ʻಸೂಪರ್‌ಸ್ಟಾರ್ʼ ರಜನಿಕಾಂತ್ ಅಭಿನಯದ ಹೈ-ವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ‘ಜೈಲರ್ 2’ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆದಿದೆ. ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 710.35 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಸಾರ್ವಕಾಲಿಕ ಹೆಗ್ಗಳಿಕೆಗೆ ಪಾತ್ರವಾಗಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ತನ್ನ 2ನೇ ಭಾನುವಾರದಂದು (ಅ.25) ದೇಶಾದ್ಯಂತ ಭರ್ಜರಿ ಗಳಿಕೆ ಕಾಣುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ.
ವಿದೇಶದಲ್ಲೂ ಭರ್ಜರಿ ಕಮಾಯಿ
ಬಾಕ್ಸ್ ಆಫೀಸ್ ಮೂಲಗಳ ಪ್ರಕಾರ, ಚಿತ್ರವು 11ನೇ ದಿನದಂದು ಭಾರತದಲ್ಲಿ ಒಟ್ಟು 25.70 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಶನಿವಾರದ ಗಳಿಕೆಗೆ (24.15 ಕೋಟಿ) ಹೋಲಿಸಿದರೆ ಭಾನುವಾರದ ಕಲೆಕ್ಷನ್‌ನಲ್ಲಿ ಶೇ. 6.4 ರಷ್ಟು ಗಮನಾರ್ಹ ಏರಿಕೆ ಕಂಡುಬಂದಿದೆ. ಇದರೊಂದಿಗೆ ಭಾರತೀಯ ಚಿತ್ರಮಂದಿರಗಳಿಂದ ಒಟ್ಟು 466.85 ಕೋಟಿ ಗ್ರಾಸ್ ಸಂಗ್ರಹವಾಗಿದ್ದರೆ, ಭಾನುವಾರದ ಅಂದಾಜು 10 ಕೋಟಿ ರೂ. ಗಳಿಕೆ ಸೇರಿದಂತೆ ವಿದೇಶಿ ಮಾರುಕಟ್ಟೆಯಿಂದ ಒಟ್ಟು 243.50 ಕೋಟಿ ಗ್ರಾಸ್ ಕಲೆಕ್ಷನ್ ಹರಿದುಬಂದಿದೆ.
ಎಂದಿನಂತೆ ತಮಿಳು ಆವೃತ್ತಿಯು ಮುಂಚೂಣಿಯಲ್ಲಿದ್ದು, ನಿನ್ನೆ ಭಾನುವಾರ 5,683 ಶೋಗಳಿಂದ ₹17.35 ಕೋಟಿ ನೆಟ್ ಸಂಗ್ರಹಿಸಿದೆ. ತೆಲುಗು ಆವೃತ್ತಿಯು ಶೇ. 40.4 ರಷ್ಟು ಆಕ್ಯುಪೆನ್ಸಿಯೊಂದಿಗೆ ₹4.50 ಕೋಟಿ, ಹಿಂದಿ ಆವೃತ್ತಿಯು ₹3.15 ಕೋಟಿ ಹಾಗೂ ಕನ್ನಡ ಆವೃತ್ತಿಯು ಶೇ. 48 ರಷ್ಟು ಆಕ್ಯುಪೆನ್ಸಿಯೊಂದಿಗೆ ₹70 ಲಕ್ಷ ಗಳಿಕೆ ನೀಡಿವೆ.
ರಜನಿಕಾಂತ್ ಹೆಸರಿನಲ್ಲಿ ಹೊಸ ದಾಖಲೆ
ಕಾಲಿವುಡ್‌ನಲ್ಲಿ ಇದುವರೆಗೆ ಶಂಕರ್ ಹಾಗೂ ರಜನಿಕಾಂತ್ ಕಾಂಬಿನೇಷನ್‌ನ ‘2.0’ ಸಿನಿಮಾ ಹೆಸರಿನಲ್ಲಿದ್ದ (₹690-700 ಕೋಟಿ) ಸಾರ್ವಕಾಲಿಕ ಗರಿಷ್ಠ ಗಳಿಕೆಯ ದಾಖಲೆಯನ್ನು ಇದೀಗ ‘ಜೈಲರ್ 2’ ಮುರಿದುಹಾಕಿದೆ. ಈ ಮೂಲಕ ತಮ್ಮದೇ ಸಿನಿಮಾದ ದಾಖಲೆಯನ್ನು ತಾವೇ ಬ್ರೇಕ್ ಮಾಡಿದ ಹೆಗ್ಗಳಿಕೆ ರಜನಿಕಾಂತ್ ಅವರದ್ದಾಗಿದೆ. ಅಷ್ಟೇ ಅಲ್ಲದೆ, ತಮಿಳು ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಟಾಪ್ 5 ಸಿನಿಮಾಗಳ ಪಟ್ಟಿಯಲ್ಲಿ ನಾಲ್ಕು ಚಿತ್ರಗಳು (‘ಜೈಲರ್ 2’, ‘2.0’, ‘ಜೈಲರ್’ ಮತ್ತು ‘ಕೂಲಿ’) ತಲೈವಾ ರಜನಿಕಾಂತ್ ಅವರದ್ದೇ ಆಗಿದ್ದು, ದಳಪತಿ ವಿಜಯ್ ಅಭಿನಯದ ‘ಲಿಯೋ’ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮತ್ತೊಂದು ಚಿತ್ರವಾಗಿದೆ.