ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಹಿಂದಿ ಸಿನಿಮಾದ ಮೊದಲ ಹಾಡು ‘ರುಬರು’ ರಿಲೀಸ್!‌

Jai Hind Jai Sindh: ‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಚಿತ್ರದ ನವಿರಾದ ಮೆಲೋಡಿ ಹಾಡು 'ರುಬರು' ಬಿಡುಗಡೆಯಾಗಿದೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಈ ಪ್ಯಾನ್-ಇಂಡಿಯಾ ಸಿನಿಮಾದಲ್ಲಿ ಗೌರವ್ ಧಿಂಗ್ರಾ ಮತ್ತು ಅಕೈಶಾ ವಾಟ್ಸ್ ನಟಿಸಿದ್ದು, ಜೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಚಿತ್ರದ ಮೊದಲ ಮೆಲೋಡಿ ಗೀತೆ ‘ರುಬರು’ ಅಧಿಕೃತವಾಗಿ ಬಿಡುಗಡೆಯಾಗಿದೆ. ಈಗಾಗಲೇ ವಿಶಿಷ್ಟ ಕಥಾಹಂದರ ಹಾಗೂ ತಾರಾಗಣದಿಂದ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿರುವ ಈ ಚಿತ್ರ, ಇದೀಗ ಮೊದಲ ಹಾಡಿನ ಮೂಲಕ ತನ್ನ ಪ್ರಚಾರ ಕಾರ್ಯಕ್ಕೆ ಅದ್ಧೂರಿ ಚಾಲನೆ ನೀಡಿದೆ. ಹಿಮಾವೃತ ರಮಣೀಯ ತಾಣಗಳಲ್ಲಿ ಅದ್ಭುತವಾಗಿ ಚಿತ್ರೀಕರಿಸಲಾಗಿರುವ ಈ ಹಾಡು, ಪ್ರೀತಿಯಲ್ಲಿ ಬೀಳುವ ಹೊತ್ತಿನ ಮುಗ್ಧತೆ, ಬೆಚ್ಚನೆಯ ಅನುಭವ ಹಾಗೂ ಪ್ರೇಮವನ್ನು ಕಣ್ಣಿಗೆ ಕಟ್ಟುವಂತೆ ತೆರೆದಿಟ್ಟಿದೆ.

ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹೊಸ ಪ್ರತಿಭೆಗಳಾದ ಗೌರವ್ ಧಿಂಗ್ರಾ ಮತ್ತು ಅಕೈಶಾ ವಾಟ್ಸ್ ಅವರ ನಡುವಿನ ಸುಂದರ ಪ್ರೇಮಕಥೆಯ ಎಳೆಯನ್ನು ‘ರುಬರು’ ಹಾಡು ಪರಿಚಯಿಸುತ್ತದೆ. ಈ ಗೀತೆಗೆ ಕನ್ನಡದ ಪ್ರತಿಭಾವಂತ ಸಂಗೀತ ನಿರ್ದೇಶಕ ಜೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕುಮಾರ್ ಅವರ ಸಾಹಿತ್ಯಕ್ಕೆ ಗಾಯಕರಾದ ಎಂ.ಡಿ. ಇರ್ಫಾನ್ ಹಾಗೂ ಶಿವಾನಿ ಶರ್ಮಾ ಅವರ ಕಂಠಸಿರಿ ಇದ್ದು, ಕೇಳುಗರ ಮನಸ್ಸಿಗೆ ತಟ್ಟುವಂತೆ ಹಾಡು ಮೂಡಿಬಂದಿದೆ.

'ಜೈ ಹಿಂದ್ ಜೈ ಸಿಂಧ್' ಚಿತ್ರದ ಮೂಲಕ ಮತ್ತೆ ಬಾಲಿವುಡ್‌ಗೆ ಇಂದ್ರಜಿತ್ ಲಂಕೇಶ್‌ ಎಂಟ್ರಿ; ಉತ್ತರಾಖಂಡದಲ್ಲಿ ನಡೆಯುತ್ತಿದೆ ಶೂಟಿಂಗ್

ಹೊಸ ಮ್ಯೂಸಿಕ್ ಲೇಬಲ್ ಆರಂಭ

ಹಾಡಿನ ಲೋಕಾರ್ಪಣೆಯೊಂದಿಗೆ ತಮ್ಮ ಹೊಸ ಮ್ಯೂಸಿಕ್ ಲೇಬಲ್ ‘ಸ್ಯಾಮೀಸ್ ಮ್ಯೂಸಿಕ್’ ಅನ್ನು ಪ್ರೇಕ್ಷಕರಿಗೆ ಪರಿಚಯಿಸಿರುವ ಚಿತ್ರದ ನಿರ್ಮಾಪಕ ಸ್ಯಾಮಿ ನಾನ್ವಾನಿ, "ರುಬರು ಗೀತೆಯ ಮೂಲಕ ನಮ್ಮ ‘ಸ್ಯಾಮೀಸ್ ಮ್ಯೂಸಿಕ್’ ಸಂಸ್ಥೆ ಹೊಸ ಪಯಣ ಆರಂಭಿಸಿದೆ. ಸಂಗೀತ, ಗಾಢವಾದ ಭಾವನೆಗಳು ಮತ್ತು ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹ ಕಥೆಗಳನ್ನು ಸಂಭ್ರಮಿಸುವ ಗುಣಮಟ್ಟದ ಹಾಡುಗಳನ್ನು ಸದಾ ಸಂಗೀತ ಪ್ರಿಯರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ" ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಈ ಸಿನಿಮಾದಲ್ಲಿದೆ ದೊಡ್ಡ ತಾರಾಬಳಗ

ಇಂದ್ರಜಿತ್ ಲಂಕೇಶ್ ನಿರ್ದೇಶನದ ಈ ಚಿತ್ರವು ಪ್ರೀತಿ, ಸ್ವಂತಿಕೆಯ ಗುರುತು, ಬೇರುಗಳ ಹುಡುಕಾಟ ಹಾಗೂ ‘ಮನೆ’ ಎಂಬ ಪರಿಕಲ್ಪನೆಯ ಸುತ್ತ ಭಾವನಾತ್ಮಕವಾಗಿ ಸಾಗಲಿದೆಯಂತೆ. ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ಕಲಾವಿದರಾದ ಮಹೇಶ್ ಮಂಜ್ರೇಕರ್, ಜಯಾ ಪ್ರದಾ, ಛಾಯಾ ಕದಮ್, ರಾಹುಲ್ ದೇವ್, ಜರೀನಾ ವಾಹಬ್, ಉಪಾಸನಾ ಸಿಂಗ್, ವಿಕ್ರಮ್ ಕೊಚ್ಚರ್, ಅಮಿತ್ ಬೆಹ್ಲ್, ಇಂದಿರಾ ತಿವಾರಿ, ಎಹ್ಸಾನ್ ಖಾನ್, ಪೂಜಾ ಕಟ್ಯಾಲ್, ಅಜಿತ್ ಶಿಧಾಯೆ, ಅಂಕಿತ್ ಅರೋರಾ, ರಾಜ್‌ವೀರ್ ಸಿಂಗ್, ನಾನಕ್ ಸಿಂಗ್, ಕಾರ್ತಿಕೇಯ ಮಾಳವೀಯ, ಫಾತಿಮಾ ಆಯೆಷಾ ಖಾನ್ ಹಾಗೂ ಗರಿಮಾ ಅಗರ್ವಾಲ್ ಸೇರಿದಂತೆ ಬಹುದೊಡ್ಡ ತಾರಾಬಳಗ ನಟಿಸಿದೆ.

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌

ಹೊಸ ನಟ-ನಟಿಯರಾದ ಗೌರವ್ ಧಿಂಗ್ರಾ ಮತ್ತು ಅಕೈಶಾ ವಾಟ್ಸ್ ಅವರಿಗೆ ಚಿತ್ರರಂಗದಲ್ಲಿ ಭದ್ರ ನೆಲೆ ಒದಗಿಸುವ ನಿರೀಕ್ಷೆ ಹುಟ್ಟಿಸಿರುವ ‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಚಿತ್ರವು ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ.