ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮನೆಯಲ್ಲೇ ಕುಸಿದುಬಿದ್ದು ಪ್ರಾಣ ಬಿಟ್ಟ 29 ವರ್ಷದ ಖ್ಯಾತ ನಟಿ ದಿವ್ಯಾಂಕಾ; 2 ವರ್ಷದ ಹಿಂದಿನ ಪೋಸ್ಟ್‌ ಈಗ ವೈರಲ್‌ ಆಗಿದ್ದೇಕೆ?

ಹರಿಯಾಣದ ಖ್ಯಾತ ನಟಿ ಮತ್ತು ಡ್ಯಾನ್ಸರ್ ದಿವ್ಯಾಂಕಾ ಸಿರೋಹಿ ಅವರು ಘಾಜಿಯಾಬಾದ್‌ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 29 ವರ್ಷದ ದಿವ್ಯಾಂಕಾ ಅವರಿಗೆ ಹೃದಯಾಘಾತ ಸಂಭವಿಸಿದಾಗ ಕುಸಿದು ಬಿದ್ದ ಪರಿಣಾಮ ತಲೆಗೆ ತೀವ್ರವಾದ ಗಾಯವಾಗಿ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಸಾವಿನ ಬೆನ್ನಲ್ಲೇ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹರಿಯಾಣದ ಖ್ಯಾತ ನಟಿ, ಡ್ಯಾನ್ಸರ್ ದಿವ್ಯಾಂಕಾ ಸಿರೋಹಿ ಅವರು ಘಾಜಿಯಾಬಾದ್‌ನ ರಾಜನಗರ ಎಕ್ಸ್‌ಟೆನ್ಶನ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 29 ವರ್ಷ ವಯಸ್ಸಾಗಿತ್ತು. ಸಣ್ಣ ವಯಸ್ಸಿನಲ್ಲಿ ದಿವ್ಯಾಂಕಾ ಸಾವನ್ನಪ್ಪಿರುವುದು ಚಿತ್ರರಂಗ ಮತ್ತು ಅಭಿಮಾನಿಗಳಿಗೆ ಆಘಾತ ನೀಡಿದೆ.

ದಿವ್ಯಾಂಕಾ ಸಾವಿಗೆ ಕಾರಣವೇನು?

ದಿವ್ಯಾಂಕಾ ಅವರಿಗೆ ದಿಢೀರ್ ಹೃದಯಾಘಾತ ಸಂಭವಿಸಿದೆ. ಆ ಸಮಯದಲ್ಲಿ ಅವರು ಒಮ್ಮೆಲೆ ಕುಸಿದು ಬಿದ್ದಿದ್ದರಿಂದ ತಲೆಗೆ ತೀವ್ರವಾದ ಗಾಯವಾಗಿದೆ. ಇದರಿಂದಾಗಿ ಭಾರಿ ರಕ್ತಸ್ರಾವ ಸಂಭವಿಸಿದ್ದು, ಕುಟುಂಬ ಸದಸ್ಯರು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಆದರೆ ದಾರಿಯ ಮಧ್ಯೆಯೇ ದಿವ್ಯಾಂಕಾ ಅವರು ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮಂಗಳವಾರ (ಏ.21) ರಾತ್ರಿ ಈ ಘಟನೆ ಸಂಭವಿಸಿದ್ದು , ಬುಧವಾರ ಬೆಳಿಗ್ಗೆ ಘಾಜಿಯಾಬಾದ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

Actress Ayesha Khan: ಖ್ಯಾತ ಹಿರಿಯ ನಟಿ ನಿಗೂಢ ಸಾವು; ಒಂದು ವಾರದ ನಂತರ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ!

ಅನೇಕರಿಗೆ ಸ್ಫೂರ್ತಿಯಾಗಿದ್ದ ದಿವ್ಯಾಂಕಾ

ದಿವ್ಯಾಂಕ ಅವರ ಜೀವನದ ಹಾದಿಯು ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಅವರು ಆರಂಭದಲ್ಲಿ ಸಾಮಾನ್ಯ ಉದ್ಯೋಗವೊಂದನ್ನು ಮಾಡುತ್ತಿದ್ದರು. ಆದರೆ ನಟನೆ ಮತ್ತು ನೃತ್ಯದ ಮೇಲಿದ್ದ ಆಸಕ್ತಿ ಅವರನ್ನು ಬಣ್ಣದ ಲೋಕದತ್ತ ಸೆಳೆಯಿತು. ಸ್ವಂತ ಪರಿಶ್ರಮದಿಂದ ಹರಿಯಾಣವಿ ಇಂಡಸ್ಟ್ರಿಗೆ ಕಾಲಿಟ್ಟ ಅವರು ಅಲ್ಪ ಕಾಲದಲ್ಲೇ ಟಾಪ್ ಸ್ಟಾರ್ ಆಗಿ ಬೆಳೆದರು. ವಿಶೇಷವಾಗಿ ‘ಮೇರಿ ಮಮ್ಮಿ ನು ಪಸಂದ್ ನೀ ತೂ’ ಹಾಡಿಗೆ ಅವರು ಮಾಡಿದ ಡ್ಯಾನ್ಸ್‌ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಈ ಒಂದೇ ಹಾಡು ಅವರನ್ನು ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿಸಿತು. ಆನಂತರ ಮಾಸೂಮ್ ಶರ್ಮಾ, ಅಮಿತ್ ಸೈನಿ ಅಂತಹ ಸ್ಟಾರ್ ಗಾಯಕರೊಂದಿಗೆ ಸುಮಾರು 50ಕ್ಕೂ ಹೆಚ್ಚು ಹಿಟ್ ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡು, ದೊಡ್ಡ ಅಭಿಮಾನಿ ಬಳಗವನ್ನೇ ದಿವ್ಯಾಂಕಾ ಸಂಪಾದಿಸಿದ್ದರು.

ಸೋಶಿಯಲ್‌ ಮೀಡಿಯಾದಲ್ಲೂ ಸಖತ್‌ ಫೇಮಸ್

ದಿವ್ಯಾಂಕ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 13 ಲಕ್ಷಕ್ಕೂ ಹೆಚ್ಚು (1.3 Million) ಫಾಲೋವರ್ಸ್‌ಗಳಿದ್ದಾರೆ. ಪ್ರತಿನಿತ್ಯ ತಮ್ಮ ಡ್ಯಾನ್ಸ್‌ ವಿಡಿಯೋಗಳು ಮತ್ತು ಫೋಟೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ದಿವ್ಯಾಂಕಾ ಇಷ್ಟು ಚಿಕ್ಕ ವಯಸ್ಸಿನಲ್ಲೇ ಅಗಲಿರುವುದನ್ನು ಅಭಿಮಾನಿಗಳಿಗೆ ತೀವ್ರ ದುಃಖ ನೀಡಿದೆ. ಅವರ ನಿಧನಕ್ಕೆ 'ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್' ಸಂತಾಪ ಸೂಚಿಸಿದ್ದು, ಅವರ ಸಾವು ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದು ಕಂಬನಿ ಮಿಡಿದಿದೆ.

ದಿವ್ಯಾಂಕಾ ಅವರ ಹಳೆಯ ಪೋಸ್ಟ್‌ ವೈರಲ್



ವೈರಲ್‌ ಆಯ್ತು ಹಳೇ ಪೋಸ್ಟ್‌

ದಿವ್ಯಾಂಕಾ ಸಾವಿನ ಬಳಿಕ 2024ರಲ್ಲಿ ಅವರು ಹಂಚಿಕೊಂಡಿದ್ದ ಹಳೆಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಆ ಚಿತ್ರದಲ್ಲಿ ಅವರು ನೀಲಿ ಬಣ್ಣದ ಉಡುಗೆಯೊಂದಿಗೆ ಮರೂನ್ ಬಣ್ಣದ ಪೇಟವನ್ನು ಧರಿಸಿದ್ದಾರೆ. ಅದರಲ್ಲಿ ಅವರು ಪೋಸ್ಟ್‌ಗೆ ನೀಡಿದ್ದ ಕ್ಯಾಪ್ಷನ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲಿ ಅವರು, "POV: ಶಿವನೇ, ನನ್ನನ್ನೂ ನಿನ್ನ ಜೊತೆ ಕರೆದುಕೊಂಡು ಹೋಗು" ಎಂದು ಬರೆದುಕೊಂಡಿದ್ದರು. ಇದೀಗ ಅವರ ಅಕಾಲಿಕ ನಿಧನದ ನಂತರ ಅಭಿಮಾನಿಗಳು ಕಮೆಂಟ್ ಸೆಕ್ಷನ್‌ನಲ್ಲಿ ಈ ಕ್ಯಾಪ್ಷನ್ ಬಗ್ಗೆ ಮರುಕ ವ್ಯಕ್ತಪಡಿಸುತ್ತಿದ್ದಾರೆ.