ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಧುಮುಕಿದ್ದ ನಟ ದಳಪತಿ ವಿಜಯ್, ತಮ್ಮ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಮೂಲಕ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ ಮುಖ್ಯಮಂತ್ರಿ ಗದ್ದುಗೆಯನ್ನು ಏರಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ದಶಕಗಳ ಹವಾವನ್ನು ನುಚ್ಚುನೂರು ಮಾಡಿ, ವಿಜಯ್ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ವಿಜಯ್ ಅವರ ಈ ಐತಿಹಾಸಿಕ ಯಶಸ್ಸು ಈಗ ಇತರೆ ನಟರಿಗೂ ರಾಜಕೀಯ ಪ್ರೇರಣೆ ನೀಡಿದಂತಿದೆ. ಯಾಕೆಂದರೆ, ನಟ ಧನುಷ್ ಕೂಡ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಚರ್ಚೆ ಈಗ ತಮಿಳುನಾಡಿನಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಧನುಷ್ ಫ್ಯಾನ್ಸ್ ಅಸೋಸಿಯೇಷನ್ ಸಭೆ
ಧನುಷ್ ಅವರಿಗೆ ತಮಿಳುನಾಡಿನಲ್ಲಿ ಮಾಸ್ ಫ್ಯಾನ್ ಫಾಲೋಯಿಂಗ್ ಇದೆ. ಇತ್ತೀಚೆಗೆ 'ಆಲ್ ಇಂಡಿಯಾ ಧನುಷ್ ಫ್ಯಾನ್ಸ್ ವೆಲ್ಫೇರ್ ಅಸೋಸಿಯೇಷನ್' ಆಯೋಜಿಸಿದ್ದ ವಿಶೇಷ ಸಭೆಯು ಈ ಚರ್ಚೆಯನ್ನು ಮತ್ತಷ್ಟು ಮುಂಚೂಣಿಗೆ ತಂದಿದೆ. ಈ ಸಭೆಯಲ್ಲಿ ಅಭಿಮಾನಿಗಳು ಬಿಡುಗಡೆ ಮಾಡಿದ ವಿಶೇಷ ಧ್ವಜವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಧನುಷ್ ಅವರು ಕೈಮುಗಿದು ನಮಸ್ಕರಿಸುತ್ತಿರುವ ಫೋಟೋದೊಂದಿಗೆ, ಒಂದು ನಕ್ಷತ್ರ ಹಾಗೂ ಕೆಂಪು ಮತ್ತು ಬಿಳಿ ಬಣ್ಣಗಳ ಮಿಶ್ರಣದಲ್ಲಿ ವಿನ್ಯಾಸಗೊಳಿಸಲಾದ ಈ ಧ್ವಜವು ರಾಜಕೀಯ ಪಕ್ಷಗಳ ಧ್ವಜದ ಮಾದರಿಯನ್ನೇ ಹೋಲುತ್ತಿರುವುದು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
Dhanush: ಪ್ರೇಮಿಗಳ ದಿನದಂದೇ ಹಸೆಮಣೆ ಏರಲು ರೆಡಿಯಾದ್ರಾ ಧನುಷ್-ಮೃಣಾಲ್ ಠಾಕೂರ್?
ವಿಜಯ್ ಅವರು ಕೂಡ ರಾಜಕೀಯ ಪಕ್ಷ ಪ್ರಕಟಿಸುವ ಮುನ್ನ ಒಂದು ದಶಕಗಳ ಕಾಲ ‘ವಿಜಯ್ ಮಕ್ಕಳ್ ಇಯಕ್ಕಂ’ (VMI) ಸಂಘದ ಮೂಲಕ ತಳಮಟ್ಟದಲ್ಲಿ ಕೆಲಸ ಮಾಡಿದ್ದರು. ಈಗ ಧನುಷ್ ಅಭಿಮಾನಿ ಸಂಘಗಳು ಹಮ್ಮಿಕೊಳ್ಳುತ್ತಿರುವ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಈ ವಿಶೇಷ ಧ್ವಜವನ್ನು ಗಮನಿಸಿದರೆ, ಇದು ಕೂಡ ಅವರ ರಾಜಕೀಯ ರಂಗಪ್ರವೇಶದ ಮುನ್ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ.
Kriti Sanon: ಧನುಷ್-ಕೃತಿ ನಟನೆಯ ʻತೇರೆ ಇಷ್ಕ್ ಮೇʼ ಒಟಿಟಿ ಎಂಟ್ರಿ ಯಾವಾಗ? ಸ್ಟ್ರೀಮಿಂಗ್ ಎಲ್ಲಿ?
ಕಸ್ತೂರಿ ರಾಜಾ ನೀಡಿದ್ದರು ರಹಸ್ಯ ಸುಳಿವು
ಈಚೆಗೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧನುಷ್ ತಂದೆ, ಹಿರಿಯ ನಿರ್ದೇಶಕ ಕಸ್ತೂರಿ ರಾಜಾ ಅವರು ನೀಡಿರುವ ಹೇಳಿಕೆ ಈ ಅನುಮಾನವನ್ನು ಮತ್ತಷ್ಟು ಬಲಪಡಿಸಿತ್ತು. "ರಾಜಕೀಯಕ್ಕೆ ಯಾರು ಬೇಕಾದರೂ ಬರಬಹುದು, ಅದು ಅವರ ವೈಯಕ್ತಿಕ ಇಷ್ಟ. ಭವಿಷ್ಯದಲ್ಲಿ ಧನುಷ್ ಅಥವಾ ಸೆಲ್ವರಾಘವನ್ ರಾಜಕೀಯಕ್ಕೆ ಕಾಲಿಡಬಹುದು. ನಮಗೆ ರಾಜಕೀಯ ಬೇಡ ಎನ್ನಲು ನಾವ್ಯಾರು? ನನಗಂತೂ ವಯಸ್ಸಾಗಿದೆ, ನಾನು ಬರುವುದಿಲ್ಲ. ಆದರೆ ನನ್ನ ಮಕ್ಕಳು ಅಥವಾ ಮೊಮ್ಮಕ್ಕಳು ರಾಜಕೀಯಕ್ಕೆ ಬರಬಹುದು" ಎಂದು ಅವರು ಹೇಳಿದ್ದರು.
ಸಿನಿಮಾಗಳಲ್ಲಿ ಬ್ಯುಸಿ ಇರೋ ಧನುಷ್
ಸದ್ಯ ಧನುಷ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಾಜಕೀಯ ಪ್ರವೇಶದ ಬಗ್ಗೆ ಅವರಿಂದ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದಾಗ್ಯೂ, ತಮಿಳುನಾಡು ರಾಜಕೀಯಕ್ಕೂ ಮತ್ತು ಸಿನಿರಂಗಕ್ಕೂ ಇರುವ ಅವಿನಾಭಾವ ಸಂಬಂಧವನ್ನು ನೋಡಿದರೆ, ಧನುಷ್ ಅವರ ಈ 'ಧ್ವಜ ರಾಜಕೀಯ'ದ ಹಿಂದಿನ ಅಸಲಿ ತಂತ್ರ ಏನಿರಬಹದು ಎಂಬ ಕುತೂಹಲವನ್ನಂತೂ ಹುಟ್ಟುಹಾಕಿದೆ.