Gulshan Devaiah: ಶಾರುಖ್ ಖಾನ್ ಆಯೋಜಿಸಿದ ಪಾರ್ಟಿ ಮುಜುಗರ ನೀಡಿತ್ತು ಎಂದ ನಟ ಗುಲ್ಶನ್ ದೇವಯ್ಯ
ಇತ್ತೀಚೆಗೆ ತೆರೆಕಂಡ ʼಕಾಂತಾರ: ಚಾಪ್ಟರ್ 1ʼ ಚಿತ್ರದ ಕುಲಶೇಖರ ಪಾತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ ನಟ ಗುಲ್ಶನ್ ದೇವಯ್ಯ ಸಂದರ್ಶನವೊಂದರಲ್ಲಿ ಸಿನಿಮಾ ಬಗ್ಗೆ ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ಮುಂಬೈಯ ಬಾಂದ್ರಾದಲ್ಲಿರುವ ಶಾರುಖ್ ಖಾನ್ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದ ಸಂದರ್ಭ ತನಗೆ ಭಾರಿ ಮುಜುಗರ ಆಗಿತ್ತು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

Gulshan Devaiah -

ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರದ ಕುಲಶೇಖರ ಪಾತ್ರದಲ್ಲಿ ಕನ್ನಡಕ್ಕೆ ಪದಾರ್ಪಣೆ ಮಾಡಿದ ನಟ ಗುಲ್ಶನ್ ದೇವಯ್ಯ (Gulshan Devaiah) ಸಂದರ್ಶನವೊಂದರಲ್ಲಿ ಸಿನಿಮಾ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮುಂಬೈಯ ಬಾಂದ್ರಾದಲ್ಲಿರುವ ಶಾರುಖ್ ಖಾನ್ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದ ಸಂದರ್ಭ ತನಗೆ ಭಾರಿ ಮುಜುಗರ ಆಗಿತ್ತು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
ನಟ ಗುಲ್ಶನ್ ದೇವಯ್ಯ ಮುಂಬೈಯ ಬಾಂದ್ರಾದಲ್ಲಿರುವ ಶಾರುಖ್ ಖಾನ್ ಅವರ ನಿವಾಸ 'ಮನ್ನತ್'ನಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಈ ಕಾರ್ಯಕ್ರಮಕ್ಕೆ ಶಾರುಖ್ ಮತ್ತು ಗೌರಿ ಖಾನ್ ಅತಿಥಿಗಳಿಗೆ ಅತ್ಯಂತ ಆತ್ಮೀಯವಾಗಿ ಸ್ವಾಗತ ನೀಡಿದರೂ, ತನಗೆ 'ಅಸಹಾಯಕ' ಭಾವನೆ ಮೂಡಿತ್ತು ಎನ್ನುವುದಾಗಿ ಅವರು ಹೇಳಿಕೊಂಡಿದ್ದಾರೆ.
ಇದನ್ನು ಓದಿ:BRAT Movie: ಡಾರ್ಲಿಂಗ್ ಕೃಷ್ಣ ಅಭಿನಯದ ʼಬ್ರ್ಯಾಟ್ʼ ಚಿತ್ರದ ಟ್ರೇಲರ್ ಔಟ್
ʼʼ2012ರಲ್ಲಿ ಫಿಲ್ಮ್‌ಫೇರ್ ನಾಮ ನಿರ್ದೇಶನ ಘೋಷಿಸುವ ಸಂದರ್ಭದಲ್ಲಿ ಶಾರುಖ್ ಖಾನ್ ಕೂಡ ಹಾಜರಿದ್ದರು. ಆ ಸಮಯದಲ್ಲಿ ಶಾರುಖ್, ಅನುರಾಗ್ ಕಶ್ಯಪ್ ಮತ್ತು ಕಲ್ಕಿ ಕೋಚ್ಲಿನ್ ಒಟ್ಟಿಗೆ ಕುಳಿತಿದ್ದರು. ಆಗ ಶಾರುಖ್ ಖಾನ್ ಸ್ವತಃ ಬಂದು ನನ್ನನ್ನು 'ಮನ್ನತ್'ನಲ್ಲಿ ನಡೆಯುವ ಪಾರ್ಟಿಗೆ ಆಹ್ವಾನಿಸಿದ್ದರು. ಜತೆಗೆ ಪತ್ನಿಯನ್ನು ಸಹ ಕರೆದುಕೊಂಡು ಬರುವಂತೆ ಹೇಳಿದ್ದರುʼʼ ಎಂದು ಗುಲ್ಶನ್ ವಿವರಿಸಿದ್ದಾರೆ.
ಪಾರ್ಟಿ ಬಗ್ಗೆ ಮಾತನಾಡಿದ ಗುಲ್ಶನ್, "ನಾನು ಅಲ್ಲಿ ಸುಮಾರು ಮೂರು ಗಂಟೆಗಳ ಕಾಲ ಇದ್ದೆ. ಮತ್ತು ಇಡೀ ಸಮಯ ನನಗೆ ತುಂಬಾ ಅಸಹಾಯಕತೆ ಕಾಡುತ್ತಿತ್ತು. ನನಗೆ ಅಲ್ಲಿ ಕಂಫರ್ಟ್ ಇರಲಿಲ್ಲ. ನಾನು ಅಲ್ಲಿಗೆ ಸೇರಿದವನಲ್ಲ ಎಂದು ನನಗೆ ಅನಿಸಿತುʼʼ ಎಂದಿದ್ದಾರೆ. ಕರಣ್ ಜೋಹರ್, ಫರ್ಹಾನ್ ಅಖ್ತರ್, ವಿಧು ವಿನೋದ್ ಚೋಪ್ರಾ ಸೇರಿದಂತೆ ಎಲ್ಲರೂ ಅಲ್ಲಿದ್ದರು ಎಂದು ವಿವರಿಸಿದ್ದಾರೆ.
ʼʼಶಾರುಖ್ ಮತ್ತು ಗೌರಿ ನನ್ನೊಂದಿಗೆ ತುಂಬಾ ಒಳ್ಳೆಯ ರೀತಿ ಇದ್ದರು. ಆದರೆ ನನಗೆ ಆರಾಮದಾಯಕ ಎನಿಸುವಂತೆ ಮಾಡುವುದು ಅವರ ಕೆಲಸವಾಗಿರಲಿಲ್ಲʼʼ ಎಂದು ಗುಲ್ಶನ್ ಹೇಳಿದರು. ಪಾರ್ಟಿಯಲ್ಲಿ ಅವರು ಹೆಚ್ಚು ಮಾತನಾಡಿದ್ದು ಆಸ್ಟ್ರೇಲಿಯಾದ ನಟ ಜೋಯಲ್ ಎಡ್ಗರ್ಟನ್ ಅವರೊಂದಿಗೆ. "ಅವರು ನನಗೆ ಸುಲಭವಾಗಿ ಮಾತುಕತೆ ನಡೆಸಲು ಸಿಕ್ಕರು. ಬಹುಶಃ, ಜೋಯಲ್ ಕೂಡ ಆ ಪಾರ್ಟಿಗೆ ಹೊರಗಿನವರೇ ಆಗಿದ್ದರಿಂದ ನನಗೆ ಅವರ ಬಳಿ ಆತ್ಮೀಯತೆ ಸಿಕ್ಕಿತು" ಎಂದು ಗುಲ್ಶನ್ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.