ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕನ್ನಡಕ್ಕೆ ರಿಮೇಕ್‌ ಆಗಲಿದೆಯಾ ʻದೃಶ್ಯಂ 3ʼ ಸಿನಿಮಾ? ಕುತೂಹಲ ಹುಟ್ಟಿಸಿದ ನಿರ್ಮಾಪಕರ ಆ ಒಂದು ನಡೆ!

ಮಲಯಾಳಂನ ಜನಪ್ರಿಯ ಸಸ್ಪೆನ್ಸ್ ಥ್ರಿಲ್ಲರ್ 'ದೃಶ್ಯಂ 3' ಮೇ 21ರಂದು ಬಿಡುಗಡೆಗೆ ಸಜ್ಜಾಗಿದ್ದು, ಕನ್ನಡ ಆವೃತ್ತಿಯ ಬಗ್ಗೆ ಕುತೂಹಲ ಮೂಡಿಸಿದೆ. ತಮಿಳು ಮತ್ತು ತೆಲುಗಿಗೆ ಸಿನಿಮಾ ಡಬ್ ಆಗುತ್ತಿದ್ದರೂ, ಕನ್ನಡ ಡಬ್ಬಿಂಗ್ ಬಗ್ಗೆ ಮಾಹಿತಿಯಿಲ್ಲದಿರುವುದು ರವಿಚಂದ್ರನ್ ನಟನೆಯಲ್ಲಿ ರಿಮೇಕ್ ಆಗುವ ಮುನ್ಸೂಚನೆ ನೀಡಿದೆ.

ಮಲಯಾಳಂ ಚಿತ್ರರಂಗದ ಅತಿ ದೊಡ್ಡ ಸಸ್ಪೆನ್ಸ್ ಥ್ರಿಲ್ಲರ್ ಫ್ರಾಂಚೈಸಿ ‘ದೃಶ್ಯಂ’ ಈಗ ಮೂರನೇ ಭಾಗದೊಂದಿಗೆ ಮರಳುತ್ತಿದೆ. ಮೇ 21ರಂದು ವಿಶ್ವಾದ್ಯಂತ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಅದ್ದೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಆದರೆ, ಈ ಚಿತ್ರದ ಬಿಡುಗಡೆಗೂ ಮುನ್ನ ನಿರ್ಮಾಪಕರು ತೆಗೆದುಕೊಂಡಿರುವ ಒಂದು ನಡೆಯುʻದೃಶ್ಯಂ 3ʼ ಸಿನಿಮಾ ಕನ್ನಡಕ್ಕೆ ರಿಮೇಕ್‌ ಆಗಲಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ʻದೃಶ್ಯಂʼ ರಿಮೇಕ್‌ನಲ್ಲಿ ರವಿಚಂದ್ರನ್‌

‌ಕನ್ನಡಕ್ಕೆ ರಿಮೇಕ್‌ ಆದ 'ದೃಶ್ಯಂ' ಫ್ರಾಂಚೈಸಿಯ ಎರಡು ಪಾರ್ಟ್‌ಗಳಲ್ಲಿ ನಟ ರವಿಚಂದ್ರನ್‌ ಅವರು ಬಣ್ಣ ಹಚ್ಚಿದ್ದರು. ಅಲ್ಲಿ ಮೋಹನ್‌ಲಾಲ್‌ ಮಾಡಿದಷ್ಟೇ ಮೋಡಿಯನ್ನು ಕನ್ನಡದಲ್ಲೂ ರವಿಚಂದ್ರನ್‌ ಮಾಡುವ ಪ್ರಯತ್ನ ಮಾಡಿದ್ದರು. ಸಾಮಾನ್ಯವಾಗಿ ಪ್ಯಾನ್-ಇಂಡಿಯಾ ಸಿನಿಮಾಗಳು ದಕ್ಷಿಣದ ಎಲ್ಲಾ ಭಾಷೆಗಳಿಗೂ ಡಬ್ ಆಗುತ್ತವೆ. ಅದರಂತೆ ಮಲಯಾಳಂನ ‘ದೃಶ್ಯಂ 3’ ಚಿತ್ರವನ್ನು ತಮಿಳು ಮತ್ತು ತೆಲುಗು ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

Drishyam 3: ‘ದೃಶ್ಯಂ 3’ ಹಿಂದಿ ಚಿತ್ರದಲ್ಲಿ ಭಾರೀ ಬದಲಾವಣೆ; ಹೇಗಿರಲಿದೆ?

ಈಗಾಗಲೇ ತೆಲುಗು, ತಮಿಳು ವರ್ಷನ್‌ನ ಟ್ರೇಲರ್‌ಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿವೆ. ವಿಶೇಷವೆಂದರೆ, ತೆಲುಗಿನಲ್ಲಿ ವೆಂಕಟೇಶ್ ನಟನೆಯ ‘ದೃಶ್ಯಂ’ ರಿಮೇಕ್ ಜನಪ್ರಿಯವಾಗಿದ್ದರೂ, ಈ ಬಾರಿ ಅಲ್ಲಿ ರಿಮೇಕ್ ಬದಲಿಗೆ ನೇರವಾಗಿ ಡಬ್ ಮಾಡಲಾಗುತ್ತಿದೆ. ಆದರೆ, ಕನ್ನಡ ಆವೃತ್ತಿಯ ಬಗ್ಗೆ ಮಾತ್ರ ಚಿತ್ರತಂಡ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇದು ‘ದೃಶ್ಯಂ 3’ ಕನ್ನಡಕ್ಕೆ ರಿಮೇಕ್ ಆಗುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಮತ್ತೆ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರಾ?

ಕನ್ನಡದಲ್ಲಿ ತೆರೆಕಂಡ ‘ದೃಶ್ಯ’ ಮತ್ತು ‘ದೃಶ್ಯ 2’ ಚಿತ್ರಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮೋಹನ್‌ಲಾಲ್ ನಿರ್ವಹಿಸಿದ್ದ ‘ಜಾರ್ಜ್ ಕುಟ್ಟಿ’ ಪಾತ್ರಕ್ಕೆ ‘ರಾಜೇಂದ್ರ ಪೊನ್ನಪ್ಪ’ನಾಗಿ ಜೀವ ತುಂಬಿದ್ದರು. ಮೊದಲ ಭಾಗ ದೊಡ್ಡ ಯಶಸ್ಸು ಕಂಡರೆ, ಎರಡನೇ ಭಾಗ ಸಾಧಾರಣ ಮಟ್ಟದ ಯಶಸ್ಸು ಗಳಿಸಿತ್ತು. ಈಗ ಮೂರನೇ ಭಾಗದ ಕನ್ನಡ ಡಬ್ಬಿಂಗ್ ಬಗ್ಗೆ ಮಾಹಿತಿಯಿಲ್ಲದಿರುವುದು, ಮತ್ತೆ ರಾಜೇಂದ್ರ ಪೊನ್ನಪ್ಪನಾಗಿ ರವಿಚಂದ್ರನ್ ಅವರು ಬಣ್ಣ ಹಚ್ಚಲಿದ್ದಾರೆಯೇ ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

Drishyam 3 trailer out: ದೃಶ್ಯಂ 3 ಟ್ರೈಲರ್‌ ಔಟ್‌! ಜಾರ್ಜ್‌ಕುಟ್ಟಿಗೆ ಇದೇಕೆ ಪಶ್ಚಾತ್ತಾಪ, ಭಯ?

ಒಟ್ಟಿನಲ್ಲಿ, ಕೊನೆ ಕ್ಷಣದಲ್ಲಿ ಕನ್ನಡಕ್ಕೆ ಡಬ್ ಆಗಿ ಸಿನಿಮಾ ತೆರೆಗೆ ಬರುತ್ತದೋ ಅಥವಾ ರವಿಚಂದ್ರನ್ ಅವರ ಸಾರಥ್ಯದಲ್ಲಿ ರಿಮೇಕ್ ಆಗಲಿದೆಯೋ ಎಂಬ ಸಸ್ಪೆನ್ಸ್ ಮಾತ್ರ ಸದ್ಯಕ್ಕೆ ‘ದೃಶ್ಯಂ’ ಸಿನಿಮಾದಷ್ಟೇ ಕುತೂಹಲಕಾರಿಯಾಗಿದೆ.

ಹಿಂದಿಗೆ ಬೇರೆ ಕಥೆ

ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ, ಹಿಂದಿಯಲ್ಲಿ ಅಜಯ್ ದೇವಗನ್ ನಟನೆಯ ‘ದೃಶ್ಯಂ 3’ ಮಲಯಾಳಂ ಕಥೆಗಿಂತ ಭಿನ್ನವಾಗಿರಲಿದೆ. ಮಲಯಾಳಂ ಆವೃತ್ತಿಯು ಕುಟುಂಬದ ಡ್ರಾಮಾದ ಮೇಲೆ ಕೇಂದ್ರೀಕರಿಸಿದರೆ, ಹಿಂದಿ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಥೆ ಮತ್ತು ಚಿತ್ರಕಥೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ನಿರ್ದೇಶಕ ಅಭಿಷೇಕ್ ಪಾಠಕ್ ತಿಳಿಸಿದ್ದಾರೆ.

"ದೃಶ್ಯಂ 2 ಚಿತ್ರದ ಕಥೆಯು ಒಂದು ನಿರ್ದಿಷ್ಟ ಹಂತದಲ್ಲಿ ಕೊನೆಗೊಂಡಿತ್ತು ಮತ್ತು 'ದೃಶ್ಯಂ 3' ಅಲ್ಲಿಂದಲೇ ಆರಂಭವಾಗುತ್ತದೆ. ಮಲಯಾಳಂ ಆವೃತ್ತಿಯೂ ಅದೇ ಹಂತದಿಂದ ಶುರುವಾಗುತ್ತದೆ. ನಾವು ಹಿಂದಿಯ 'ದೃಶ್ಯಂ 2' ಚಿತ್ರದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿದ್ದೆವು, ಪ್ರೇಕ್ಷಕರು ಕೂಡ ಅದನ್ನು ಮೆಚ್ಚಿಕೊಂಡಿದ್ದರು. ಈ ಭಾಗಕ್ಕೂ ನಾವು ಕಥೆ ಮತ್ತು ಚಿತ್ರಕಥೆಯಲ್ಲಿ ಬದಲಾವಣೆ ಮಾಡಿದ್ದೇವೆ ಮತ್ತು ಪ್ರೇಕ್ಷಕರು ಆ ವ್ಯತ್ಯಾಸವನ್ನು ಖಂಡಿತಾ ಗಮನಿಸುತ್ತಾರೆ" ಎಂದು ನಿರ್ದೇಶಕ ಅಭಿಷೇಕ್‌ ಪಾಠಕ್ ಹೇಳಿದ್ದಾರೆ.