ಕಿಚ್ಚ ಸುದೀಪ್ ಅಭಿನಯದ ʻಮಾರ್ಕ್ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಮಾಯಿ ಮಾಡುತ್ತಿದೆ. ಈ ಹೊತ್ತಿನಲ್ಲೇ ಸುದೀಪ್ ಅವರು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದರು. ಹೌದು, ಬುಧವಾರ (ಡಿ.31) ಬೆಂಗಳೂರಿನ ಸಂತೋಷ್ ಮತ್ತು ಮೈಸೂರಿನ ಸಂಗಮ್ ಥಿಯೇಟರ್‌ಗಳಿಗೆ ಕಿಚ್ಚ ಭೇಟಿ ನೀಡಿ, ಅಭಿಮಾನಿಗಳೊಟ್ಟಿಗೆ ಸಿನಿಮಾ ನೋಡಿದರು. ಇದೀಗ ಆ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಎಮೋಷನಲ್ ಆಗಿರುವ ಅವರು, "ನನ್ನ ಮನತುಂಬಿ ಬಂದಿದೆ" ಎಂದು ಬರೆದುಕೊಂಡಿದ್ದಾರೆ.
ನಿಜವಾದ ಉದ್ದೇಶ ಮತ್ತೊಮ್ಮೆ ನೆನಪಾಯಿತು
"ನಿನ್ನೆ (ಡಿ.31) ಬೆಂಗಳೂರಿನ ಸಂತೋಷ್ ಮತ್ತು ಮೈಸೂರಿನ ಸಂಗಮ್ ಚಿತ್ರಮಂದಿರಗಳಿಗೆ ಭೇಟಿ ನೀಡಿದೆ. ಅಲ್ಲಿನ ಕ್ಷಣಗಳು ನನ್ನ ಮನ ತುಂಬಿ ಬಂದಿದೆ. ಅಲ್ಲಿಂದ ಕುಟುಂಬಗಳು, ಮಕ್ಕಳು ಮತ್ತು ಅಭಿಮಾನಿಗಳು.. ಹೀಗೆ ನೀವೆಲ್ಲರೂ ಇಷ್ಟು ಪ್ರೀತಿ ಹಾಗೂ ಸಂಭ್ರಮದಿಂದ ಒಂದಾಗಿರುವುದನ್ನು ಕಂಡು, ನಾವು ಸಿನಿಮಾ ಮಾಡುವುದರ ಹಿಂದಿನ ನಿಜವಾದ ಉದ್ದೇಶ ಏನೆಂದು ನನಗೆ ಮತ್ತೊಮ್ಮೆ ನೆನಪಾಯಿತು" ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದ ಕಿಚ್ಚ
"ಮಾರ್ಕ್ ಚಿತ್ರವನ್ನು ಇಷ್ಟು ದೊಡ್ಡ ಯಶಸ್ಸುಗೊಳಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಕರ್ನಾಟಕದ ಪ್ರತಿಯೊಂದು ಜಿಲ್ಲೆ, ತಾಲ್ಲೂಕು ಮತ್ತು ಪಟ್ಟಣಗಳಲ್ಲೂ ಹರಡಿರುವ ಈ ಪ್ರೀತಿಯನ್ನು ಕಂಡು ನಾನು ಧನ್ಯನಾಗಿದ್ದೇನೆ. ನೀವು ಮಾಡುತ್ತಿರುವ ರೀಲ್ಸ್, ಎಡಿಟ್ಸ್‌ಗಳು, ಬೀದಿಗಳಲ್ಲಿನ ಆಚರಣೆಗಳು ಮತ್ತು ಚಿತ್ರಮಂದಿರಗಳ ಮುಂದೆ ಸೇರುತ್ತಿರುವ ಜನಸ್ತೋಮ - ನಿಮ್ಮ ಈ ಪ್ರತಿಯೊಂದು ಅಭಿಮಾನವನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. 'ಸೈಕೋ ಸೈತಾನ್' ಮತ್ತು 'ಮಸ್ತ್ ಮಲೈಕಾ' ಹಾಡುಗಳು ನಿಮ್ಮ ದನಿಯಲ್ಲಿ ಮೊಳಗುತ್ತಿರುವುದನ್ನು ಕಂಡು ನನಗೆ ಅಪಾರ ಹೆಮ್ಮೆ ಎನಿಸುತ್ತಿದೆ" ಎಂದು ಸುದೀಪ್ ಅವರು ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರ ಟ್ವೀಟ್
ನಿಂಗೆ ಹೊಸ ವರ್ಷದ ಶುಭಾಶಯಗಳು
"ಹೊಸ ವರ್ಷದ ಪುಟ್ಟ ಉಡುಗೊರೆಯಾಗಿ, ಇಂದು (ಜ.1) ಸಂಜೆ 4 ಗಂಟೆಗೆ ನಾವು 'ಸೈಕೋ ಸೈತಾನ್' ವಿಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡುತ್ತಿದ್ದೇವೆ. ದಯವಿಟ್ಟು ನೋಡಿ, ಹಂಚಿಕೊಳ್ಳಿ ಮತ್ತು ನಿಮ್ಮ ಪ್ರೀತಿ ಹೀಗೆಯೇ ಇರಲಿ. ನಿಮ್ಮನ್ನು ನನ್ನ ಪೂರ್ಣ ಸಾಮರ್ಥ್ಯದೊಂದಿಗೆ ರಂಜಿಸಲು ಇದು ನನಗೆ ಮತ್ತಷ್ಟು ಸ್ಫೂರ್ತಿ ನೀಡುತ್ತದೆ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ 2026ರ ಹೊಸ ವರ್ಷದ ಹಾರ್ದಿಕ ಶುಭಾಶಯಗಳು" ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.