ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್‌-ಕಮಲ್‌ ಹಾಸನ್‌

Lokesh Kanagaraj: ಬರೋಬ್ಬರಿ 46 ವರ್ಷಗಳ ಬಳಿಕ ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌ ತೆರೆಮೇಲೆ ಒಂದಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಸಿನಿಪ್ರಿಯರು ಕುತೂಹಲಗೊಂಡಿದ್ದಾರೆ. ಈ ಚಿತ್ರಕ್ಕೆ ಸದ್ಯ ಕಾಲಿವುಡ್‌ನಲ್ಲಿ ಹೊಸ ಬಗೆಯ ಚಿತ್ರಗಳ ಮೂಲಕ ಗಮನ ಸೆಳೆದ ಲೋಕೇಶ್‌ ಕನಕರಾಜ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ಮತ್ತೆ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್‌-ಕಮಲ್‌ ಹಾಸನ್‌

Ramesh B Ramesh B Aug 19, 2025 6:20 PM

ಚೆನ್ನೈ: ಭಾರತೀಯ ಚಿತ್ರರಂಗದ ದಿಗ್ಗಜ ಕಲಾವಿದರಾದ ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌ (Rajinikanth-Kamal Haasan) ಮತ್ತೊಮ್ಮೆ ತೆರೆ ಮೇಲೆ ಒಂದಾಗುವ ಸಮಯ ಸನ್ನಿಹಿತವಾಗಿದೆ. ಬರೋಬ್ಬರಿ 4 ದಶಕಗಳ ಬಳಿಕ ಇವರು ಜತೆಯಾಗಿ ನಟಿಸಲಿದ್ದು, ಸುದ್ದಿ ತಿಳಿದು ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಆಗಸ್ಟ್‌ 14ರಂದು ರಿಲೀಸ್‌ ಆಗಿ ವಿಶ್ವಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ರಜನಿಕಾಂತ್‌ ನಟನೆಯ ʼಕೂಲಿʼ (Coolie) ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವ ಲೋಕೇಶ್‌ ಕನಕರಾಜ್‌ (Lokesh Kanagaraj) ಅವರೇ ಈ ಸಿನಿಮಾವನ್ನೂ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದ್ದು, ಅಧಿಕೃತ ಪ್ರಕಟಣೆ ಇನ್ನೂ ಹೊರ ಬಿದ್ದಿಲ್ಲ.

ಎಲ್ಲವೂ ಅಂದುಕೊಂಡಂತಾದರೆ ರಜನಿಕಾಂತ್‌ ಮತ್ತು ಕಮಲ್‌ ಆಹಾಸನ್‌ ಬರೋಬ್ಬರಿ 46 ವರ್ಷಗಳ ಬಳಿಕ ಒಟ್ಟಿಗೆ ನಟಿಸಿದಂತಾಗಲಿದೆ. ಇದು ಕೂಡ ಟಿಪಿಕಲ್‌ ಲೋಕೇಶ್‌ ಕನಕರಾಜ್‌ ಶೈಲಿಯ ಚಿತ್ರವಾಗಿರಲಿದ್ದು, ಗ್ಯಾಂಗ್‌ಸ್ಟರ್‌ ಕಥೆಯನ್ನು ಒಳಗೊಂಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಸ್ವತಃ ಕಮಲ್‌ ಹಾಸನ್‌ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಸದ್ಯ ಈ ಸುದ್ದಿ ಅಂತೆ-ಕಂತೆಯ ರೂಪದಲ್ಲಿದ್ದು, ಶೀಘ್ರದಲ್ಲಿಯೇ ಘೋಷಣೆ ಹೊರ ಬೀಳಲಿದೆ. ಕೋವಿಡ್‌ 19 ಕಾಣಿಸಿಕೊಳ್ಳುವುದಕ್ಕಿಂತ ಮೊದಲೇ ಈ ಚಿತ್ರ ಸೆಟ್ಟೇರಬೇಕಿತ್ತು. ಕಾರಣಾಂತರದಿಂದ ಮುಂದೂಡಿಕೆಯಾಗಿತ್ತು.



ಈ ಸುದ್ದಿಯನ್ನೂ ಓದಿ: PM Narendra Modi: ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ರಜನಿಕಾಂತ್‌; ಪ್ರಧಾನಿ ಮೋದಿ ಅಭಿನಂದನೆ

ಕಮಲ್‌ ಚಿತ್ರದ ಮೂಲಕವೇ ಕಾಲಿವುಡ್‌ಗೆ ಕಾಲಿಟ್ಟಿದ್ದ ರಜನಿಕಾಂತ್‌

ವಿಶೇಷ ಎಂದರೆ 1975ರಲ್ಲಿ ತೆರೆಕಂಡ ಕಮಲ್‌ ಹಾಸನ್‌ ನಾಯಕನಾಗಿ ಕಾಣಿಸಿಕೊಂಡ ʼಅಪೂರ್ವ ರಾಗಂಗಳ್‌ʼ ತಮಿಳು ಸಿನಿಮಾದಲ್ಲಿ ರಜನಿಕಾಂತ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ರಜನಿಕಾಂತ್‌ ಅವರ ಮೊದಲ ಚಿತ್ರವಾಗಿತ್ತು. ಇನ್ನು 1979ರಲ್ಲಿ ರಿಲೀಸ್‌ ಆದ ʼತಾಯಿಇಲ್ಲಾಮಲ್‌ ನಾನ್‌ ಇಲ್ಲೈʼ ಚಿತ್ರದಲ್ಲಿ ಕಮಲ್‌ ಹಾಸನ್‌ ನಾಯಕನಾಗಿ ಅಭಿನಯಿಸಿದರೆ, ರಜನಿಕಾಂತ್‌ ಅತಿಥಿ ಪಾತ್ರದಲ್ಲಿ ಮೋಡಿ ಮಾಡಿದ್ದರು. ಅದಾದ ಬಳಿಕ ಇವರು ಜತೆಯಾಗಿ ನಟಿಸಿರಲಿಲ್ಲ. ಇದೀಗ ಬರೋಬ್ಬರಿ 4 ದಶಕಗಳ ಬಳಿಕ ಇವರು ತೆರೆಮೇಲೆ ಒಂದಾಗುತ್ತಿರುವುದು ಕುತೂಹಲದ ಜತೆಗೆ ನಿರೀಕ್ಷೆ ಮೂಡಿಸಿದೆ.

ಇಬ್ಬರ ಚಿತ್ರಕ್ಕೂ ಲೋಕೇಶ್‌ ಆ್ಯಕ್ಷನ್‌ ಕಟ್‌

ವಿಶೇಷ ಎಂದರೆ ಕಮಲ್‌ ಹಾಸನ್‌ ಮತ್ತು ರಜನಿಕಾಂತ್‌ ಅವರ ಪ್ರತ್ಯೇಕ ಸಿನಿಮಾಗಳನ್ನು ಈಗಾಗಲೇ ಲೋಕೇಶ್‌ ಕನಕರಾಜ್‌ ನಿರ್ದೇಶಿಸಿದ್ದು, ಇದೇ ಮೊದಲ ಬಾರಿಗೆ ಇಬ್ಬರಿಗೂ ಒಂದೇ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳುವ ವಕಾಶ ಪಡೆದುಕೊಂಡಿದ್ದಾರೆ. 2022ರಲ್ಲಿ ರಿಲೀಸ್‌ ಆದ ಲೋಕೇಶ್‌ ಕನಕರಾಜ್‌ ನಿರ್ದೇಶನದ ʼವಿಕ್ರಂʼ ಸಿನಿಮಾದಲ್ಲಿ ಕಮಲ್‌ ಹಾಸನ್‌ ನಾಯಕನಾಗಿ ಕಾಣಿಸಿಕೊಂಡಿದ್ದರು. ಈ ಆ್ಯಕ್ಷನ್‌ ಡ್ರಾಮ ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 500 ಕೋಟಿ ರೂ. ಬಾಚಿಕೊಂಡಿತ್ತು. ಇನ್ನು ಇತ್ತೀಚೆಗೆ ರಿಲೀಸ್‌ ಆದ ರಜನಿಕಾಂತ್‌ ಅವರ ʼಕೂಲಿʼ ಸಿನಿಮಾಕ್ಕೂ ಲೋಕೇಶ್‌ ಕನಕರಾಜ್‌ ನಿರ್ದೇಶನವಿದೆ. ಇದಕ್ಕೆ ವಿಮರ್ಶಕರಿಂದ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದಾಗ್ಯೂ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ಉಪೇಂದ್ರ, ರಚಿತಾ ರಾಮ್‌, ಸೌಬಿನ್‌ ಶಹೀರ್‌, ಶ್ರುತಿ ಹಾಸನ್‌ ಮತ್ತಿತರರು ಮುಖ್ಯ ಪಾತ್ರದಲ್ಲಿದ್ದಾರೆ.

ಸದ್ಯಕ್ಕೆ ಅನುಮಾನ

ಲೋಕೇಶ್‌ ಕನಕರಾಜ್‌-ರಜನಿಕಾಂತ್‌-ಕಮಲ್‌ ಹಾಸನ್‌ ಕಾಂಬಿನೇಷನ್‌ನ ಚಿತ್ರ ಸದ್ಯದಲ್ಲಿ ಆರಂಭವಾಗುವುದು ಅನುಮಾನ. ಮೂವರೂ ಬೇರೆ ಬೇರೆ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದು, ಇವು ಮುಗಿದ ಮೇಲೆಯೇ ಈ ಚಿತ್ರ ಸೆಟ್ಟೇರಲಿದೆ.