ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ವಾತಂತ್ರ್ಯ ದಿನಾಚರಣೆಯಂದು ಯೋಧರ ಜೊತೆ ಕಾಲ ಕಳೆದ ಸೈಫ್ ಅಲಿ ಖಾನ್; ʻಭಾರತೀಯ ಸೇನೆ ಸದಾ ನಮ್ಮನ್ನು ಕಾಪಾಡುತ್ತದೆ ಅಂತ ನನ್ ಮಕ್ಕಳಿಗೆ ಹೇಳ್ತಿರ್ತಿನಿʼ ಎಂದ ನಟ

80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಜಮ್ಮು-ಕಾಶ್ಮೀರದ ಉರಿ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿ ಸೈನಿಕರೊಂದಿಗೆ ಸಮಯ ಕಳೆದಿದ್ದಾರೆ. ಯೋಧರೊಂದಿಗೆ ಭೋಜನ ಸವಿದು ಕ್ರಿಕೆಟ್ ಆಡಿದ ಅವರು, ಜಾಗತಿಕ ಸಂಘರ್ಷಗಳಿಂದ ಭಯಪಡುವ ತಮ್ಮ ಮಕ್ಕಳಿಗೆ ಭಾರತೀಯ ಸೇನೆಯೇ ರಕ್ಷಾಕವಚ ಎಂದು ಧೈರ್ಯ ತುಂಬುವುದಾಗಿ ತಿಳಿಸಿದರು.

80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಜಮ್ಮು ಮತ್ತು ಕಾಶ್ಮೀರದ ಉರಿ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿ ಭಾರತೀಯ ಯೋಧರೊಂದಿಗೆ ಸಮಯ ಕಳೆದಿದ್ದಾರೆ. ಎನ್‌ಡಿಟಿವಿಯ ಜನಪ್ರಿಯ ವಿಶೇಷ ಕಾರ್ಯಕ್ರಮ 'ಜೈ ಜವಾನ್'ನಲ್ಲಿ ಭಾಗವಹಿಸಿದ್ದ ಸೈಫ್, ಸೈನಿಕರ ತ್ಯಾಗ-ಬಲಿದಾನಗಳನ್ನು ಶ್ಲಾಘಿಸಿ, ಅವರೊಂದಿಗೆ ಊಟ ಮಾಡಿ, ಕ್ರಿಕೆಟ್ ಆಡಿ ಹುರಿದುಂಬಿಸಿದರು.

ಯೋಧರೊಂದಿಗೆ ಸಂವಾದ, ಭೋಜನ

ಕಾರ್ಯಕ್ರಮದ ನಿರೂಪಕಿ ಮೀನಾಕ್ಷಿ ಕಾಂಡ್ವಾಲ್ ಅವರೊಂದಿಗೆ ಉರಿ ಸೆಕ್ಟರ್‌ಗೆ ಆಗಮಿಸಿದ ಸೈಫ್ ಅಲಿ ಖಾನ್, ಸೇನಾ ಶಿಬಿರದ ಅಡುಗೆ ಕೋಣೆಗೆ ಭೇಟಿ ನೀಡಿ ಯೋಧರೊಂದಿಗೆ ಕುಳಿತು ಊಟ ಮಾಡಿದರು. ಬಳಿಕ ಸೈನಿಕರೊಂದಿಗೆ ಕ್ರಿಕೆಟ್ ಆಡಿದರು. ಸೈನಿಕರೊಂದಿಗೆ ಸಂವಾದ ನಡೆಸುವ ವೇಳೆ ಸೈಫ್ ತಮ್ಮ ಮಕ್ಕಳಾದ ತೈಮೂರ್ ಮತ್ತು ಜೆಹ್ ಅವರ ಕುರಿತು ಭಾವನಾತ್ಮಕ ಮಾತುಗಳನ್ನಾಡಿದರು.

"ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧಗಳು ಹಾಗೂ ಸಂಘರ್ಷಗಳನ್ನು ನೋಡಿ ತಮ್ಮ ಮಕ್ಕಳು ಭಯಪಡುತ್ತಿದ್ದಾರೆ. ʻಮುಂದೆ ಏನಾಗಬಹುದು? ನಮ್ಮನ್ನು ಯಾರು ರಕ್ಷಿಸುತ್ತಾರೆ?ʼ ಎಂದು ಮಕ್ಕಳು ಕೇಳಿದಾಗ, ʻಭಾರತೀಯ ಸೇನೆ ನಮ್ಮನ್ನು ಸದಾ ಸುರಕ್ಷಿತವಾಗಿಡುತ್ತದೆʼ ಅಂತ ಅವರಿಗೆ ಧೈರ್ಯ ತುಂಬಿದ್ದೇನೆ" ಎಂದು ಹೇಳಿದರರು. ತಮ್ಮ ಮಕ್ಕಳ ಪರವಾಗಿ ಸಮಸ್ತ ಸಶಸ್ತ್ರ ಪಡೆಗಳಿಗೆ ನಮನ ಸಲ್ಲಿಸಿದ ಅವರು, ಭಾರತೀಯ ಯೋಧರ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

Saif Ali Khan: ಕಾಕ್‌ಟೈಲ್ ಸಿನಿಮಾ ಆಫರ್‌ ಈ ನಟರು ತಿರಸ್ಕರಿಸಿದ್ದೇಕೆ? ಸೈಫ್ ಹೇಳಿದ್ದೇನು?

ಕಾಶ್ಮೀರ ನಂಟು ಮತ್ತು ಪ್ರವಾಸೋದ್ಯಮದ ಆಶಯ

ಕಾಶ್ಮೀರದ ಅದ್ಭುತ ನಿಸರ್ಗ ಸೌಂದರ್ಯವನ್ನು ಮುಕ್ತಕಂಠದಿಂದ ಹೊಗಳಿದ ಸೈಫ್, ಕಣಿವೆ ರಾಜ್ಯದ ಜೊತೆಗಿನ ತಮ್ಮ ಕೌಟುಂಬಿಕ ನಂಟನ್ನು ನೆನಪಿಸಿಕೊಂಡರು. ತಮ್ಮ ತಾಯಿ, ಖ್ಯಾತ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಅವರ ಚೊಚ್ಚಲ ಚಿತ್ರ 'ಕಾಶ್ಮೀರ್ ಕಿ ಕಲಿ'ಯ ಚಿತ್ರೀಕರಣ ಹಾಗೂ ಹಲವು ಹಿಟ್ ಹಾಡುಗಳು ಇದೇ ಕಣಿವೆಯಲ್ಲಿ ಸೆರೆಯಾಗಿದ್ದನ್ನು ಸ್ಮರಿಸಿದರು. ಕಾಶ್ಮೀರವು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಪ್ರವಾಸೋದ್ಯಮಕ್ಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಕ್ತವಾಗಿಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕನೂ ಈ ಸುಂದರ ತಾಣಕ್ಕೆ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಭೇಟಿ ನೀಡುವಂತಾಗಲಿ ಎಂದು ಆಶಿಸಿದರು.

ಐತಿಹಾಸಿಕ ಕಮಾನ್ ಅಮನ್ ಸೇತುವೆಗೆ ಭೇಟಿ

ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಝೇಲಂ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ, ಭಾರತ ಮತ್ತು ಪಾಕ್ ಆಕ್ರಮಿತ ಕಾಶ್ಮೀರವನ್ನು (PoK) ಸಂಪರ್ಕಿಸುವ ಐತಿಹಾಸಿಕ 'ಕಮಾನ್ ಅಮನ್ ಸೇತು'ವಿಗೆ ಸೈಫ್ ಭೇಟಿ ನೀಡಿದರು. ಗಡಿ ಠಾಣೆಯ ಮಹತ್ವವನ್ನು ಅಧಿಕಾರಿಗಳಿಂದ ತಿಳಿದುಕೊಂಡರು. ಸೈಫ್ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ.

ಸೆ.11ರಂದು ʻಹೈವಾನ್‌ʼ ಸಿನಿಮಾ ರಿಲೀಸ್‌

ಸೈಫ್ ಅಲಿ ಖಾನ್ ಹೊಸ ಸಿನಿಮಾ 'ಹೈವಾನ್' ಸೆ.11ರಂದು ಬಿಡುಗಡೆ ಆಗಲಿದೆ. ಪ್ರಿಯದರ್ಶನ್ ನಿರ್ದೇಶನದ ಈ ಥ್ರಿಲ್ಲರ್ ಚಿತ್ರದಲ್ಲಿ ಸೈಫ್ ಮೊದಲ ಬಾರಿಗೆ ಅಂಧ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸುಮಾರು 18 ವರ್ಷಗಳ ನಂತರ ಅಕ್ಷಯ್ ಕುಮಾರ್ ಮತ್ತು ಸೈಫ್ ಒಟ್ಟಿಗೆ ನಟಿಸಿರುವ ಈ ಚಿತ್ರದಲ್ಲಿ ಬೊಮನ್ ಇರಾನಿ, ಸಯಾಮಿ ಖೇರ್ ಹಾಗೂ ಶ್ರಿಯಾ ಪಿಲ್ಗಾಂವ್ಕರ್ ಪ್ರಮುಖ ತಾರಾಗಣದಲ್ಲಿದ್ದಾರೆ.