ಗೋವಾದಲ್ಲಿ ನಡೆದ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI 2026)ಕ್ಕೆ ತೆರೆ ಬಿದ್ದಿದೆ. ನವೆಂಬರ್ 20ರಿಂದ 28ರವರೆಗೆ ಒಟ್ಟು ಒಂಬತ್ತು ದಿನಗಳ ಕಾಲ ನಡೆದ ಈ ಪ್ರತಿಷ್ಠಿತ ಚಿತ್ರೋತ್ಸವದ ಸಮಾರೋಪ ಸಮಾರಂಭ ಶನಿವಾರ ಅದ್ಧೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದ ಸಿನಿಮಾಗಳು ಹಾಗೂ ಕಲಾವಿದರ ಹೆಸರನ್ನು ಘೋಷಿಸಲಾಗಿದೆ. ವಿಶೇಷವೆಂದರೆ, ಕನ್ನಡದ ಹೆಮ್ಮೆಯ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲದೆ, ಅವರ ನಿರ್ದೇಶನದ ‘ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1’ ಚಿತ್ರಕ್ಕೂ ವಿಶೇಷ ಮನ್ನಣೆ ದೊರೆತಿದೆ.
ಭಾರತದ ಪತ್ರಿಕಾ ಮಾಹಿತಿ ಬ್ಯೂರೋ (PIB) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ.
ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ
‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿನ ಅದ್ಭುತ ಅಭಿನಯಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ವಿಭಾಗದ ಸಿಲ್ವರ್ ಪೀಕಾಕ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಚಿತ್ರದ ಮೂಲಕ ಮತ್ತೊಮ್ಮೆ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ರಿಷಬ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಈ ಮನ್ನಣೆ ಸಿಕ್ಕಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಇದನ್ನೂ ಓದಿ: Bigg Boss Kannada 13: ಸುದೀಪ್ ಬಳಿ ಗಾನವಿ ಕ್ಷಮೆ ಕೇಳಿದ್ದು ಏಕೆ?
ಇದೇ ಸಿನಿಮಾಗೆ ವಿಶೇಷ ಉಲ್ಲೇಖ (Special Mention) ಗೌರವವೂ ದೊರೆತಿದೆ. ಒಂದೇ ಚಿತ್ರಕ್ಕೆ ನಟನ ಅಭಿನಯದ ಪ್ರಶಸ್ತಿ ಹಾಗೂ ವಿಶೇಷ ಮನ್ನಣೆ ಸಿಕ್ಕಿರುವುದು ಗಮನಾರ್ಹ.
IFFI 2026 ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದವರ ವಿವರ ಇಲ್ಲಿದೆ.
ಅತ್ಯುತ್ತಮ ಚಿತ್ರ (ಗೋಲ್ಡನ್ ಪೀಕಾಕ್): ಆಕ್ವಿ (AQUI) – ನಿರ್ದೇಶಕ ಟಿಯಾಗೊ ಗುಡೀಸ್.
ಅತ್ಯುತ್ತಮ ನಿರ್ದೇಶಕ (ಸಿಲ್ವರ್ ಪೀಕಾಕ್): ವೋಲ್ಕರ್ ಶ್ಲೊಂಡಾರ್ಫ್ – ವಿಸಿಟೇಶನ್ (Visitation).
ವಿಶೇಷ ಮನ್ನಣೆ: ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1.
ಅತ್ಯುತ್ತಮ ಚೊಚ್ಚಲ ಚಿತ್ರ: ದಿ ಗೋಲ್ಡನ್ ಏಜ್ – ಬೆರೆಂಜರ್ ಥುವಿನ್.
ವಿಶೇಷ ತೀರ್ಪುಗಾರರ ಪ್ರಶಸ್ತಿ: ದಿ ರಿವರ್ ಟ್ರೈನ್.
ಅತ್ಯುತ್ತಮ ನಟಿ (ಸಿಲ್ವರ್ ಪೀಕಾಕ್): ಮಾಯಾ ಓ'ರೂರ್ಕ್ – ದಿ ಮೆಲ್ಟ್ಡೌನ್.
ಅತ್ಯುತ್ತಮ ನಟ (ಸಿಲ್ವರ್ ಪೀಕಾಕ್): ರಿಷಬ್ ಶೆಟ್ಟಿ – ಕಾಂತಾರ: ಚಾಪ್ಟರ್ 1.
ಅತ್ಯುತ್ತಮ ವೆಬ್ ಸರಣಿ OTT ಪ್ರಶಸ್ತಿ: ಮೇಡ್ ಇನ್ ಇಂಡಿಯಾ: ಎ ಟೈಟನ್ ಸ್ಟೋರಿ – ರಾಬಿ ಗ್ರೆವಾಲ್.
ಅತ್ಯುತ್ತಮ ಚೊಚ್ಚಲ ನಿರ್ದೇಶಕ: ವಿಶಾಲ್ ಚತುರ್ವೇದಿ – ಹನುಮಾನ್ ಅಂಶ್.
ಇದು ಹೊಸ ಪ್ರತಿಭೆಗಳ ಚಿತ್ರೋತ್ಸವ: ಧೀರಜ್ ಸಿಂಗ್
57ನೇ IFFI ಕುರಿತು ಮಾತನಾಡಿದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (NFDC) ವ್ಯವಸ್ಥಾಪಕ ನಿರ್ದೇಶಕ ಧೀರಜ್ ಸಿಂಗ್, ಈ ಬಾರಿಯ ಚಿತ್ರೋತ್ಸವ ಹೊಸ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಚಿತ್ರೋತ್ಸವವನ್ನು ‘ಡೆಬ್ಯೂಗಳ ಉತ್ಸವ’ ಎಂದು ಬಣ್ಣಿಸಿದ ಅವರು, ಹೊಸ ನಿರ್ದೇಶಕರು, ಯುವ ಕಲಾವಿದರು ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಕಷ್ಟು ಅವಕಾಶಗಳು ದೊರೆತಿವೆ ಎಂದರು. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಚಿತ್ರರಂಗಕ್ಕೆ ಹೊಸದಾಗಿ ಪ್ರವೇಶಿಸುತ್ತಿರುವವರ ಭಾಗವಹಿಸುವಿಕೆ ಈ ಬಾರಿಯ ಚಿತ್ರೋತ್ಸವಕ್ಕೆ ಹೊಸ ಅನುಭವ ನೀಡಿದೆ ಎಂದು ಅಭಿಪ್ರಾಯಪಟ್ಟರು.
IFFI ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?
ಪ್ರಶಸ್ತಿ ಸ್ವೀಕರಿಸಿದ ಬಳಿಕ ಚಿತ್ರೋತ್ಸವದ ಮಹತ್ವದ ಬಗ್ಗೆಯೂ ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ಪ್ರಪಂಚದ ವಿವಿಧ ಭಾಗಗಳಲ್ಲಿ ನಿರ್ಮಾಣವಾಗುವ ಸಿನಿಮಾಗಳನ್ನು ಪರಿಚಯಿಸಲು IFFI ಅತ್ಯುತ್ತಮ ವೇದಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯವಾಹಿನಿಯ ಚಿತ್ರಮಂದಿರಗಳಲ್ಲಿ ಸುಲಭವಾಗಿ ನೋಡಲು ಸಿಗದ ಅನೇಕ ಸಿನಿಮಾಗಳನ್ನು ಇಂತಹ ಚಿತ್ರೋತ್ಸವಗಳ ಮೂಲಕ ವೀಕ್ಷಿಸುವ ಅವಕಾಶ ಸಿಗುತ್ತದೆ. ಬೇರೆ ಬೇರೆ ದೇಶಗಳ ವಿಭಿನ್ನ ಕಥೆಗಳು ಮತ್ತು ಸಿನಿಮಾ ಪ್ರಯೋಗಗಳನ್ನು ಪರಿಚಯಿಸಿಕೊಳ್ಳಲು IFFI ಸಹಾಯ ಮಾಡುತ್ತದೆ ಎಂದು ರಿಷಬ್ ಅಭಿಪ್ರಾಯಪಟ್ಟಿದ್ದಾರೆ.
₹800 ಕೋಟಿ ಗಳಿಸಿದ್ದ ‘ಕಾಂತಾರ: ಚಾಪ್ಟರ್ 1’
2022ರಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದ ‘ಕಾಂತಾರ’ ಚಿತ್ರದ ಪೂರ್ವಭಾಗವಾಗಿ ‘ಕಾಂತಾರ: ಚಾಪ್ಟರ್ 1’ ಮೂಡಿಬಂದಿದೆ. ಮೊದಲ ಭಾಗದ ಘಟನೆಗಳಿಗಿಂತ ಸುಮಾರು ಸಾವಿರ ವರ್ಷಗಳ ಹಿಂದಿನ ಕಥೆಯನ್ನು ಈ ಸಿನಿಮಾ ಹೊಂದಿದೆ.
ರಿಷಬ್ ಶೆಟ್ಟಿ ಅವರೇ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 13: ಸುದೀಪ್ ಬಳಿ ಗಾನವಿ ಕ್ಷಮೆ ಕೇಳಿದ್ದು ಏಕೆ?
ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಈ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ₹800 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಇದೀಗ IFFIಯಲ್ಲಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಚಿತ್ರಕ್ಕೆ ವಿಶೇಷ ಮನ್ನಣೆ ದೊರೆತಿರುವುದು ಸಿನಿಮಾದ ಯಶಸ್ಸಿಗೆ ಮತ್ತೊಂದು ಗರಿ ಮೂಡಿಸಿದೆ.