್ಜುನ್ ಕಾಪಿಕಾಡ್ ನಟಿಸಿ, ನಿರ್ದೇಶಿಸಿರುವ ‘ಟಾಸ್’ ಸಿನಿಮಾದ ಬೆನ್ನಿಗೆ ಸ್ಯಾಂಡಲ್‌ವುಡ್‌ನ ‘ಗೋಲ್ಡನ್ ಸ್ಟಾರ್’ ಗಣೇಶ್ ನಿಂತಿದ್ದಾರೆ. ಗಣೇಶ್ ಅವರ ಹೋಮ್ ಬ್ಯಾನರ್ ‘ಗೋಲ್ಡನ್ ಮೂವೀಸ್’ ಮೂಲಕವೇ ಈ ಚಿತ್ರವನ್ನು ಪ್ರಸ್ತುತಪಡಿಸಲಾಗುತ್ತಿದ್ದು, ಚಿತ್ರದ ಭರ್ಜರಿ ಟ್ರೇಲರ್ ಬಿಡುಗಡೆ ಸಮಾರಂಭ ಈಚೆಗೆ ನಡೆದಿದೆ.

ಕಾರ್ಯಕ್ರಮದಲ್ಲಿ ‘ಟಾಸ್’ ಚಿತ್ರದ ನಾಯಕ ಅರ್ಜುನ್ ಜೊತೆಗೂಡಿ ವೇದಿಕೆಗೆ ಆಗಮಿಸಿದ ಗಣೇಶ್, ದೀಪ ಬೆಳಗಿಸಿ ಅಧಿಕೃತ ಚಾಲನೆ ನೀಡಿದ ಬಳಿಕ ಸಾಂಕೇತಿಕವಾಗಿ ನಾಣ್ಯವನ್ನು ‘ಟಾಸ್’ ಮಾಡುವ ಮೂಲಕ ಚಿತ್ರದ ಟ್ರೇಲರ್ ಅನ್ನು ಲೋಕಾರ್ಪಣೆ ಮಾಡಿದರು. ಅದಕ್ಕೂ ಮುನ್ನ ಚಿತ್ರದ ಸುಮಧುರ ಹಾಡುಗಳು ಹಾಗೂ ಪ್ರಮುಖ ತುಣುಕುಗಳನ್ನು ಪ್ರದರ್ಶಿಸಲಾಯಿತು. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ನಾಯಕಿ ಹಾಗೂ ಚಿತ್ರತಂಡದ ಸದಸ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾದರು.

ನಾನು ಅಪ್ಪಟ ಸಿನಿಮಾ ಪ್ರೇಮಿ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಣೇಶ್, ತಮ್ಮ ಬ್ಯಾನರ್‌ನಿಂದ ಈ ಸಿನಿಮಾವನ್ನು ಏಕೆ ಅರ್ಪಿಸುತ್ತಿದ್ದೇವೆ ಎಂಬ ಕುತೂಹಲಕ್ಕೆ ತೆರೆ ಎಳೆದರು. "ನಾನೊಬ್ಬ ಅಪ್ಪಟ ಸಿನಿಮಾ ಪ್ರೇಮಿ ಮತ್ತು ಒಳ್ಳೆಯ ಚಿತ್ರಗಳನ್ನು ಸದಾ ಪ್ರೀತಿಸುವವನು. ಯಾವುದೇ ಹೊಸ ಪ್ರತಿಭೆಗಳು ಅಥವಾ ಪರಿಶ್ರಮಿ ತಂಡ ಉತ್ತಮ ಕಥೆಯೊಂದಿಗೆ ನಮ್ಮೊಂದಿಗೆ ಕೈಜೋಡಿಸಲು ಬಂದಾಗ ಅವರಿಗೆ ಪ್ರೀತಿಯಿಂದ ಸಾಥ್ ನೀಡಿದರೆ ಪರಸ್ಪರ ಬಾಂಧವ್ಯ ಬೆಳೆಯುತ್ತದೆ ಮತ್ತು ಇಡೀ ಚಿತ್ರರಂಗಕ್ಕೆ ಹೊಸ ಚೈತನ್ಯ ಬರುತ್ತದೆ" ಎಂದು ಗಣೇಶ್‌ ಹೇಳಿದರು.

ಉತ್ತಮ ಕಥೆ ಸಿಕ್ಕರೆ ಅರ್ಜುನ್ ಜೊತೆ ನಟಿಸುವೆ

"ಮಂಗಳೂರಿನ ಹೆಮ್ಮೆ ಹಾಗೂ ಕೋಸ್ಟಲ್‌ವುಡ್‌ನ ಅದ್ಭುತ ಪ್ರತಿಭೆ ಅರ್ಜುನ್ ಕಾಪಿಕಾಡ್. ಅವರ ತಂದೆ ಡಾ. ದೇವದಾಸ್ ಕಾಪಿಕಾಡ್ ಕೂಡ ಶ್ರೇಷ್ಠ ರಂಗಭೂಮಿ ಕಲಾವಿದ, ಕಥೆಗಾರ ಹಾಗೂ ನಿರ್ದೇಶಕರು. ಅವರ ಮೇಲಿನ ಗೌರವ ಹಾಗೂ ಈ ಚಿತ್ರದ ಮೇಲಿನ ಭರವಸೆಯಿಂದ ‘ಗೋಲ್ಡನ್ ಮೂವೀಸ್’ ಮೂಲಕ ಬೆಂಬಲ ನೀಡುತ್ತಿದ್ದೇನೆ. ಭವಿಷ್ಯದಲ್ಲಿ ಉತ್ತಮ ಕಥೆ ಸಿಕ್ಕರೆ ಅರ್ಜುನ್ ಜೊತೆ ಖಂಡಿತವಾಗಿಯೂ ಸಿನಿಮಾ ಮಾಡುತ್ತೇನೆ" ಎಂದು ಗಣೇಶ್ ಶ್ಲಾಘಿಸಿದರು.

ತುಳುನಾಡಿನ ‘ಸೂಪರ್‌ ಸ್ಟಾರ್‌’ ಅರ್ಜುನ್‌ ದೇವ್‌ ಚಿತ್ರಕ್ಕೆ ಶಿವಣ್ಣ ಆಶೀರ್ವಾದ; ‘ಟಾಸ್‌’ ಚಿತ್ರಕ್ಕೆ ಸಾಥ್‌ ನೀಡಿದ ʻಗೋಲ್ಡನ್ ಸ್ಟಾರ್ʼ ಗಣೇಶ್‌ ದಂಪತಿ

ಅರ್ಜುನ್ ಕಾಪಿಕಾಡ್ ಹೇಳಿದ್ದೇನು?

ಗಣೇಶ್ ಅವರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ನಟ-ನಿರ್ದೇಶಕ ಅರ್ಜುನ್ ಕಾಪಿಕಾಡ್, "ಶಿಲ್ಪಾ ಗಣೇಶ್ ಮತ್ತು ಗಣೇಶ್ ಅವರ ಈ ಬೆಂಬಲವು ನಮ್ಮ ಇಡೀ ತಂಡಕ್ಕೆ ಆನೆಬಲ ತಂದಿದೆ. ನನ್ನ ಮತ್ತು ತಂದೆಯವರ ಮೇಲಿನ ಪ್ರೀತಿಯಿಂದ ಅವರು ನಮ್ಮ ಬೆನ್ನಿಗೆ ನಿಂತಿದ್ದು ಹೊಸ ಉತ್ಸಾಹ ತುಂಬಿದೆ. ಸೆಪ್ಟೆಂಬರ್ 18ರಂದು ತೆರೆಕಾಣಲಿರುವ ಈ ಸಿನಿಮಾ ಪ್ರೇಕ್ಷಕರಿಗೆ ಕೇವಲ ಮನರಂಜನೆ ನೀಡುವುದಷ್ಟೇ ಅಲ್ಲದೆ, ಭಾವನಾತ್ಮಕವಾಗಿಯೂ ತಲುಪಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮಾತನಾಡಿ, ಉತ್ತಮ ಸಾಹಿತ್ಯ ಮತ್ತು ಸಂದರ್ಭ ಹೊಂದಿರುವ ಈ ಚಿತ್ರದ ಹಾಡುಗಳು ಜನರ ಮನಗೆಲ್ಲಲಿವೆ ಎಂದರು. ‘ಟಾಸ್’ ಚಿತ್ರವು ಕರ್ನಾಟಕದಾದ್ಯಂತ ಸುಮಾರು 30 ಸಿಂಗಲ್ ಸ್ಕ್ರೀನ್ ಹಾಗೂ 40 ಮಲ್ಟಿಪ್ಲೆಕ್ಸ್‌ಗಳಲ್ಲಿ ಸೆ.18ರಂದು ತೆರೆಕಾಣುತ್ತಿದ್ದು, ಕರಾವಳಿ ಭಾಗದ 10 ಚಿತ್ರಮಂದಿರಗಳಲ್ಲಿ ತುಳು ಆವೃತ್ತಿಯಲ್ಲೂ ಬಿಡುಗಡೆಯಾಗಲಿದೆ ಎಂದು ಚಿತ್ರದ ವಿತರಕರು ಮಾಹಿತಿ ನೀಡಿದ್ದಾರೆ.