ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rapper Hanumankind: ಕಾಲಿವುಡ್‌ಗೆ ಕಾಲಿಟ್ಟ ಜನಪ್ರಿಯ ರ‍್ಯಾಪರ್ ಹನುಮಾನ್‌ಕೈಂಡ್; ದಳಪತಿ ವಿಜಯ್‌ ಚಿತ್ರಕ್ಕೆ ಧ್ವನಿ

Jana Nayagan Movie: ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿರುವ ಹನುಮಾನ್‌ಕೈಂಡ್ ಇದೀಗ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ದಳಪತಿ ವಿಜಯ್‌ ನಟಿಸುತ್ತಿರುವ ಕೊನೆಯ ಚಿತ್ರ 'ಜನ ನಾಯಗನ್‌'ನಲ್ಲಿ ಹನುಮಾನ್‌ಕೈಂಡ್‌ ರ‍್ಯಾಪ್‌ ಸಾಂಗ್‌ ಹಾಡಲಿದ್ದಾರೆ. ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿಲಿದ್ದು, ಈಗಾಗಲೇ ನಿರೀಕ್ಷೆ ಮೂಡಿಸಿದೆ.

ಕಾಲಿವುಡ್‌ಗೆ ಕಾಲಿಟ್ಟ ಜನಪ್ರಿಯ ರ‍್ಯಾಪರ್ ಹನುಮಾನ್‌ಕೈಂಡ್

ವಿಜಯ್‌ ಮತ್ತು ಹನುಮಾನ್‌ಕೈಂಡ್‌.

Profile Ramesh B May 3, 2025 5:13 PM

ಚೆನ್ನೈ: ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿರುವ, ಹನುಮಾನ್‌ಕೈಂಡ್ (Rapper Hanumankind) ಎಂದೇ ಜನಪ್ರಿಯರಾಗಿರುವ ಭಾರತೀಯ ರ‍್ಯಾಪರ್, ಬರಹಗಾರ ಸೂರಜ್ ಚೆರುಕಟ್ ಇದೀಗ ಚಿತ್ರರಂಗದತ್ತ ಮುಖ ಮಾಡಿದ್ದಾರೆ. 'ಡೈಲಿ ಡೋಸ್‌', 'ಬಿಗ್‌ ಡ್ವಾಗ್ಸ್‌' ಮುಂತಾದ ಹಾಡುಗಳ ಮೂಲಕ ಯುವ ಜನತೆಯನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ ಹನುಮಾನ್‌ಕೈಂಡ್‌ ಇದೀಗ ತಮಿಳು ಚಿತ್ರರಂಗ ಪ್ರವೇಶಿಸಿದ್ದಾರೆ. ಕಾಲಿವುಡ್‌ ದಳಪತಿ ವಿಜಯ್‌ (Vijay) ನಟಿಸುತ್ತಿರುವ ಕೊನೆಯ ಚಿತ್ರ 'ಜನ ನಾಯಗನ್‌' (Jana Nayagan)ನಲ್ಲಿ ಹನುಮಾನ್‌ಕೈಂಡ್‌ ರ‍್ಯಾಪ್‌ ಸಾಂಗ್‌ ಹಾಡಲಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಹನುಮಾನ್‌ಕೈಂಡ್‌ ಈ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ʼʼದಳಪತಿ ವಿಜಯ್‌ ನಟಿಸುತ್ತಿರುವ ʼಜನ ನಾಯಗನ್‌ʼ ಚಿತ್ರದ ರ‍್ಯಾಪ್‌ ಸಾಂಗ್‌ಗೆ ಧ್ವನಿ ನೀಡುತ್ತದ್ದೇನೆ. ಅನಿರುದ್ಧ್‌ ರವಿಚಂದರ್‌ ಅವರ ಸಂಗೀತ ನಿರ್ದೇಶನವಿರಲಿದೆʼʼ ಎಂದು ಅವರು ವಿವರಿಸಿದ್ದಾರೆ.

ʼರನ್‌ ಇಟ್‌ ಅಪ್‌ʼ ಹಾಡು ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Jana Nayagan Release Date: ದಳಪತಿ ವಿಜಯ್‌ ಅಭಿನಯದ ಕೊನೆ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌: ಈ ವರ್ಷ ತೆರೆಗೆ ಬರುತ್ತಾ ʼಜನ ನಾಯಕನ್‌ʼ ?

ಪ್ರಧಾನಿ ಮೋದಿಯಿಂದಲೂ ಮೆಚ್ಚುಗೆ

ಕೇರಳದ ಮಲಪ್ಪುರಂನಲ್ಲಿ 1992ರಲ್ಲಿ ಜನಿಸಿದ ಹನುಮಾನ್‌ಕೈಂಡ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. 2024ರಲ್ಲಿ ರಿಲೀಸ್‌ ಆದ ʼಬಿಗ್‌ ಡ್ವಾಗ್ಸ್‌ʼ ಹಾಡಿನ ಮೂಲಕ ಜಾಗತಿಕ ಸಂಗೀತಪ್ರೇಮಿಗಳ ಮನಗೆದ್ದ ಹನುಮಾನ್‌ಕೈಂಡ್‌ ʼರನ್‌ ಇಟ್‌ ಅಪ್‌ʼ ಸಾಂಗ್‌ನಲ್ಲಿಯೂ ಮೋಡಿ ಮಾಡಿದ್ದಾರೆ. ಈ ಹಾಡು ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸಿದ್ದಲ್ಲೇ ಪ್ರಧಾನಿ ಮೋದಿ ಅವರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಾಡಿನ ಮೂಲಕ ಭಾರತೀಯ ಪ್ರಾಚೀನ ಸಮರಕಲೆಯನ್ನು ಪ್ರಚುರಪಡಿಸಿದ್ದಾಗಿ ಮೋದಿ ಬೆನ್ನು ತಟ್ಟಿದ್ದರು. ಕಳೆದ ವರ್ಷ ಅಮೆರಿಕ ಪ್ರವಾಸ ಕೈಗೊಂಡ ವೇಳೆ ಅವರು ಹನುಮಾನ್‌ಕೈಂಡ್‌ ಅವರನ್ನು ಗೌರವಿಸಿದ್ದರು.

ಕನ್ನಡದಲ್ಲಿಯೂ ಹಾಡಿದ್ದ ಹನುಮಾನ್‌ಕೈಂಡ್‌

ಹಾಗೆ ನೋಡಿದರೆ ಹನುಮಾನ್‌ಕೈಂಡ್‌ ಸಿನಿರಂಗದಲ್ಲಿ ಗುರುತಿಸಲ್ಪಡುತ್ತಿರುವುದು ಇದು ಮೊದಲ ಸಲವೇನಲ್ಲ. ವಿಶೇಷ ಎಂದರೆ ಅವರು ಸ್ಯಾಂಡಲ್‌ವುಡ್‌ ಮೂಲಕವೇ ಸಿನಿಮಾರಂಗ ಪ್ರವೇಶಿಸಿದವರು. 2020ರಲ್ಲಿ ತೆರೆಕಂಡ ಕನ್ನಡದ ʼಪಾಪ್‌ಕಾರ್ನ್‌ ಮಂಕಿ ಟೈಗರ್‌ʼ ಸಿನಿಮಾದ ʼಮಾದೇವʼ ಹಾಡಿಗೆ ಧ್ವನಿ ನೀಡುವ ಜತೆಗೆ ಋತ್ವಿಕ್‌ ಕಾಯ್ಕಿಣಿ ಜತೆಗೂಡಿ ಸಾಹಿತ್ಯ ರಚಿಸಿದ್ದರು. ಚರಣ್‌ ರಾಜ್‌ ಸಂಗೀತ ನಿರ್ದೇಶನದಲ್ಲಿ ಸಂಜಿತ್‌ ಹೆಗ್ಡೆ ಜತೆ ಹಾಡಿದ್ದರು. ಅದಾದ ಬಳಿಕ ಕಳೆದ ವರ್ಷ ರಿಲೀಸ್‌ ಆದ ಮಲಯಾಲಂನ ʼಆವೇಶಮ್‌ʼ ಚಿತ್ರದ ʼದಿ ಲಾಸ್ಟ್‌ ಡ್ಯಾನ್ಸ್‌ʼ ಹಾಡನ್ನು ಹಾಡಿದ್ದರು. ಜತೆಗೆ ಅದೇ ವರ್ಷ ಬಿಡುಗಡೆಯಾದ ʼರೈಫಲ್‌ ಕ್ಲಬ್‌ʼ ಮಲಯಾಲಂ ಚಿತ್ರದಲ್ಲಿ ನಟಿಸಿದ್ದರು. ಇದೀಗ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ವಿಜಯ್‌ ನಟನೆಯ ಕೊನೆಯ ಚಿತ್ರ ಎನ್ನುವ ಕಾರಣಕ್ಕೆ ʼಜನ ನಾಯಗನ್‌ʼ ಈಗಾಗಲೇ ಕುತೂಹಲ ಕೆರಳಿದ್ದು, ಇದೀಗ ಹನುಮಾನ್‌ಕೈಂಡ್‌ ಪ್ರವೇಶದಿಂದ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

ಯಾವಾಗ ರಿಲೀಸ್‌?

ಎಚ್‌.ವಿನೋದ್‌ (H.Vinoth) ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼಜನ ನಾಯಗನ್‌ʼ ರಿಲೀಸ್‌ ಡೇಟ್‌ ಈಗಾಗಲೇ ಅನೌನ್ಸ್‌ ಆಗಿದೆ. 2026ರ ಜ. 9ರಂದು ವಿಶ್ವಾದ್ಯಂತ ʼಜನ ನಾಯಗನ್‌ʼ ಬಿಡುಗಡೆಯಾಗಲಿದೆ. ಜ. 14ರಂದು ನಡೆಯುವ ಮಕರ ಸಂಕ್ರಾಂತಿ ಹಬ್ಬದ ಮೇಲೆ ಕಣ್ಣಿಟ್ಟಿರುವ ಚಿತ್ರತಂಡ ಇದೇ ವೇಳೆ ಸಿನಿಮಾ ತೆರೆಗೆ ತರಲು ಸಜ್ಜಾಗಿದೆ. ಆ್ಯಕ್ಷನ್‌ ಪ್ಯಾಕ್ಡ್‌ ಪಾಲಿಟಿಕಲ್‌ ಥ್ರಿಲ್ಲರ್‌ ಆಗಿರುವ ಇದರಲ್ಲಿ ನಾಯಕಿಯಾಗಿ ಕನ್ನಡತಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.