ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಂಬೈ ಸಿನಿದುನಿಯಾಕ್ಕೆ ಕಾಲಿಟ್ಟ ʻಹೊಂಬಾಳೆ ಫಿಲ್ಮ್ಸ್ʼ;‌ ಸದ್ದಿಲ್ಲದೇ ದ್ವಿಭಾಷಾ ಚಿತ್ರ ಘೋಷಣೆ, ಕನ್ನಡದಲ್ಲಿ ಹೊಸ ಸಿನಿಮಾ ಯಾವಾಗ?

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು 'YETO KA NAAY' (YKN-Pehla Vaar) ಚಿತ್ರದ ಮೂಲಕ ಮುಂಬೈ ಸಿನಿದುನಿಯಾಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡಿದೆ. ವಿಜಯ್ ಕಿರಗಂದೂರು ನಿರ್ಮಾಣ ಹಾಗೂ ಸಾರಂಗ್ ಸಾಠಾಯೆ ನಿರ್ದೇಶನದ ಈ ವಿಶಿಷ್ಟ ಹಿಪ್-ಹಾಪ್ ಮ್ಯೂಸಿಕಲ್ ಸಿನಿಮಾ ಮುಂಬೈ ಹಿನ್ನೆಲೆಯಲ್ಲಿ ಮೂಡಿಬರಲಿದ್ದು, 2026ರ ಕೊನೆಯಲ್ಲಿ ತೆರೆಗೆ ಬರಲಿದೆ.

ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಪ್ರೇಕ್ಷಕರಿಗೆ ಸದಾ ವಿಭಿನ್ನ ಕಥಾಹಂದರಗಳನ್ನು ಉಣಬಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ‘ಕೆಜಿಎಫ್’ ಮತ್ತು ‘ಸಲಾರ್’ ನಂತಹ ಹೈ-ವೋಲ್ಟೇಜ್ ಮಾಸ್ ಆಕ್ಷನ್ ಚಿತ್ರಗಳು, ನಮ್ಮ ಮಣ್ಣಿನ ಸಾಂಸ್ಕೃತಿಕ ಬೇರುಗಳನ್ನು ಜಗತ್ತಿಗೆ ಪರಿಚಯಿಸಿದ ‘ಕಾಂತಾರ’, ಅನಿಮೇಷನ್ ಲೋಕದ ‘ಮಹಾವತಾರ ನರಸಿಂಹ’ ಹಾಗೂ ಕೌಟುಂಬಿಕ ಭಾವನೆಗಳ ‘ರಾಜಕುಮಾರ’ ಚಿತ್ರಗಳ ಮೂಲಕ ಸಾರ್ವತ್ರಿಕವಾಗಿ ಪ್ರೇಕ್ಷಕರ ಮನಗೆದ್ದಿರುವ ಹೊಂಬಾಳೆ ಫಿಲ್ಮ್ಸ್, ಇದೀಗ ಚಿತ್ರರಂಗದಲ್ಲಿ ಮತ್ತೊಂದು ಮಹತ್ವಾಕಾಂಕ್ಷಿ ಪ್ರಯೋಗಕ್ಕೆ ಕೈಹಾಕಿದೆ.

ಹೊಸದೊಂದು ಮ್ಯೂಸಿಕಲ್‌ ಸಿನಿಮಾ ಜರ್ನಿಗೆ ಮುನ್ನುಡಿ

ಪ್ರತಿಯೊಂದು ಚಿತ್ರದಲ್ಲೂ ಹೊಸತನವನ್ನು ಪರಿಚಯಿಸುವ ತನ್ನ ಪರಂಪರೆಯನ್ನು ಮುಂದುವರಿಸಿರುವ ‘ಹೊಂಬಾಳೆ ಫಿಲ್ಮ್ಸ್’, ಇದೀಗ ಇಂದಿನ ಯುವ ಪೀಳಿಗೆ ಹಾಗೂ ‘ಜೆನ್ ಜಿ’ (Gen Z) ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಪೂರ್ಣ ಕಂಟೆಂಟ್ ಆಧಾರಿತ ಹಿಪ್-ಹಾಪ್ ಮ್ಯೂಸಿಕಲ್ ಕಥಾಹಂದರ ಹೊಂದಿರುವ ‘YETO KA NAAY’ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ಸಂಪೂರ್ಣವಾಗಿ ಮುಂಬೈ ನಗರದ ಹಿನ್ನೆಲೆಯಲ್ಲಿ ಮೂಡಿಬರಲಿರುವ ಈ ಚಿತ್ರದ ಹಿಂದಿ ಅವತರಣಿಕೆಯನ್ನು YKN-Pehla Vaar ಹೆಸರಿನಲ್ಲಿ ಬಿಡುಗಡೆ ಮಾಡಲು ಭರ್ಜರಿ ಸಿದ್ಧತೆ ನಡೆಸಲಾಗುತ್ತಿದ್ದು, ಇದು ಭಾರತೀಯ ಸಿನಿಮಾ ರಂಗದಲ್ಲಿ ಹೊಸದೊಂದು ಮ್ಯೂಸಿಕಲ್‌ ಸಿನಿಮಾ ಜರ್ನಿಗೆ ಮುನ್ನುಡಿ ಬರೆಯಲಿದೆ. ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ಮೂಡಿಬರಲಿದೆ.

ಹೊಂಬಾಳೆ ಫಿಲ್ಮ್ಸ್‌ ಜೊತೆ ಪ್ರಶಾಂತ್‌ ನೀಲ್‌ ಮೊದಲು ಕೈಜೋಡಿಸಿದ್ದು ʻಕೆಜಿಎಫ್‌ʼ ಸಿನಿಮಾಕ್ಕಾಗಿ ಅಲ್ಲ; ಅಪ್ಪು ಜೊತೆ ಮಾಡಬೇಕಿದ್ದ ಆ ಪ್ರಾಜೆಕ್ಟ್‌ ಏನಾಯ್ತು?

ಇದೇ ವರ್ಷ ರಿಲೀಸ್‌ ಆಗೋದು ಖಚಿತ

ನಿರ್ಮಾಪಕ ವಿಜಯ್ ಕಿರಗಂದೂರು ಅವರು ಅತ್ಯಂತ ಪ್ರೀತಿಯಿಂದ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಾರಂಗ್ ಸಂಜೀವ್ ಸಾಠಾಯೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷವೆಂದರೆ, ಸಾರಂಗ್ ಸಾಠಾಯೆ, ಸುಜಯ್ ಜಾಧವ್, ಸೃಷ್ಟಿ ತಾವಡೆ ಮತ್ತು ಶ್ರೇಯಸ್ ಸಾಗ್ವೇಕರ್ ಅವರು ಜಂಟಿಯಾಗಿ ಈ ಚಿತ್ರಕ್ಕೆ ಚಿತ್ರಕಥೆ ರಚಿಸಿದ್ದಾರೆ. ಪ್ರತಿಭಾವಂತ ತಂತ್ರಜ್ಞರಾದ ಎ. ವಿ. ಪ್ರಫುಲ್ಲಚಂದ್ರ ಅವರ ಸಂಗೀತ ನಿರ್ದೇಶನ ಹಾಗೂ ಹರ್ಷವೀರ್ ಒಬೆರಾಯ್ ಅವರ ಆಕರ್ಷಕ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರಸ್ತುತ ಮುಂಬೈ ನಗರದ ವಿವಿಧ ಭಾಗಗಳಲ್ಲಿ ಚಿತ್ರೀಕರಣವು ಭರದಿಂದ ಸಾಗುತ್ತಿದ್ದು, ಪ್ರಸಕ್ತ ವರ್ಷದ ಅಂತ್ಯದೊಳಗೆ ಅಂದರೆ 2026ರ ಕೊನೆಯ ವೇಳೆಗೆ ಚಿತ್ರವನ್ನು ಬೆಳ್ಳಿತೆರೆಗೆ ತರಲು ಚಿತ್ರತಂಡ ಯೋಜಿಸಿದೆ.

ದ್ವಿಭಾಷಾ ಸಿನಿಮಾ ಆರಂಭಿಸಿದ ಹೊಂಬಾಳೆ



ಶೀಘ್ರದಲ್ಲೇ ಹೊಸ ಕನ್ನಡ ಸಿನಿಮಾ ಆರಂಭ

ಇದೇ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮೂಲಗಳಿಂದ ಸಿಕ್ಕಿರುವ ಮಹತ್ವದ ಮಾಹಿತಿ ಏನೆಂದರೆ, ಸ್ಯಾಂಡಲ್‌ವುಡ್‌ನಲ್ಲಿ ಶೀಘ್ರದಲ್ಲೇ ಕಂಟೆಂಟ್ ಆಧಾರಿತ ವಿಶಿಷ್ಟ ಮತ್ತು ನವೀನ ಶೈಲಿಯ ಕನ್ನಡ ಚಿತ್ರಗಳನ್ನು ಘೋಷಣೆ ಮಾಡಲು ಹೊಂಬಾಳೆ ದೊಡ್ಡ ಪ್ಲಾನ್‌ ಒಂದನ್ನು ಮಾಡಿಕೊಳ್ಳುತ್ತಿದೆ. ಕನ್ನಡಿಗರಿಗೆ ಮತ್ತಷ್ಟು ಉನ್ನತ ಗುಣಮಟ್ಟದ ಸಿನಿಮಾಗಳನ್ನು ನೀಡಲು ಹೊಂಬಾಳೆ ಫಿಲ್ಮ್ಸ್ ಸಂಪೂರ್ಣವಾಗಿ ಸನ್ನದ್ಧವಾಗಿದ್ದು, ಆ ಮೂಲಕ ಹೊಸ ಕಥೆಗಾರರಿಗೆ ದೊಡ್ಡ ವೇದಿಕೆ ಕಲ್ಪಿಸಿಕೊಡಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.