ದಳಪತಿ ವಿಜಯ್ ಅವರ ʻಜನ ನಾಯಗನ್ʼ ಸಿನಿಮಾವು ತೆರೆಗೆ ಬರುವುದಕ್ಕೆ ಸಜ್ಜಾಗಿತ್ತು. ಸೆನ್ಸಾರ್ ಮತ್ತು ಎಲೆಕ್ಷನ್ ಕಾರಣಗಳಿಂದ ಈ ಸಿನಿಮಾವನ್ನು ರಿಲೀಸ್ ಮಾಡಲು ಸಾಧ್ಯವಾಗಿರಲಿಲ್ಲ. ತಮಿಳುನಾಡು ಚುನಾವಣೆ ಮುಗಿಯುತ್ತಿದ್ದಂತೆಯೇ, ಈ ಸಿನಿಮಾವನ್ನು ರಿಲೀಸ್ ಮಾಡುವುದು ಚಿತ್ರತಂಡ ನಿರ್ಧಾರವಾಗಿತ್ತು. ಆದರೆ ಅಷ್ಟರೊಳಗೆ ಯಾರೋ ಕಿಡಿಗೇಡಿಗಳು ಈ ಚಿತ್ರದ ಒಂದಷ್ಟು ದೃಶ್ಯಗಳನ್ನು ಲೀಕ್ ಮಾಡಿದ್ದಾರೆ.
ಚಿತ್ರತಂಡದ ವರ್ಷಗಳ ಪರಿಶ್ರಮವನ್ನು ಹೀಗೆ ಹಾಳು ಮಾಡಿರುವವರ ವಿರುದ್ಧ ಚಿತ್ರರಂಗದ ಗಣ್ಯರು ಬೇಸರ ಹೊರಹಾಕಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ರಿಷಬ್ ಶೆಟ್ಟಿ, ವಿಜಯ್ ದೇವರಕೊಂಡ ಮುಂತಾದವರು ಇದರ ಬಗ್ಗೆ ಧ್ವನಿ ಎತ್ತಿದ್ದಾರೆ.
Jana Nayagan: 'ಜನ ನಾಯಗನ್' ದೃಶ್ಯ ಲೀಕ್; ಬೆಂಬಲಕ್ಕೆ ನಿಂತ ತಾರೆಯರು
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು
"ಜನ ನಾಯಗನ್ ಸಿನಿಮಾವನ್ನು ಯಾರೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿರುವುದು ಆಘಾತ ಮತ್ತು ನೋವು ಉಂಟುಮಾಡಿದೆ. ಚಲನಚಿತ್ರ ಸಂಘಗಳು ಇದರ ವಿರುದ್ಧ ಧ್ವನಿ ಎತ್ತಬೇಕು ಮತ್ತು ಸರ್ಕಾರವು ಇದಕ್ಕೆ ಕಾರಣರಾದವರನ್ನು ಗುರುತಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಅಪರಾಧಗಳು ಮುಂದಿನ ದಿನಗಳಲ್ಲಿ ಮುಂದುವರಿಯಲು ಬಿಡಬಾರದು" ಎಂದು ʻಸೂಪರ್ ಸ್ಟಾರ್ʼ ರಜನಿಕಾಂತ್ ಅವರು ಆಗ್ರಹಿಸಿದ್ದಾರೆ.
ರಜನಿಕಾಂತ್ ಅವರ ಟ್ವೀಟ್
Thalapathy Vijay: ‘ಜನ ನಾಯಗನ್’ ದೃಶ್ಯ ಲೀಕ್: ಅಭಿಮಾನಿಗಳು ಗರಂ
ಆ ಶಕ್ತಿಯನ್ನು ಇಂದೇ ಕೊಲ್ಲಬೇಡಿ
"ಸಿನಿಮಾ ಎಂಬುದು ಆಸೆ, ಕನಸು ಮತ್ತು ಪ್ರೀತಿಯ ಮೇಲೆ ನಿರ್ಮಾಣವಾಗುತ್ತದೆ. ಪ್ರೇಕ್ಷಕರಿಗೆ ಮನರಂಜನೆ ನೀಡಲು ಅಸಂಖ್ಯಾತ ಜನರು ದಣಿವರಿಯಿಲ್ಲದೆ ಶ್ರಮಿಸುತ್ತಾರೆ. ಯಾರಾದರೂ ಆ ಪ್ರಯತ್ನಕ್ಕೆ ಸಣ್ಣ ರೀತಿಯಲ್ಲಾದರೂ ಧಕ್ಕೆ ತರಲು ಪ್ರಯತ್ನಿಸಿದಾಗ, ಅದು ಅದರಲ್ಲಿ ತೊಡಗಿರುವ ಪ್ರತಿಯೊಬ್ಬರ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ʻಜನ ನಾಯಗನ್ʼ ಸಿನಿಮಾ ಸೋರಿಕೆಯಾಗಿರುವುದು ಅತ್ಯಂತ ದುರದೃಷ್ಟಕರ. ಸಿನಿಪ್ರಿಯರಲ್ಲಿ ನನ್ನ ಮನವಿ ಏನೆಂದರೆ, ದಯವಿಟ್ಟು ಕಲಾವಿದರ ಶ್ರಮವನ್ನು ಗೌರವಿಸಿ ಮತ್ತು ಸೋರಿಕೆಯಾದ ದೃಶ್ಯಗಳನ್ನು ಹಂಚುವುದನ್ನು ನಿಲ್ಲಿಸಿ. ನಾಳೆ ನಿಮಗೆ ಇನ್ನು ಹೆಚ್ಚಿನ ಸಿನಿಮಾಗಳನ್ನು ನೀಡುವ ಶಕ್ತಿಯನ್ನು ಇಂದೇ ಕೊಲ್ಲಬೇಡಿ. ಈ ಕಷ್ಟದ ಸಮಯದಲ್ಲಿ ನಾನು ಇಡೀ ತಂಡ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಪರವಾಗಿ ನಿಲ್ಲುತ್ತೇನೆ. ನಮ್ಮ ಸಿನಿಮಾ ಕುಟುಂಬವನ್ನು ರಕ್ಷಿಸಿ" ಎಂದು ರಿಷಬ್ ಶೆಟ್ಟಿ ಅವರು ಟ್ವೀಟ್ ಮಾಡಿದ್ದಾರೆ.
ರಿಷಬ್ ಶೆಟ್ಟಿ ಅವರು ಮಾಡಿರುವ ಟ್ವೀಟ್
ಇಂತಹ ನೋವನ್ನು ವೈಯಕ್ತಿಕವಾಗಿ ಅನುಭವಿಸಿದ್ದೇನೆ
"ಜನ ನಾಯಗನ್ ಸಿನಿಮಾ ಸೋರಿಕೆಯಾಗಿರುವುದು ನನಗೆ ಕೋಪ ತರಿಸಿದೆ. ನನ್ನ ವೃತ್ತಿಜೀವನದ ಆರಂಭದಲ್ಲಿ ಇಂತಹ ಘಟನೆ ನಡೆದಾಗ ಉಂಟಾಗುವ ನೋವು ಮತ್ತು ನಷ್ಟದ ಭಾವನೆಯನ್ನು ನಾನು ವೈಯಕ್ತಿಕವಾಗಿ ಅನುಭವಿಸಿದ್ದೇನೆ. ಆ ಸಮಯದಲ್ಲಿ ನಾವು ಗುರಿಯಾಗಿದ್ದೇವೆ ಎಂದು ಅನಿಸುತ್ತದೆ, ಭರವಸೆಯನ್ನು ಕಳೆದುಕೊಳ್ಳುತ್ತೇವೆ. ಇದು ಕೇವಲ ನನ್ನ ಬಗ್ಗೆ ಅಲ್ಲ, ಸಹನಟರು, ನಿರ್ದೇಶಕರು, ನಿರ್ಮಾಪಕರು ಹೀಗೆ ಎಷ್ಟೋ ಜನರ ಕನಸುಗಳು ಇದರ ಮೇಲೆ ಅವಲಂಬಿತವಾಗಿರುತ್ತವೆ. ಈ ಸಮಸ್ಯೆಯು ಆದಷ್ಟು ಬೇಗ ಬಗೆಹರಿಯಬೇಕು ಮತ್ತು ಇದರ ಹಿಂದಿರುವವರನ್ನು ಗುರುತಿಸಬೇಕು. ಇಲ್ಲದಿದ್ದರೆ ಅದು ವ್ಯವಸ್ಥೆಯ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ" ಎಂದು ನಟ ವಿಜಯ್ ದೇವರಕೊಂಡ ತಿಳಿಸಿದ್ದಾರೆ.
ಇದು ಕ್ಷಮಿಸಲಾಗದ ಅಪರಾಧ ಎಂದ ಸೂರ್ಯ
"ಅತ್ಯಂತ ಹೃದಯವಿದ್ರಾವಕ ಮತ್ತು ಅನ್ಯಾಯದ ಸಂಗತಿ. ಇಡೀ ತಂಡದ ಪರಿಶ್ರಮ ಮತ್ತು ಶ್ರದ್ಧೆ ಇಂದು ಈ ಸ್ಥಿತಿಗೆ ಬಂದು ನಿಂತಿದೆ. ನಾನು ನಿಮ್ಮೆಲ್ಲರಲ್ಲಿ ಪ್ರಾಮಾಣಿಕವಾಗಿ ವಿನಂತಿಸುತ್ತೇನೆ, ದಯವಿಟ್ಟು ಈ ಚಿತ್ರವನ್ನು ಅಂತರ್ಜಾಲದಲ್ಲಿ ವೀಕ್ಷಿಸಬೇಡಿ, ಹಂಚಿಕೊಳ್ಳಬೇಡಿ ಅಥವಾ ಅದರ ಬಗ್ಗೆ ಚರ್ಚಿಸಬೇಡಿ. ಅವರ ಕಠಿಣ ಪರಿಶ್ರಮವನ್ನು ಗೌರವಿಸಿ. ನಾನು ನನ್ನ ಸ್ನೇಹಿತರ ಪರವಾಗಿ ನಿಲ್ಲುತ್ತೇನೆ ಮತ್ತು ಈ ಕೃತ್ಯವನ್ನು ಖಂಡಿಸುತ್ತೇನೆ, ಇದು ಕ್ಷಮಿಸಲಾಗದ ಅಪರಾಧ" ಎಂದು ನಟ ಸೂರ್ಯ ಹೇಳಿದ್ದಾರೆ.