ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

15 ದಿವಸಗಳ ಅಂತರದಲ್ಲಿ ಗಣೇಶ್‌ ನಟನೆಯ 2 ಸಿನಿಮಾ ರಿಲೀಸ್‌; ʻಗೋಲ್ಡನ್‌ ಸ್ಟಾರ್‌ʼ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್!‌

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಗೋಲ್ಡನ್ ಸ್ಟಾರ್’ ಗಣೇಶ್ ತಮ್ಮ ಹುಟ್ಟುಹಬ್ಬದ ಸುದಿನದಂದೇ ಅಭಿಮಾನಿಗಳಿಗೆ ಭರ್ಜರಿ ರಿಟರ್ನ್ ಗಿಫ್ಟ್ ನೀಡಿದ್ದು, ತಾವು ನಟಿಸಿರುವ ‘ಪಿನಾಕ’ ಹಾಗೂ ‘ಬೃಂದಾ ವಿಹಾರಿ’ ಚಿತ್ರಗಳ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಕೇವಲ 15 ದಿನಗಳ ಅಂತರದಲ್ಲಿ ಈ ಎರಡೂ ಬಿಗ್ ಬಜೆಟ್ ಚಿತ್ರಗಳು ರಿಲೀಸ್‌ ಆಗಲಿರುವುದು ವಿಶೇಷ.

ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಅವರಿಗೆ ಇಂದು (ಜುಲೈ 2) ಹುಟ್ಟುಹಬ್ಬದ ಸಂಭ್ರಮ. ಕಳೆದ ವರ್ಷ ಗೋಲ್ಡನ್‌ ಸ್ಟಾರ್‌ ಫ್ಯಾನ್ಸ್‌ಗೆ ನಿರಾಸೆ ಆಗಿತ್ತು. ಕಾರಣ, ಅವರ ಯಾವ ಸಿನಿಮಾಗಳು ತೆರೆಗೆ ಬಂದಿರಲಿಲ್ಲ. ಆದರೆ ಈ ವರ್ಷ ತಮ್ಮ ಹುಟ್ಟುಹಬ್ಬದಂದು ಗಣೇಶ್‌ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ಅದೇನಪ್ಪ ಅಂದರೆ, ಅವರ ನಟನೆಯ ಮುಂದಿನ ಎರಡು ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್‌ ಡೇಟ್‌ ಘೋಷಣೆ ಆಗಿದೆ.

ಹೌದು, ಗಣೇಶ್‌ ನಟನೆಯ ‘ಪಿನಾಕ’ ಮತ್ತು ʻಬೃಂದಾ ವಿಹಾರಿʼ ಸಿನಿಮಾಗಳ ಶೂಟಿಂಗ್‌ನಲ್ಲಿ ಗಣೇಶ್‌ ಬ್ಯುಸಿಯಾಗಿದ್ದರು. ಇದೀಗ ಇವೆರಡೂ ಸಿನಿಮಾಗಳ ಕೆಲಸಗಳು ಮುಕ್ತಾಯಗೊಂಡಿದ್ದು, ಗಣೇಶ್‌ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ದಿನಾಂಕಗಳನ್ನು ಘೋಷಣೆ ಮಾಡಲಾಗಿದೆ. ‘ಪಿನಾಕ’ ಸಿನಿಮಾವು ಅಕ್ಟೋಬರ್‌ 2ರಂದು ತೆರೆಕಂಡರೆ, ʻಬೃಂದಾ ವಿಹಾರಿʼ ಸಿನಿಮಾವು ಅಕ್ಟೋಬರ್‌ 16ರಂದು ತೆರೆಗೆ ಬರಲಿದೆ. ಹೀಗೆ ಕೇವಲ 15 ದಿನಗಳ ಅಂತರದಲ್ಲಿ ಗಣೇಶ್‌ ನಟನೆಯ ಎರಡು ಸಿನಿಮಾಗಳು ಬಿಡುಗಡೆ ಆಗಲಿವೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ಪಿನಾಕ

ಟಿ.ಜಿ. ವಿಶ್ವಪ್ರಸಾದ್ ಅವರ ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ನಿರ್ಮಾಣವಾಗಿರುವ, ನೃತ್ಯ ನಿರ್ದೇಶಕ ಧನಂಜಯ್ ಚೊಚ್ಚಲ ನಿರ್ದೇಶನ ಮಾಡಿರುವ ‘ಪಿನಾಕ’ ಚಿತ್ರದಲ್ಲಿ ಗಣೇಶ್‌ಗೆ ಡಿಫರೆಂಟ್‌ ರೋಲ್‌ ಇದೆ. ಈ ಚಿತ್ರಕ್ಕಾಗಿ ನೆಲಮಂಗಲ ಬಳಿ ಚಿತ್ರಕ್ಕಾಗಿ ಆರು ಎಕರೆ ವಿಸ್ತಾರವಾದ ಪ್ರದೇಶದಲ್ಲಿ 500 ವರ್ಷಗಳ ಹಿಂದಿನ ‘ದೇವಗಿರಿ’ ಸಾಮ್ರಾಜ್ಯದ ಬೃಹತ್ ಸೆಟ್‍ ಹಾಕಲಾಗಿತ್ತು.

ಸ್ಯಾಂಡಲ್‌ವುಡ್‌ನಲ್ಲಿ 20 ವರ್ಷ ಪೂರೈಸಿದ ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌; ತುಮಕೂರಿನಲ್ಲಿ ಸಾಂಗ್‌ ರಿಲೀಸ್‌ ಮಾಡಿ ಸಂಭ್ರಮಿಸಿದ ʻಬೃಂದಾ ವಿಹಾರಿʼ ಟೀಮ್

ಕಲಾ ನಿರ್ದೇಶಕ ಸಂತೋಷ್‍ ಪಾಂಚಾಲ್ ಮತ್ತು ತಂಡದವರು ಎರಡು ತಿಂಗಳು ಶ್ರಮವಹಿಸಿ ಈ ಅದ್ಭುತ ಸೆಟ್‍ ನಿರ್ಮಿಸಿದ್ದರು. ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಈಗಾಗಲೇ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಸದ್ದು ಮಾಡಿರುವ ಪ್ರತಿಷ್ಠಿತ ʻಪೀಪಲ್ ಮೀಡಿಯಾ ಫ್ಯಾಕ್ಟರಿʼ ಸಂಸ್ಥೆಯು 'ಪಿನಾಕ' ಚಿತ್ರಕ್ಕೆ ಹಣ ಹಾಕಿದೆ. ಗಣೇಶ್ ಅವರ ವೃತ್ತಿಜೀವನದಲ್ಲೇ ಅತ್ಯಂತ ವಿಭಿನ್ನ ಹಾಗೂ ಬಿಗ್ ಬಜೆಟ್ ಸಿನಿಮಾವಾಗಿರುವ 'ಪಿನಾಕ' ಈಗ ಅಕ್ಟೋಬರ್‌ 2ರಂದು ತೆರೆಗೆ ಬರಲಿದೆ.

ಮತ್ತೆ ಬರ್ತಿದೆ 'ಕೃಷ್ಣಂ ಪ್ರಣಯ ಸಖಿ' ಕಾಂಬಿನೇಷನ್‌

'ಕೃಷ್ಣಂ ಪ್ರಣಯ ಸಖಿ' ಚಿತ್ರದ ಭರ್ಜರಿ ಯಶಸ್ಸಿನ ನಂತರ ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸರಾಜು ಅವರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ʻಬೃಂದಾ ವಿಹಾರಿʼ ಸಿನಿಮಾವು ಇದೇ ಅಕ್ಟೋಬರ್‌ 16ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ಗೆ ಮೊದಲ ಬಾರಿಗೆ ಜೋಡಿಯಾದ ಸಲಗ ಸುಂದರಿ ಸಂಜನಾ ಆನಂದ್‌; ಯಾವುದು ಆ ಸಿನಿಮಾ?

ವಿರಾಟ್ ಸಾಯಿ ಕ್ರಿಯೇಷನ್ಸ್ ಅರ್ಪಿಸುವ ಈ ಹೈ-ಬಜೆಟ್ ಚಿತ್ರವನ್ನು ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್ ಅತ್ಯಂತ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ʻಬೃಂದಾ ವಿಹಾರಿʼ ಕೂಡ ಪಕ್ಕಾ ರೊಮ್ಯಾಂಟಿಕ್ ಕೌಟುಂಬಿಕ ಜಾನರ್‌ನ ಚಿತ್ರವಾಗಿದ್ದು, ಗಣೇಶ್ ಅವರಿಗೆ ಜೋಡಿಯಾಗಿ ದೇವಿಕಾ ಭಟ್ ಮತ್ತು ಮಾಳವಿಕ ಶರ್ಮ ನಾಯಕಿಯರಾಗಿ ನಟಿಸಿದ್ದಾರೆ. ಸ್ವತಃ ನಿರ್ದೇಶಕ ಶ್ರೀನಿವಾಸರಾಜು ಅವರೇ ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿದ್ದು, ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ದಕ್ಷಿಣ ಭಾರತ ಚಿತ್ರರಂಗದ ಸದ್ಯದ ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್, ಮಲಯಾಳಂ ಮೂಲದ ಹೇಶಮ್ ಅಬ್ದುಲ್ ವಹಾಬ್ ಅವರನ್ನು ಬೃಂದಾ ವಿಹಾರಿ ಚಿತ್ರಕ್ಕಾಗಿ ಕನ್ನಡಕ್ಕೆ ಕರೆತರಲಾಗಿದೆ. ಈಗಾಗಲೇ ಹಲವು ಬ್ಲಾಕ್‌ಬಸ್ಟರ್ ಮತ್ತು ಸುಮಧುರ ಹಾಡುಗಳನ್ನು ನೀಡಿರುವ ಹೇಶಮ್ ಅವರು ʻಬೃಂದಾ ವಿಹಾರಿʼ ಚಿತ್ರಕ್ಕಾಗಿ ಸಂಯೋಜಿಸಿರುವ ಹಾಡುಗಳು ಈಗಾಗಲೇ ದೊಡ್ಡ ಹಿಟ್ ಆಗಿವೆ.