ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರವಿಚಂದ್ರನ್‌, ಕಾಶೀನಾಥ್‌ ಸೇರಿ ಸ್ಯಾಂಡಲ್‌ವುಡ್‌ ಹೀರೋಗಳಿಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದ ಕೆ. ಭಾಗ್ಯರಾಜ್‌ ಸಿನಿಮಾಗಳು; ಇಲ್ಲಿದೆ ರಿಮೇಕ್‌ ಚಿತ್ರಗಳ ಲಿಸ್ಟ್!‌

ತಮಿಳು ಚಿತ್ರರಂಗದ ಪ್ರಖ್ಯಾತ ನಟ, ನಿರ್ದೇಶಕ ಹಾಗೂ ‘ಕಿಂಗ್ ಆಫ್ ಸ್ಕ್ರೀನ್‌ಪ್ಲೇ’ ಎಂದೇ ಖ್ಯಾತರಾಗಿದ್ದ ಕೆ. ಭಾಗ್ಯರಾಜ್ ನಿಧನರಾಗಿದ್ದಾರೆ. ಮಧ್ಯಮ ವರ್ಗದ ಕೌಟುಂಬಿಕ ಹಾಗೂ ಹಾಸ್ಯ ಪ್ರಧಾನ ಕಥೆಗಳ ಮೂಲಕ ದಕ್ಷಿಣ ಭಾರತದಲ್ಲಿ ಹೊಸ ಅಲೆ ಎಬ್ಬಿಸಿದ್ದ ಇವರ ಚಿತ್ರಗಳು ಸ್ಯಾಂಡಲ್‌ವುಡ್‌ನ ಹತ್ತಾರು ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಮೂಲ ಪ್ರೇರಣೆಯಾಗಿದ್ದವು.

ತಮಿಳು ಚಿತ್ರರಂಗದಲ್ಲಿ ಕಿಂಗ್‌ ಆಫ್‌ ಸ್ಕ್ರೀನ್‌ಪ್ಲೇ ಎಂದೇ ಫೇಮಸ್‌ ಆಗಿದ್ದ ಖ್ಯಾತ ನಿರ್ದೇಶಕ, ನಟ ಕೆ. ಭಾಗ್ಯರಾಜ್‌ ಅವರು ನಿಧನರಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿದ್ದ ಅವರು ಸಾಕಷ್ಟು ಹೀರೋಗಳಿಗೆ ಲೈಫ್‌ ನೀಡಿದ್ದಾರೆ. ಅವರು ಕೂಡ ಹೀರೋ ಆಗಿ ಮಿಂಚಿದ್ದಾರೆ. ಭಾಗ್ಯರಾಜ್ ಅವರ ಚಿತ್ರಗಳ ಪ್ರಮುಖ ಶಕ್ತಿ ಹಾಸ್ಯ, ಮಧ್ಯಮ ವರ್ಗದ ಕುಟುಂಬಗಳು, ಹಳ್ಳಿಯ ಮುಗ್ಧ ಪರಿಸರ, ಮದುವೆ, ಪ್ರೀತಿ ಮತ್ತು ಕೌಟುಂಬಿಕ ಸಮಸ್ಯೆಗಳನ್ನೇ ಮುಖ್ಯ ಕಥಾವಸ್ತು. ಇವರ ಸಿನಿಮಾಗಳಲ್ಲಿ ಯಾವುದೇ ಅತಿರಂಜಿತ ಸಾಹಸ ಅಥವಾ ಅದ್ದೂರಿತನ ಇರುತ್ತಿರಲಿಲ್ಲ. ಪ್ರೇಕ್ಷಕರಿಗೆ ತಮ್ಮನ್ನೇ ತಾವು ಚಿತ್ರದ ಪಾತ್ರಗಳಲ್ಲಿ ನೋಡಿಕೊಳ್ಳುವಂತಹ ಫೀಲ್‌ ನೀಡುತ್ತಿದ್ದರು ಭಾಗ್ಯರಾಜ್‌.

ಇಂತಹ ಭಾಗ್ಯರಾಜ್‌ ನಿರ್ದೇಶಿಸಿದ್ದ ತಮಿಳಿನ ಕೆಲವು ಸಿನಿಮಾಗಳು ಕನ್ನಡಕ್ಕೂ ರಿಮೇಕ್‌ ಆಗಿದ್ದವು. ಮುಖ್ಯವಾಗಿ ರವಿಚಂದ್ರನ್‌, ಕಾಶೀನಾಥ್‌, ಎಸ್‌. ನಾರಾಯಣ್‌ ಮುಂತಾದ ನಟರು ಭಾಗ್ಯರಾಜ್‌ ಸಿನಿಮಾಗಳನ್ನು ರಿಮೇಕ್‌ ಮಾಡಿ ಗೆಲುವು ಕಂಡರು. ಅದರಲ್ಲೂ ರವಿಚಂದ್ರನ್‌ ಅವರ ಆಲ್‌ಟೈಮ್‌ ಸೂಪರ್‌ ಹಿಟ್‌ ಸಿನಿಮಾಗಳಿಗೆ ಭಾಗ್ಯರಾಜ್‌ ಅವರ ಚಿತ್ರಗಳೇ ಕಾರಣ. ಹೀಗೆ ಕನ್ನಡಕ್ಕೆ ರಿಮೇಕ್‌ ಆದ ಭಾಗ್ಯರಾಜ್‌ ಅವರ ಸಿನಿಮಾಗಳ ಲಿಸ್ಟ್‌ ಇಲ್ಲಿದೆ ನೋಡಿ.

ಅಳಿಯ ಅಲ್ಲ ಮಗಳ ಗಂಡ (1997)

1997ರಲ್ಲಿ ಬಿಡುಗಡೆಯಾದ 'ಅಳಿಯ ಅಲ್ಲ ಮಗಳ ಗಂಡ' ಸಿನಿಮಾದಲ್ಲಿ 'ನವರಸ ನಾಯಕ' ಜಗ್ಗೇಶ್ ಮತ್ತು ಉದಯ ಭಾನುನಟಿಸಿದ್ದು, ಈ ಚಿತ್ರವನ್ನು ವೈ. ಯೇಸುದಾಸ್ ಅವರು ನಿರ್ದೇಶಿಸಿದ್ದಾರೆ. ಇದು ತಮಿಳಿನ ಕೆ. ಭಾಗ್ಯರಾಜ್ ಬರೆದು, ನಿರ್ದೇಶಿಸಿದ್ದ ಸೂಪರ್ ಹಿಟ್ ಚಿತ್ರ 'ಇದು ನಮ್ಮ ಆಳು'ನ ಅಧಿಕೃತ ರಿಮೇಕ್‌ ಆಗಿದೆ.

ರವಿಶಾಸ್ತ್ರಿ (2006)

ಭಾಗ್ಯರಾಜ್‌ ಪ್ರಭಾವ ಕನ್ನಡ ಸಿನಿಮಾಗಳ ಮೇಲೆ ಎಂತಹ ಪ್ರಭಾವ ಬೀರಿತ್ತೆಂದರೆ, 1997ರಲ್ಲಿ 'ಅಳಿಯ ಅಲ್ಲ ಮಗಳ ಗಂಡ' ಹೆಸರಿನಲ್ಲಿ ರಿಮೇಕ್‌ ಆದ 'ಇದು ನಮ್ಮ ಆಳು' ಸಿನಿಮಾವನ್ನು ಪುನಃ ರವಿಶಾಸ್ತ್ರಿ ಹೆಸರಿನಲ್ಲಿ ರವಿಚಂದ್ರನ್‌ ಇನ್ನೊಮ್ಮೆ ರಿಮೇಕ್‌ ಮಾಡಿದರು. ಹೀಗೆ ಭಾಗ್ಯರಾಜ್‌ ಅವರ ಒಂದೇ ಸಿನಿಮಾ ಕನ್ನಡಲ್ಲಿ ಎರಡು ಭಾರಿ ರಿಮೇಕ್‌ ಆಗಿದೆ. 'ರವಿಶಾಸ್ತ್ರಿ' ಸಿನಿಮಾವನ್ನು ಎಂ. ಎಸ್. ರಾಜಶೇಖರ್ ಮತ್ತು ಎಂ. ಆರ್. ರಾಘವೇಂದ್ರ ನಿರ್ದೇಶನ ಮಾಡಿದ್ದರು. ರವಿಚಂದ್ರನ್ ಅವರಿಗೆ ನಟಿ ಸ್ನೇಹಾ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ಅಣ್ಣಯ್ಯ (1993)

1993ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್ 'ಅಣ್ಣಯ್ಯ' ಸಿನಿಮಾದಲ್ಲಿ ರವಿಚಂದ್ರನ್‌ ಮತ್ತು ಮಧುಬಾಲಾ ಮುಖ್ಯಭೂಮಿಕೆಯಲ್ಲಿದ್ದರು. ಡಿ. ರಾಜೇಂದ್ರ ಬಾಬು ನಿರ್ದೇಶನದ ಈ ಚಿತ್ರವು ಭಾಗ್ಯರಾಜ್‌ ಅವರ ಎಂಗ ಚಿನ್ನ ರಾಸಾ ಸಿನಿಮಾದ ರಿಮೇಕ್‌. ಈ ಸಿನಿಮಾಗೆ ಹಂಸಲೇಖ ಅವರ ಸಂಗೀತ ನಿರ್ದೇಶನವಿದ್ದು, ಈ ಚಿತ್ರದ ಪ್ರತಿಯೊಂದು ಹಾಡುಗಳೂ ಸಾರ್ವಕಾಲಿಕ ಹಿಟ್ ಆಗಿದ್ದವು. ಶ್ರೀನಾಥ್, ಅರುಣಾ ಇರಾನಿ, ಸಂಕೇತ್‌ ಕಾಶಿ, ಧೀರೇಂದ್ರ ಗೋಪಾಲ್‌, ಆಶಾಲತಾ ಮುಂತಾದವರು ನಟಿಸಿದ್ದರು.

ಹಳ್ಳಿ ಮೇಷ್ಟ್ರು (1992)

1992ರಲ್ಲಿ ತೆರೆಕಂಡು ರವಿಚಂದ್ರನ್‌ ನಟನೆಯ ʻಹಳ್ಳಿ ಮೇಷ್ಟ್ರುʼ ಸಿನಿಮಾಗೆ ಮಂಜು-ಮೋಹನ್‌ ನಿರ್ದೇಶನ ಮಾಡಿದ್ದರು. ಬಿಂದಿಯಾ ನಾಯಕಿಯಾಗಿದ್ದ ಈ ಸಿನಿಮಾಗೆ ಹಂಸಲೇಖ ಸಂಗೀತ ನೀಡಿದ್ದರು. ʻಹಳ್ಳಿ ಮೇಷ್ಟ್ರುʼ ಸಿನಿಮಾದ ಗೆಲುವಿಗೆ ಹಾಡುಗಳು ದೊಡ್ಡ ಕೊಡುಗೆ ನೀಡಿದ್ದರು. ಅಂದಹಾಗೆ, ʻಹಳ್ಳಿ ಮೇಷ್ಟ್ರುʼ ಚಿತ್ರವು ಕೆ. ಭಾಗ್ಯರಾಜ್ ನಿರ್ದೇಶನದ ಸೂಪರ್ ಹಿಟ್ ತಮಿಳು ಚಲನಚಿತ್ರ 'ಮುಂಧನೈ ಮುಡಿಚು' ಚಿತ್ರದ ರಿಮೇಕ್ ಆಗಿತ್ತು.

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಭಾಗ್ಯರಾಜ್ ಹೃದಯಾಘಾತದಿಂದ ನಿಧನ

ಮನೆ ದೇವ್ರು (1993)

1993ರಲ್ಲಿ ಬಂದ ʻಮನೆ ದೇವ್ರುʼ ಚಿತ್ರವನ್ನು ವಿ. ರವಿಚಂದ್ರನ್ ಅವರೇ ನಿರ್ದೇಶಿಸಿ, ನಾಯಕರಾಗಿಯೂ ನಟಿಸಿದ್ದು, ಸುಧಾರಾಣಿ ಜೋಡಿಯಾಗಿದ್ದರು. ಈ ಸೂಪರ್ ಹಿಟ್ ಸಿನಿಮಾಗೆ ಹಂಸಲೇಖ ಸಂಗೀತ ನೀಡಿದ್ದರು. ಕೆ. ಎಸ್. ಅಶ್ವಥ್‌, ಟೆನ್ನಿಸ್ ಕೃಷ್ಣ, ಡಿಸ್ಕೋ ಶಾಂತಿ, ಸತ್ಯಜಿತ್, ಉಮೇಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಇದು ಕೆ. ಭಾಗ್ಯರಾಜ್ ನಿರ್ದೇಶನದ ತಮಿಳು ಚಿತ್ರ 'ಮೌನ ಗೀತೆಗಳ್' ಸಿನಿಮಾದ ರಿಮೇಕ್ ಆಗಿದೆ.

ಚಪಲ ಚೆನ್ನಿಗರಾಯ (1990)

1990ರಲ್ಲಿ ತೆರೆಕಂಡ ʻಚಪಲ ಚೆನ್ನಿಗರಾಯʼ ಸಿನಿಮಾದಲ್ಲಿ ನಟ ಕಾಶೀನಾಥ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಭಾರಿ ಯಶಸ್ಸು ಕಂಡ ಈ ಸಿನಿಮಾವು ಭಾಗ್ಯರಾಜ್‌ ಅವರ ʻಚಿನ್ನ ವೀಡುʼ ಚಿತ್ರದ ರಿಮೇಕ್.‌ ಎಚ್.ಆರ್. ಭಾರ್ಗವ ನಿರ್ದೇಶಿಸಿದ್ದ ಈ ಸಿನಿಮಾಗೆ ರಾಜನ್‌ ನಾಗೇಂದ್ರ ಸಂಗೀತ ನೀಡಿದ್ದರು. ಮಲಯಾಳಂ ನಟಿ ಕಲ್ಪನಾ, ವನಿತಾ ವಾಸು, ಸುಂದರ್ ಕೃಷ್ಣ ಅರಸ್‌, ಡಿಂಗ್ರಿ ನಾಗರಾಜ್‌, ಶನಿ ಮಹದೇವಪ್ಪ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು.

ಲವ್ ಮಾಡಿ ನೋಡು (1989)

1989ರಲ್ಲಿ ಬಿಡುಗಡೆಯಾದ ʻಲವ್ ಮಾಡಿ ನೋಡುʼ ಸಿನಿಮಾದಲ್ಲಿ ನಟ ಕಾಶೀನಾಥ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ, ಈ ಸಿನಿಮಾಗೆ ನಟ ಉಪೇಂದ್ರ ಸಹಾಯಕ ನಿರ್ದೇಶಕರಾಗಿ ಹಾಗೂ ಸಂಭಾಷಣೆಗಾರರಾಗಿ ಕೆಲಸ ಮಾಡಿದ್ದರು. ನಿರ್ದೇಶನ ಮತ್ತು ನಿರ್ಮಾಣವನ್ನು ಎ. ಸುಬ್ರಮಣ್ಯಂ ಎಂಬುವವರು ಮಾಡಿದ್ದರು. ಮಂಗಳೂರು ಮಂಜುನಾಥನ ಪಾತ್ರದಲ್ಲಿ ಎಂಬ ಪಾತ್ರದಲ್ಲಿ ಕಾಶೀನಾಥ್ ಕಾಣಿಸಿಕೊಂಡರೆ, ಮಂಜುನಾಥನ ಸಹಾಯಕ ಗೋಪಿ ಪಾತ್ರದಲ್ಲಿ ಮಾಸ್ಟರ್ ಮಂಜುನಾಥ್ ಮಿಂಚಿದ್ದರು. ಇದು ಕೆ. ಭಾಗ್ಯರಾಜ್ ನಿರ್ದೇಶನದ 'ಅಂದ 7 ನಾಟ್ಕಳ್' (1981) ಸಿನಿಮಾದ ರಿಮೇಕ್ ಆಗಿದೆ.

ವಿಶಾಲಾಕ್ಷಮ್ಮನ ಗಂಡ (2001)

'ವಿಶಾಲಾಕ್ಷಮ್ಮನ ಗಂಡ' ಸಿನಿಮಾವು 2001 ರಲ್ಲಿ ಬಿಡುಗಡೆಯಾ ಆಗಿತ್ತು. ಈ ಚಿತ್ರವು ಕೆ. ಭಾಗ್ಯರಾಜ್‌ ಅವರ 'ವತ್ತಿಯ ಮಡಿಚು ಕಟ್ಟು' (1998) ಸಿನಿಮಾದ ರಿಮೇಕ್‌ ಆಗಿದೆ. ಎಸ್. ನಾರಾಯಣ್ ಹೀರೋ ಆಗಿದ್ದರೆ, ಅನು ಪ್ರಭಾಕರ್ ನಾಯಕಿಯಾಗಿದ್ದರು. ಮಾಸ್ಟರ್ ಪಂಕಜ್, ದೊಡ್ಡಣ್ಣ, ಶೋಭರಾಜ್, ಜೈ ಜಗದೀಶ್ ಮತ್ತು ಪ್ರಮೀಳಾ ಜೋಷಾಯ್ ಮುಂತಾದವರು ನಟಿಸಿದ್ದರು. ರಾಜ್ ಕಿಶೋರ್ ಈ ಸಿನಿಮಾದ ನಿರ್ದೇಶಕ.

ಬಾನಲ್ಲು ನೀನೆ ಭುವಿಯಲ್ಲೂ ನೀನೆ (2001)

2001 ರಲ್ಲಿ ಬಿಡುಗಡೆಯಾದ 'ಬಾನಲ್ಲು ನೀನೆ ಭುವಿಯಲ್ಲೂ ನೀನೆ' ಸಿನಿಮಾವನ್ನು ಎಸ್. ನಾರಾಯಣ್ ನಿರ್ದೇಶಿಸಿದ್ದರು ಮತ್ತು ಹೀರೋ ಆಗಿಯೂ ನಟಿಸಿದ್ದರು. ಈ ಚಿತ್ರದಲ್ಲಿ ಶಶಿಕುಮಾರ್, ದಿವ್ಯಾ ಉನ್ನಿ, ರೇಖಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದು ಭಾಗ್ಯರಾಜ್‌ ಅವರ ʻವೀಟ್ಲಾ ವಿಶೇಷಾಂಗʼ ಚಿತ್ರದ ರಿಮೇಕ್‌.

ಸುಂದರ ಕಾಂಡ (2001)

2001ರಲ್ಲಿ ಬಿಡುಗಡೆಯಾದ 'ಸುಂದರಕಾಂಡ' ಸಿನಿಮಾವನ್ನು ಎಂ. ಎಸ್. ರಾಜಶೇಖರ್ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್, ರೋಜಾ ಸೆಲ್ವಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಶಿವರಾಮ್, ರಮೇಶ್ ಭಟ್, ಹೊನ್ನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ, ಮಂಡ್ಯ ರಮೇಶ್, ಎಂ. ಎನ್. ಲಕ್ಷ್ಮೀದೇವಿ, ಪದ್ಮಾವಾಸಂತಿ ಬಣ್ಣ ಹಚ್ಚಿದ್ದಾರೆ. ತಮಿಳಿನ ಕೆ. ಭಾಗ್ಯರಾಜ್ ಅವರ 'ಸುಂದರ ಕಾಂಡಂ' (1992) ಚಿತ್ರದ ರಿಮೇಕ್‌ ಇದಾಗಿದೆ.

Dr Rajkumar: ʻಪ್ರಚಾರಕ್ಕಾಗಿ ಮಾತಾಡುವವರ ಕಂಡು ಅಸಹ್ಯವಾಯಿತುʼ; ನಟ ಜಗ್ಗೇಶ್‌ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದು ಯಾರಿಗೆ?

ಜಗತ್ ಕಿಲಾಡಿ (1998)

1998 ರಲ್ಲಿ ಬಿಡುಗಡೆಯಾದ ಜಗ್ಗೇಶ್‌ ನಟನೆಯ 'ಜಗತ್ ಕಿಲಾಡಿ' ಸಿನಿಮಾವನ್ನು ಚಿಕ್ಕಣ್ಣ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಜಗ್ಗೇಶ್ ದ್ವಿಪಾತ್ರದಲ್ಲಿ ನಟಿಸಿದ್ದು, ಚಾರುಲತಾ ಮತ್ತು ಪವಿತ್ರ ಲೋಕೇಶ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇದು ಭಾಗ್ಯರಾಜ್‌ ಅವರ 'ಅವಸರ ಪೊಲೀಸ್ 100' ಎಂಬ ಚಿತ್ರದ ರಿಮೇಕ್‌ ಆಗಿದೆ. ಬಿ. ವಿ. ರಾಧಾ, ಎಂ. ಎನ್. ಲಕ್ಷ್ಮೀದೇವಿ, ಲೋಕನಾಥ್, ಸುಧೀರ್, ಸತ್ಯಜಿತ್, ಮಂಡ್ಯ ರಮೇಶ್, ಸರಿಗಮ ವಿಜಿ ಮುಂತಾದವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತೂಗುವೆ ಕೃಷ್ಣನ (1994)

1994ರಲ್ಲಿ ಬಿಡುಗಡೆಯಾದ 'ತೂಗುವೆ ಕೃಷ್ಣನ' ಸಿನಿಮಾಗೆ ವಸಂತ ಕುಣಿಗಲ್ ನಿರ್ದೇಶನ ಮಾಡಿದ್ದಾರೆ. ನಟ ಅನಂತ್ ನಾಗ್ ಮತ್ತು ಸೌಂದರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾವು ಭಾಗ್ಯರಾಜ್‌ ಅವರ ʻಆರಾರೋ ಆರಿರಾರೋʼ ಚಿತ್ರದ ರಿಮೇಕ್‌ ಆಗಿದೆ. ಪೋಷಕ ಪಾತ್ರಗಳಲ್ಲಿ ಶ್ರೀನಾಥ್, ಲೀಲಾವತಿ, ಸಿಹಿಕಹಿ ಚಂದ್ರು, ಮಿಮಿಕ್ರಿ ದಯಾನಂದ್, ವೈಜನಾಥ್ ಬಿರಾದಾರ್, ಶಂಖನಾದ ಅಂಜನಪ್ಪ ಮುಂತಾದವರು ನಟಿಸಿದ್ದಾರೆ.

ಗೌರಿ ಕಲ್ಯಾಣ (1991)

ದ್ವಾರಕೀಶ್‌ ನಿರ್ಮಿಸಿ, ನಿರ್ದೇಶನದ ʻಗೌರಿ ಕಲ್ಯಾಣʼ ಸಿನಿಮಾವು 1991ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ಮೂಲಕ ದ್ವಾರಕೀಶ್ ಅವರು ಹೊಸ ನಟ-ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಮದ್ರಾಸ್ ಮೂಲದ ಬ್ಯಾಡ್ಮಿಂಟನ್ ಆಟಗಾರ ಹರ್ಷವರ್ಧನ್ ಮತ್ತು ನಿತ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾದಲ್ಲಿ ವಜ್ರಮುನಿ, ಎಂ. ಪಿ. ಶಂಕರ್ ಕೂಡ ಬಣ್ಣ ಹಚ್ಚಿದ್ದರು. ಇದು ಕೆ. ಭಾಗ್ಯರಾಜ್ ನಿರ್ದೇಶನದ ಸೂಪರ್ ಹಿಟ್ ತಮಿಳು ಸಿನಿಮಾ 'ತೂರಲ್ ನಿನ್ನು ಪೋಚ್ಚು'ನ ರಿಮೇಕ್ ಆಗಿತ್ತು.

ಪ್ರೇಮಿ ನಂ.1 (2001)

ಪ್ರೇಮಿ ನಂ.1 ಚಿತ್ರವನ್ನು ಕೋಡಿ ರಾಮಕೃಷ್ಣ ಅವರು ನಿರ್ದೇಶಿಸಿದ್ದು, ರಮೇಶ್ ಅರವಿಂದ್ ಮತ್ತು ಪ್ರೇಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತಮಿಳಿನ ಕೆ. ಭಾಗ್ಯರಾಜ್ ನಿರ್ದೇಶಿಸಿ, ನಟಿಸಿದ್ದ 'ಡಾರ್ಲಿಂಗ್, ಡಾರ್ಲಿಂಗ್, ಡಾರ್ಲಿಂಗ್' ಸಿನಿಮಾದ ರಿಮೇಕ್ ಆಗಿತ್ತು ಪ್ರೇಮಿ ನಂ.1. ರಮೇಶ್ ಅರವಿಂದ್‌, ಪ್ರೇಮಾ, ಶ್ರೀನಾಥ್‌, ಶ್ರೀನಿವಾಸಮೂರ್ತಿ, ಕರಿಬಸವಯ್ಯ, ಮಂದೀಪ್ ರಾಯ್‌, ಲಕ್ಷ್ಮಿ ಮುಂತಾದರು ಈ ಸಿನಿಮಾದಲ್ಲಿ ನಟಿಸಿದ್ದರು.