ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಬೃಂದಾವಿಹಾರಿʼ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗೋದಿಲ್ಲ! ಕಾರಣ ತಿಳಿಸಿದ ʻಗೋಲ್ಡನ್‌ ಸ್ಟಾರ್ʼ ಗಣೇಶ್‌

ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಅಭಿನಯದ 'ಬೃಂದಾವಿಹಾರಿ' ಚಿತ್ರದ ಟ್ರೇಲರ್ ಬಿಡುಗಡೆ ಮಾಡದಿರಲು ಚಿತ್ರತಂಡ ನಿರ್ಧರಿಸಿದೆ. ನವೆಂಬರ್ 20ರಂದು ತೆರೆಕಾಣಲಿರುವ ಶ್ರೀನಿವಾಸ್ ರಾಜು ನಿರ್ದೇಶನದ ಈ ಚಿತ್ರದಲ್ಲಿನ ಸರ್‌ಪ್ರೈಸ್ ಕಾಪಾಡಿಕೊಳ್ಳಲು ಈ ತಂತ್ರವನ್ನು ಚಿತ್ರತಂಡ ಮಾಡುತ್ತಿದೆ.

‘ಗೋಲ್ಡನ್ ಸ್ಟಾರ್’ ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಬೃಂದಾವಿಹಾರಿ’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಚಿತ್ರತಂಡ ಪ್ರಚಾರದ ವಿಷಯದಲ್ಲಿ ಅತ್ಯಂತ ವಿಭಿನ್ನ, ಅಚ್ಚರಿಯ ಹಾದಿಯನ್ನು ಹಿಡಿದಿದೆ. ಸಾಮಾನ್ಯವಾಗಿ ಗಣೇಶ್ ಅವರ ಹಿಂದಿನ ಸಿನಿಮಾಗಳು ಭರ್ಜರಿ ಪ್ರಚಾರ, ಅದ್ಧೂರಿ ಟ್ರೇಲರ್ ಬಿಡುಗಡೆಯ ಸದ್ದಿನೊಂದಿಗೆ ತೆರೆಗೆ ಬರುತ್ತಿದ್ದವು.

ಆದರೆ, ಶ್ರೀನಿವಾಸ್ ರಾಜು ನಿರ್ದೇಶನದ ಈ ಚಿತ್ರಕ್ಕೆ ಸೀಮಿತ ಪ್ರಚಾರ ನೀಡಲಾಗಿದ್ದು, ಇದುವರೆಗೂ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿಲ್ಲ. ಇಷ್ಟಕ್ಕೂ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡದಿರಲು ಚಿತ್ರತಂಡ ನಿರ್ಧರಿಸಿದ್ದು, ಇದರ ಹಿಂದೆ 1990ರ ದಶಕದ ಪ್ರಚಾರ ಶೈಲಿಯ ಪ್ರೇರಣೆಯಿದೆ ಎಂದು ಸ್ವತಃ ಗಣೇಶ್ ಸ್ಪಷ್ಟಪಡಿಸಿದ್ದಾರೆ.

ಸರ್‌ಪ್ರೈಸ್ ಮೊದಲೇ ಗೊತ್ತಾಗಿಬಿಡುತ್ತದೆ!

ಟ್ರೇಲರ್ ಬಿಡುಗಡೆ ಮಾಡದಿರುವ ನಿರ್ಧಾರದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಗಣೇಶ್, ಪ್ರೇಕ್ಷಕರು ಸಿನಿಮಾದ ಬಗ್ಗೆ ಹೆಚ್ಚೇನೂ ಪೂರ್ವಗ್ರಹ ಅಥವಾ ಮಾಹಿತಿ ಇಲ್ಲದೆ ಚಿತ್ರಮಂದಿರಕ್ಕೆ ಬರಬೇಕು ಎಂಬುದೇ ನಮ್ಮ ಉದ್ದೇಶ ಎಂದಿದ್ದಾರೆ. ಟ್ರೇಲರ್ ಬಿಡುಗಡೆ ಮಾಡುವುದರಿಂದ ಸಿನಿಮಾದ ಕಥಾಹಂದರ, ಪಾತ್ರಗಳ ಪರಿಚಯ, ಹಾಸ್ಯ ಹಾಗೂ ಸರ್‌ಪ್ರೈಸ್ ಅಂಶಗಳು ಅನಿವಾರ್ಯವಾಗಿ ಮೊದಲೇ ಬಹಿರಂಗಗೊಳ್ಳುತ್ತವೆ.

ಇಂದಿನ ದಿನಗಳಲ್ಲಿ ಟ್ರೇಲರ್‌ನಲ್ಲಿ ತೋರಿಸುವ ದೃಶ್ಯಗಳನ್ನು ನೋಡಿ ಜನರು ತಮ್ಮದೇ ಆದ ಒಂದು ಕಲ್ಪನೆಯನ್ನು ಕಟ್ಟಿಕೊಳ್ಳುತ್ತಾರೆ. ಆದರೆ, ಈ ಚಿತ್ರದ ಥ್ರಿಲ್ಲಿಂಗ್‌ ಅಂಶಗಳು, ಟ್ವಿಸ್ಟ್‌ಗಳನ್ನು ಪ್ರೇಕ್ಷಕರು ನೇರವಾಗಿ ಬಿಗ್‌ ಸ್ಕ್ರೀನ್‌ ಮೇಲೆಯೇ ನೋಡಿ ಆನಂದಿಸಬೇಕು ಎಂಬ ಆಶಯ ಚಿತ್ರತಂಡದ್ದಾಗಿದೆ.

ಉದ್ದೇಶಪೂರ್ವಕವಾಗಿಯೇ‌ ಟ್ರೇಲರ್ ರಿಲೀಸ್‌ ಮಾಡುತ್ತಿಲ್ಲ!

ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡ ಗಣೇಶ್, "1990ರ ದಶಕದಲ್ಲಿ ಸಿನಿಮಾಗಳಿಗೆ ಟ್ರೇಲರ್‌ಗಳೇ ಇರುತ್ತಿರಲಿಲ್ಲ, ಕೇವಲ ಹಾಡುಗಳು ಮಾತ್ರ ಬಿಡುಗಡೆಯಾಗುತ್ತಿದ್ದವು. ಪ್ರೇಕ್ಷಕರು ಆ ಹಾಡುಗಳನ್ನು ಕೇಳಿಯೇ ಕಥೆಯನ್ನು ಊಹಿಸಿಕೊಂಡು ಕುತೂಹಲದಿಂದ ಚಿತ್ರಮಂದಿರಕ್ಕೆ ಬರುತ್ತಿದ್ದರು. ನಮ್ಮ ಕಾಲೇಜು ದಿನಗಳಲ್ಲಿ ಇದೇ ರೀತಿಯ ವಾತಾವರಣವಿತ್ತು. ಈ ಸಿನಿಮಾದ ಕಥೆ, ಹಿನ್ನೆಲೆ, ತಾರಾಗಣ, ಹಾಸ್ಯ ಅಥವಾ ಪ್ರಮುಖ ಘಟ್ಟಗಳ ಬಗ್ಗೆ ಯಾವುದೇ ಸುಳಿವು ನೀಡಬಾರದು ಎಂಬ ಕಾರಣಕ್ಕೆ ಟ್ರೇಲರ್ ಬಿಡುಗಡೆ ಮಾಡದಿರಲು ಉದ್ದೇಶಪೂರ್ವಕವಾಗಿ ನಿರ್ಧರಿಸಿದ್ದೇವೆ. ಈ ನಿರ್ದಿಷ್ಟ ಸಿನಿಮಾಕ್ಕೆ ಇದು ಅತ್ಯುತ್ತಮ ತಂತ್ರವಾಗಲಿದೆ ಎಂಬ ನಂಬಿಕೆ ನನಗಿದೆ" ಎಂದು ವಿವರಿಸಿದ್ದಾರೆ.

Kannada New Movie: ತೆಲುಗಿನ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಜತೆ ಗೋಲ್ಡನ್‌ ಸ್ಟಾರ್‌ ಗಣೇಶ್ ಹೊಸ ಸಿನಿಮಾ ಘೋಷಣೆ

ನವೆಂಬರ್‌ 20ರಂದು ಗ್ರ್ಯಾಂಡ್ ರಿಲೀಸ್

ರೊಮ್ಯಾಂಟಿಕ್ ಡ್ರಾಮಾ ಕಥಾಹಂದರ ಹೊಂದಿರುವ ‘ಬೃಂದಾವಿಹಾರಿ’ ಚಿತ್ರದಲ್ಲಿ ಗಣೇಶ್ ಅವರಿಗೆ ಜೋಡಿಯಾಗಿ ದೇವಿಕಾ ಭಟ್ ಮತ್ತು ಮಾಳವಿಕಾ ಶರ್ಮಾ ನಟಿಸಿದ್ದಾರೆ. ಜೊತೆಗೆ ರಂಗಾಯಣ ರಘು, ಸಾಧು ಕೋಕಿಲ, ಅಚ್ಯುತ್ ಕುಮಾರ್, ಹಿರಿಯ ನಟಿ ಲಕ್ಷ್ಮಿ ಮತ್ತು ರಾಮ್‌ಕುಮಾರ್ ಅವರಂತಹ ಅನುಭವಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಮೃದ್ಧಿ ವಿ. ಮಂಜುನಾಥ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನವೆಂಬರ್ 20 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ವಿತರಣೆ ಮಾಡುತ್ತಿದೆ.

ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸ್ ರಾಜು ಕಾಂಬಿನೇಷನ್‌ನ ಹಿಂದಿನ ಬಾಕ್ಸ್ ಆಫೀಸ್ ದಾಖಲೆ ಈ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಜೋಡಿ ಈ ಹಿಂದೆ 2024ರಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೂಲಕ ಒಂದಾಗಿ ದೊಡ್ಡ ಮಟ್ಟದ ‌ಸಕ್ಸಸ್‌ ಗಳಿಸಿತ್ತು. ಆ ಚಿತ್ರವು ಭಾರತದಲ್ಲಿ 25 ಕೋಟಿಗೂ ಅಧಿಕ ಗಳಿಕೆ ಕಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಆ ಭರ್ಜರಿ ಯಶಸ್ಸು ‘ಬೃಂದಾವಿಹಾರಿ’ ಚಿತ್ರಕ್ಕೂ ದೊಡ್ಡ ಮಟ್ಟದ ನಿರೀಕ್ಷೆಯನ್ನು ತಂದುಕೊಟ್ಟಿದೆ.