ಮುಂಬೈ: ʼಕೆಜಿಎಫ್ʼ (KGF) ಸರಣಿ, 'ಕಾಂತಾರ' (Kantara) ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಕಂಪು ಪಸರಿಸಿದ್ದ ಸ್ಯಾಂಡಲ್‌ವುಡ್‌ನ ಹೆಮ್ಮೆಯ ಚಿತ್ರ ನಿರ್ಮಾಣ ಸಂಸ್ಥೆ ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್ (Hombale Films) ಇದೀಗ ತನ್ನ ಕಾರ್ಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಕನ್ನಡ ಜತೆಗೆ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರ ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಬಾಲಿವುಡ್‌ಗೆ ಕಾಲಿಟ್ಟಿದೆ. ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್, ಗ್ರೀಕ್ ಗಾಡ್ ಖ್ಯಾತಿಯ ಹೃತಿಕ್ ರೋಷನ್ (Hrithik Roshan) ಜತೆಗೆ ಮುಂದಿನ ಚಿತ್ರ ಘೋಷಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಭಿಮಾನಿಗಳ ಕುತೂಹಲ, ನಿರೀಕ್ಷೆ ಗರಿಗೆದರಿದೆ.
ವಿಜಯ್ ಕಿರಗಂದೂರು ಈ ಬಗ್ಗೆ ಮಾಹಿತಿ ನೀಡಿ, ʼʼಎಲ್ಲೆಗಳನ್ನು ದಾಟಿ ಹೊಸ ಹೊಸ ಕಥೆಗಳನ್ನು ಜನರಿಗೆ ತಲುಪಿಸುವುದೇ ಹೊಂಬಾಳೆ ಫಿಲ್ಮ್ಸ್‌ನ ಮುಖ್ಯ ಗುರಿ. ದೇಶದ ಗಡಿಗಳನ್ನು ಮೀರಿ, ಪ್ರಪಂಚದಾದ್ಯಂತ ಕಥೆಗಳನ್ನು ತಲುಪಿಸುವ ಕನಸು ನಮ್ಮದು. ಆ ಗುರಿಯನ್ನು ತಲುಪುವ ಮೊದಲ ಹೆಜ್ಜೆಯಾಗಿ ಹೃತಿಕ್ ರೋಷನ್ ಅವರೊಂದಿಗೆ ಕೆಲಸ ಮಾಡಲು ಮುಂದಾಗಿದ್ದೇವೆʼʼ ಎಂದು ತಿಳಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್‌ನ ಎಕ್ಸ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: KGF 3 Update: ಯಶ್ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್; ʼಕೆಜಿಎಫ್ 3ʼ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್
ಈ ಹೊಸ ಪ್ರಾಜೆಕ್ಟ್ ಬಗ್ಗೆ ತಿಳಿಸಿದ ಹೃತಿಕ್ ರೋಷನ್, "ಇದುವರೆಗೆ ಹೊಂಬಾಳೆ ಫಿಲ್ಮ್ಸ್ ಅದ್ಭುತ ಚಿತ್ರಗಳನ್ನು ನಿರ್ಮಿಸಿದೆ. ಅತ್ಯುತ್ತಮ ಕಥೆಗಳನ್ನು ಪ್ರಸ್ತುತಪಡಿಸಿದೆ. ಆ ನಿರ್ಮಾಣ ಸಂಸ್ಥೆಯೊಂದಿಗೆ ಕೈಜೋಡಿಸಲು, ಪ್ರೇಕ್ಷಕರಿಗೆ ಹೊಸದೊಂದು ಅನುಭವ ಒದಗಿಸಲು ನಾನು ಉತ್ಸುಕನಾಗಿದ್ದೇನೆ. ನಮ್ಮ ಮುಂದೆ ದೊಡ್ಡ ಕನಸುಗಳಿವೆ ಮತ್ತು ಅವುಗಳನ್ನು ನನಸಾಗಿಸಲು ಬದ್ಧರಾಗಿದ್ದೇವೆ" ಎಂದು ಕುತೂಹಲ ಮೂಡಿಸಿದ್ದಾರೆ.
ʼʼಕರ್ನಾಟಕದ ಮಣ್ಣಿಂದ ಜಾಗತಿಕ ರಂಗದೆಡೆಗೆ ಸಾಗುವ ನಮ್ಮ ಪಯಣದಲ್ಲಿ ಇದೊಂದು ಮಹತ್ವದ ಹೆಜ್ಜೆ...ಭಾರತೀಯ ಚಿತ್ರರಂಗದ ಪ್ರಮುಖ ನಟ ಹೃತಿಕ್ ರೋಷನ್ ಅವರೊಂದಿಗೆ ಹೊಸ ಚಿತ್ರ ಘೋಷಿಸಲು ನಮ್ಮ ಹೊಂಬಾಳೆ ತಂಡಕ್ಕೆ ಸಂತಸ ಹಾಗೂ ಹೆಮ್ಮೆಯಾಗುತ್ತಿದೆ. ಈ ಚಿತ್ರ, ನಮ್ಮ ಹೊಸ ಶೈಲಿಯ ಕಥಾ ನಿರೂಪಣೆ ಮತ್ತು ಹೃತಿಕ್ ರೋಷನ್ ಅವರ ಅಪ್ರತಿಮ ಅಭಿನಯಕ್ಕೆ ಸಾಕ್ಷಿಯಾಗಲಿದೆʼʼ ಎಂದು ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದೆ. ಜತೆಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಹಂಚಿಕೊಳ್ಳುವುದಾಗಿ ತಿಳಿಸಿದೆ.

ವಿಜಯ್ ಕಿರಗಂದೂರು.
ಹಲವು ವರ್ಷಗಳಿಂದ ಹೊಂಬಾಳೆ ಫಿಲ್ಮ್ಸ್ ಬಾಲಿವುಡ್‌ಗೆ ಕಾಲಿಡಲಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬಿದ್ದಿರಲಿಲ್ಲ. ಇದೀಗ ಕುತೂಹಲಕ್ಕೆ ತೆರೆ ಬಿದ್ದಿದ್ದು, ಯಾರೆಲ್ಲ ನಟಿಸಲಿದ್ದಾರೆ, ನಿರ್ದೇಶಕ ಯಾರಾಗಲಿದ್ದಾರೆ ಎನ್ನುವ ಹೊಸ ಪ್ರಶ್ನೆ ಹುಟ್ಟಿಕೊಂಡಿದೆ. ಇದು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಲಿದೆ.
ಸದ್ಯ ಹೊಂಬಾಳೆ ಫಿಲ್ಮ್ಸ್ ಬಹು ನಿರೀಕ್ಷಿತ ʼಕಾಂತಾರ ಚಾಪ್ಟರ್ 1ʼ ಸಿನಿಮಾ ನಿರ್ಮಿಸುತ್ತಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಇದು 2022ರಲ್ಲಿ ತೆರೆಕಂಡು ಗಮನ ಸೆಳೆದ ʼಕಾಂತಾರʼ ಚಿತ್ರದ ಪ್ರೀಕ್ವೆಲ್. ಬಹುಭಾಷೆಗಳಲ್ಲಿ ಇದು ಈ ವರ್ಷದ ಅ. 2ರಂದು ತೆರೆಗೆ ಬರಲಿದೆ. ಇದರ ಜತೆಗೆ ʼಮಹಾವತಾರ ನರಸಿಂಹʼ ಎಂಬ ಆ್ಯನಿಮೇಟೆಡ್ ಚಿತ್ರ ಘೋಷಿಸಿದೆ. ಇದರಿಂದಿಗೆ ರಕ್ಷಿತ್ ಶೆಟ್ಟಿ ಅವರ ʼರಿಚರ್ಡ್ ಆ್ಯಂಟೊನಿʼ, ಪ್ರಭಾಸ್ ಅವರ ʼಸಲಾರ್: ಪಾರ್ಟ್ 2ʼ ಕೂಡ ನಿರ್ಮಾಣ ಹಂತದಲ್ಲಿದೆ.