ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಪಿಚ್ಚರ್' ಚಿತ್ರಕ್ಕಾಗಿ ಗಾಯಕಿಯಾದ ಶಿಲ್ಪಾ ಗಣೇಶ್; ಮೊದಲ ಪ್ರಯತ್ನದಲ್ಲೇ ಕನ್ನಡ-ತುಳು ಹಾಡಿಗೆ ʻಗೋಲ್ಡನ್ ಸ್ಟಾರ್‌ʼ ಪತ್ನಿ ಧ್ವನಿ

ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ʻಗೋಲ್ಡನ್ ಮೂವೀಸ್ʼ ಬ್ಯಾನರ್‌ ಅಡಿಯಲ್ಲಿ ನಿರ್ಮಿಸಿರುವ 'ಪಿಚ್ಚರ್' ಚಿತ್ರದ ಮೂಲಕ ಗಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. 'ಗೋಕುಲದ ರಾಧೆ' ಎಂಬ ಹಾಡನ್ನು ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ಹಾಡುವ ಮೂಲಕ ತಮ್ಮ ಗಾಯನ ಪ್ರತಿಭೆಯನ್ನು ಮೆರೆದಿದ್ದಾರೆ.

ಗೋಲ್ಡನ್ ಮೂವೀಸ್ ಲಾಂಛನದಲ್ಲಿ ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ಕನ್ನಡ ಹಾಗೂ ತುಳುವಿನಲ್ಲಿ ನಿರ್ಮಿಸಿರುವ ಚಿತ್ರ ʻಪಿಚ್ಚರ್ʼ. ಸಂದೀಪ ಬೆದ್ರ ನಿರ್ದೇಶನದ ಈ ಚಿತ್ರದ ನಾಯಕರಾಗಿ ನಿತ್ಯಪ್ರಕಾಶ್ ಬಂಟ್ವಾಳ್ ನಟಿಸಿದ್ದಾರೆ. ವಿಶೇಷವೆಂದರೆ, ನಿರ್ಮಾಪಕಿ ಶಿಲ್ಪಾ ಗಣೇಶ್ ಅವರೇ ಈ ಚಿತ್ರದ ʻಗೋಕುಲದ ರಾಧೆ..ʼ ಎಂಬ ಹಾಡನ್ನು ಕನ್ನಡ ಹಾಗೂ ತುಳು ಎರಡು ಭಾಷೆಗಳಲ್ಲೂ ಹಾಡಿದ್ದಾರೆ. ಈ ಮೂಲಕ ನಿರ್ಮಾಪಕಿಯಾಗಿದ್ದ ಶಿಲ್ಪಾ ಗಣೇಶ್ ಅವರು ಈಗ ಗಾಯಕಿಯಾಗಿ ಚಿತ್ರರಂಗದಲ್ಲಿ ಬಡ್ತಿ ಪಡೆದುಕೊಂಡಿದ್ದಾರೆ.

ಶಿಲ್ಪಾ ಗಣೇಶ್ ಜೊತೆಗೆ ಜಸ್ಕರನ್ ಸಿಂಗ್ ಕೂಡ ಹಾಡಿಗೆ ಧ್ವನಿಯಾಗಿದ್ದಾರೆ. ಕನ್ನಡ ವರ್ಷನ್‌ಗೆ ಅರಸು ಅಂತಾರೆ ಹಾಗೂ ತುಳು ವರ್ಷನ್‌ಗೆ ಕೀರ್ತನ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಸ್ಯಾಮ್ಯುಯೆಲ್ ಅಭಿ ಸಂಗೀತ ನೀಡಿದ್ದಾರೆ. ಕಾಶ್ಮೀರದಲ್ಲಿ ಈ ಹಾಡಿನ ಚಿತ್ರೀಕರಣವಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ 20 ವರ್ಷ ಪೂರೈಸಿದ ನಟ ಗಣೇಶ್; ʻಇದು ಕೇವಲ ಆರಂಭವಷ್ಟೇ..ʼ ಎಂದು ʻಗೋಲ್ಡನ್ ಸ್ಟಾರ್ʼ ಹೇಳಿದ್ಯಾಕೆ?

ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮನೋರಂಜನೆಯೇ ಪ್ರಧಾನವಾಗಿದ್ದು, ನಿರ್ದೇಶಕ ಸಂದೀಪ್ ಬೆದ್ರ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸಂತೋಷ್ ರೈ ಪಾತಾಜೆ ಹಾಗೂ ಚಂದ್ರಶೇಖರ್. ಕೆ. ಎಸ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ನಾನು ಹಾಡುವುದಕ್ಕೆ ಸಂಗೀತ ನಿರ್ದೇಶಕರು ಕಾರಣ

ʻಗೋಕುಲದ ರಾಧೆ..ʼ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದಕ್ಕೆ ಖುಷಿಯಾಗಿರುವ ಶಿಲ್ಪಾ ಗಣೇಶ್, "ಸ್ಯಾಮ್ಯುಯೆಲ್ ಅಬಿ ಅವರು ಈ ಹಾಡನ್ನು ಹಾಡಲು ಪ್ರಯತ್ನಿಸುವಂತೆ ನನ್ನನ್ನು ಪ್ರೋತ್ಸಾಹಿಸಿದರು. ನಾನು ಈ ಹಾಡನ್ನು ಹಾಡಬಲ್ಲೆ ಎಂಬ ನಂಬಿಕೆ ಅವರಿಗಿತ್ತು. ನನ್ನ ಪತಿ (ನಟ ಗಣೇಶ್) ಅವರಿಗೆ ನಾನು ಹಾಡಬಲ್ಲೆ ಎಂಬುದು ಮೊದಲೇ ತಿಳಿದಿತ್ತು, ನಾನು ಈ ಪ್ರಯತ್ನ ಮಾಡಿದ್ದಕ್ಕೆ ಅವರಿಗೂ ಸಂತೋಷವಾಗಿದೆ. ಆದರೆ, ಹಾಡನ್ನು ಕೇಳಿದ ಪ್ರೇಕ್ಷಕರು ಅಚ್ಚರಿಗೊಂಡಿರುವುದು ನನ್ನನ್ನು ತುಸು ಭಾವುಕಳನ್ನಾಗಿಸಿದೆ" ಎಂದು ಹೇಳುತ್ತಾರೆ.

ಇದೇ ಸಂದರ್ಭದಲ್ಲಿ ತಮ್ಮ ಮಗಳು ಚಾರಿತ್ರ್ಯ ಕೂಡ ಉತ್ತಮ ಗಾಯಕಿ ಎಂಬುದನ್ನು ಶಿಲ್ಪಾ ಬಹಿರಂಗಪಡಿಸಿದ್ದು, ಮುಂದೊಂದು ದಿನ ಗಣೇಶ್ ಅಭಿನಯದ ಸಿನಿಮಾದಲ್ಲಿ ಆಕೆ ಹಾಡಬಹುದು ಎಂದಿದ್ದಾರೆ.

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್ 2025: ಶಿವರಾಜಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ; ವಿಜಯ್ ಅತ್ಯುತ್ತಮ ನಿರ್ದೇಶಕ, ಗಣೇಶ್ ಅತ್ಯುತ್ತಮ ನಟ

ಜಸ್ಕರನ್ ಸಿಂಗ್ ಅವರೊಂದಿಗೆ ಹಾಡಿರುವ ಬಗ್ಗೆ ಮಾತನಾಡಿದ ಶಿಲ್ಪಾ, "ಜಸ್ಕರನ್ ಸಿಂಗ್ ಅವರು ಅದ್ಭುತ ಗಾಯಕ. ಅವರ ಧ್ವನಿಗೆ ಸರಿ ಹೊಂದುವಂತೆ ಹಾಡುವುದು ಸವಾಲಾಗಿತ್ತು, ಆದರೆ ಅದು ತುಂಬಾ ಸ್ಫೂರ್ತಿದಾಯಕವಾಗಿತ್ತು" ಎಂದು ಹೇಳಿದ್ದಾರೆ.

‌ʻಪಿಚ್ಚರ್ʼ ಸಿನಿಮಾದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ್ ಹೀರೋ ಆಗಿದ್ದು, ನಾಯಕಿಯಾಗಿ ಅಮೃತಾ ಸುದು ಅಭಿನಯಿಸಿದ್ದಾರೆ. ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ, ವಜ್ರಧೀರ್ ಜೈನ್, ಸದಾಶಿವ ಅಮಿನ್, ಪ್ರಸನ್ನ ಶೆಟ್ಟಿ ಬೈಲೂರ್, ಸಂದೀಪ್ ಶೆಟ್ಟಿ ಮಾಣಿ, ಉಮೇಶ್ ಮಿಜಾರ್, ಜಯಶೀಲ ಮರೊಲಿ, ರೂಪ ವರ್ಕಾಡಿ, ರವಿ ರಾಮಕುಂಜ, ಪುಷ್ಪರಾಜ್ ಬೊಳಾರ್, ಅನಿಲ್ ಉಪ್ಪಳ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.