ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡಿಸೆಂಬರ್‌ನಲ್ಲಿ ಸರಳವಾಗಿ ಹಸೆಮಣೆ ಏರಲಿರುವ ‘ಹನು-ಮಾನ್’ ಖ್ಯಾತಿಯ ತೇಜ ಸಜ್ಜಾ; ಉದಯಪುರದಲ್ಲಿ ಕಲ್ಯಾಣ ಮಹೋತ್ಸವ

Teja Sajja Wedding: ಪ್ಯಾನ್-ಇಂಡಿಯಾ ಸ್ಟಾರ್ ತೇಜ ಸಜ್ಜಾ ಅವರು ಡಿಸೆಂಬರ್‌ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ಸರಳವಾಗಿ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಪೋಷಕರು ನಿಶ್ಚಯಿಸಿರುವ ಈ ಅರೇಂಜ್ಡ್ ಮ್ಯಾರೇಜ್‌ನಲ್ಲಿ ಅಮೆರಿಕದ ಐಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವತಿಯನ್ನು ಅವರು ಮದುವೆಯಾಗಲಿದ್ದಾರೆ.

ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭರ್ಜರಿ ಯಶಸ್ಸು ಕಂಡ ‘ಹನು-ಮಾನ್’ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ನಟ ತೇಜ ಸಜ್ಜಾ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ರಾಜಸ್ಥಾನದ ಉದಯಪುರದಲ್ಲಿ ತೇಜಾ ಅವರ ವಿವಾಹ ಮಹೋತ್ಸವ ಅತ್ಯಂತ ಆಪ್ತವಾಗಿ, ಸರಳವಾಗಿ ನೆರವೇರಲಿದೆಯಂತೆ. ಅದನ್ನು ಸ್ವತಃ ತೇಜಾ ಸಜ್ಜಾ ಅವರೇ ಖಚಿತಪಡಿಸಿದ್ದಾರೆ. ನವೆಂಬರ್‌ನಲ್ಲಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯಲಿದ್ದು, ನಂತರ ಮದುವೆಯ ಸಿದ್ಧತೆಗಳು ಬಿರುಸಾಗಲಿವೆ.

ಸಿಂಪಲ್‌ ಮದುವೆ, ಹೈದರಾಬಾದ್‌ನಲ್ಲಿ ರಿಸೆಪ್ಷನ್

ಇದು ಸಂಪೂರ್ಣವಾಗಿ ಹಿರಿಯರು ನಿಶ್ಚಯಿಸಿದ ಅರೇಂಜ್ಡ್ ಮ್ಯಾರೇಜ್ ಎಂದು ಸ್ಪಷ್ಟಪಡಿಸಿರುವ ನಟ ತೇಜ ಸಜ್ಜಾ, ತಮ್ಮ ಪೋಷಕರೇ ಈ ಸಂಬಂಧ ನೋಡಿರುವುದಾಗಿ ತಿಳಿಸಿದ್ದಾರೆ. ವೃತ್ತಿಜೀವನದಲ್ಲಿ ತೆರೆಮುಂದೆ ಎಷ್ಟು ಸಕ್ರಿಯವಾಗಿದ್ದಾರೋ, ಅದೇ ರೀತಿ ತಮ್ಮ ವೈಯಕ್ತಿಕ ಬದುಕನ್ನು ಪಬ್ಲಿಸಿಟಿಯಿಂದ ದೂರ ಇಟ್ಟಿರುವ ತೇಜಾ, ಮದುವೆಯಲ್ಲೂ ಇದೇ ಸರಳತೆಯನ್ನು ಕಾಯ್ದುಕೊಳ್ಳಲು ನಿರ್ಧರಿಸಿದ್ದಾರಂತೆ.

Zombie Reddy 2 NXT LVL: ʻಹನು-ಮಾನ್‌ʼ ಖ್ಯಾತಿಯ ನಟ ತೇಜ ಸಜ್ಜಾ ಸಿನಿಮಾಗೆ ಉಪೇಂದ್ರ ಎಂಟ್ರಿ; ಮತ್ತೆ ಟಾಲಿವುಡ್‌ನಲ್ಲಿ ʻರಿಯಲ್‌ ಸ್ಟಾರ್‌ʼ ಮಿಂಚಿಂಗ್‌!

ತಾರಾ ಮೆರಗು ಮತ್ತು ಆಡಂಬರಕ್ಕೆ ಆಸ್ಪದ ನೀಡದೆ, ಕೇವಲ ಸಂಬಂಧಿಕರು ಹಾಗೂ ಆಪ್ತ ಸ್ನೇಹಿತರ ಉಪಸ್ಥಿತಿಯಲ್ಲಿ ಉದಯಪುರದಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿಯಲಿದ್ದಾರೆ. ವಿವಾಹದ ನಂತರ ಹೈದರಾಬಾದ್‌ನಲ್ಲಿ ಚಿತ್ರರಂಗದ ಗಣ್ಯರು ಹಾಗೂ ಹಿತೈಷಿಗಳಿಗಾಗಿ ಅದ್ಧೂರಿ ರಿಸೆಪ್ಷನ್ ಆಯೋಜಿಸುವ ಪ್ಲ್ಯಾನ್‌ ಇದೆ ಎನ್ನಲಾಗಿದೆ.

ತೇಜ ಸಜ್ಜಾ ಮದುವೆ ಆಗುತ್ತಿರುವ ಹುಡುಗಿ ಯಾರು?

ತಮ್ಮ ಭಾವಿ ಪತ್ನಿಯ ಕುರಿತು ಮಾಹಿತಿ ಹಂಚಿಕೊಂಡಿರುವ ನಟ ತೇಜಾ ಸಜ್ಜಾ, ನಾನು ಮದುವೆ ಆಗಲಿರುವ ಹುಡುಗಿಗೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲ. ಉದ್ಯಮದ ಕುಟುಂಬದಿಂದ ಬಂದವರು. ಅಮೆರಿಕದಲ್ಲಿ ಬೆಳೆದಿರುವ ಅವರು ಸದ್ಯ ತಮ್ಮ ತಂದೆಯೊಂದಿಗೆ ಐಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ಲಾಮರ್ ಜಗತ್ತಿನ ಯಾವುದೇ ಕನೆಕ್ಷನ್‌ ಇಲ್ಲ, ಅತ್ಯಂತ ಸರಳವಾಗಿ ಜೀವನ ನಡೆಸುತ್ತಿರುವ ಅವರ ಗುಣದಿಂದಲೇ ನಾನು ಅವರನ್ನು ಅಪಾರವಾಗಿ ಗೌರವಿಸಲು ಮತ್ತು ಇಷ್ಟಪಡಲು ಕಾರಣ" ಎಂದು ತೇಜ ಮನಬಿಚ್ಚಿ ಮಾತನಾಡಿದ್ದಾರೆ.

ಹೊಸ ಜೀವನಕ್ಕೆ ಅಡಿಯಿಡುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಭಾವಿ ಪತ್ನಿಯ ಖಾಸಗಿತನವನ್ನು ಗೌರವಿಸಿ, ಹೆಚ್ಚಿನ ವಿವರಗಳನ್ನು ಗೌಪ್ಯವಾಗಿಟ್ಟಿದ್ದಾರೆ.

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ ‘ಹನು-ಮಾನ್’ ಹಾಗೂ ‘ಮಿರಾಯ್’ ಚಿತ್ರಗಳ ಮೂಲಕ ಯಶಸ್ವಿಯಾಗಿ ಹೀರೋ ಆಗಿ ಬೆಳೆಯುತ್ತಿದ್ದಾರೆ ತೇಜ ಸಜ್ಜಾ! ಸದ್ಯ ಅವರು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ ‘ದಿ ಟ್ರೇಟರ್ಸ್ ತೆಲುಗು’ ರಿಯಾಲಿಟಿ ಶೋನ ಮೊದಲ ಸೀಸನ್ ಅನ್ನು ಯಶಸ್ವಿಯಾಗಿ ನಿರೂಪಣೆ ಮಾಡುತ್ತಿದ್ದು, ನಟನೆಯ ಜೊತೆಗೆ ನಿರೂಪಕರಾಗಿಯೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.