ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ʻಪೆದ್ದಿʼ ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಈ ಮಧ್ಯೆ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ನಾಯಕಿ ಜಾನ್ವಿ ಕಪೂರ್ ಕಾಣಿಸಿಕೊಳ್ಳುತ್ತಿಲ್ಲ ಎಂಬ ಚರ್ಚೆ ಕೇಳಿಬಂದಿದೆ. ಇಷ್ಟೊಂದು ದೊಡ್ಡಮಟ್ಟದಲ್ಲಿ ತೆರೆಗೆ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಪೆದ್ದಿ ಜೊತೆಗೆ ಗುರುತಿಸಿಕೊಳ್ಳಲು ಜಾನ್ವಿ ಕಪೂರ್‌ಗೆ ಇಷ್ಟವಿಲ್ಲವೇ? ಹೀಗೊಂದು ಪ್ರಶ್ನೆ ಸದ್ಯ ಓಡಾಡುತ್ತಿದೆ.
ಪ್ರಚಾರದಿಂದ ಜಾನ್ವಿ ಕಪೂರ್ ದೂರ ಉಳಿದಿದ್ದೇಕೆ?
ಪೆದ್ದಿ ಚಿತ್ರದ ಒಂದು ಹಾಡು ಮತ್ತು ಕೆಲವು ದೃಶ್ಯಗಳಿಗೆ ಮಾತ್ರ ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರಕ್ಕೆ ಅಷ್ಟೇನೂ ಪ್ರಾಮುಖ್ಯತೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಎನ್‌ಟಿಆರ್ ಅವರ‘ದೇವರ’ ಚಿತ್ರದಲ್ಲೂ ಜಾನ್ವಿ ಪಾತ್ರದ ವಿಚಾರದಲ್ಲಿ ಹೀಗೆಯೇ ಆಗಿದ್ದರಿಂದ, ಇಂತಹ ಚಿತ್ರಗಳ ಪ್ರಚಾರದಲ್ಲಿ ಭಾಗವಹಿಸಲು ಜಾನ್ವಿ ಆಸಕ್ತಿ ತೋರುತ್ತಿಲ್ಲ ಎಂದು ಹೇಳಲಾಗುತ್ತಿದೆ.
Ram Charan: 'ಪೆದ್ದಿ' ಸೆಟ್‌ಗೆ ಚಿರಂಜೀವಿ ಸರ್ಪ್ರೈಸ್ ವಿಸಿಟ್; ವಿಡಿಯೋ ವೈರಲ್
ಅಂದಹಾಗೆ, ಎ.ಆರ್. ರೆಹಮಾನ್ ಅವರ ಲೈವ್ ಕಾನ್ಸರ್ಟ್ ಮತ್ತು ಪ್ರಚಾರ ಕಾರ್ಯಕ್ರಮಕ್ಕೆ ಹಾಜರಾಗುವಂತೆ ‘ಪೆದ್ದಿ’ ಚಿತ್ರತಂಡ ಜಾನ್ವಿ ಅವರನ್ನು ಸಂಪರ್ಕಿಸಿತ್ತು. ಆದರೆ, ತಾವು ನಟಿಸುವ ಇತರ ಬಾಲಿವುಡ್ ಸಿನಿಮಾಗಳಿಗೆ ಹೋಲಿಸಿದರೆ ಪೆದ್ದಿ ಚಿತ್ರದಲ್ಲಿ ತಮ್ಮ ಪಾತ್ರ ಅತ್ಯಂತ ಸಣ್ಣದಾಗಿರುವುದರಿಂದ, ದೊಡ್ಡ ಮಟ್ಟದ ಪ್ರಚಾರ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಜಾನ್ವಿ ಪ್ರಚಾರದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಅನ್ನೋ ಟಾಕ್ ಕೇಳಿಬಂದಿದೆ.
ಜಾನ್ವಿ ನಡೆಗೆ ನೆಟ್ಟಿಗರ ಕಿಡಿಕಿಡಿ
ಹಿಂದಿ ಸಿನಿಮಾಗಳಿಗೆ ಪಡೆಯುವ ಸಂಭಾವನೆಗಿಂತ ದುಪ್ಪಟ್ಟು ಹಣವನ್ನು ಪೆದ್ದಿ ಚಿತ್ರಕ್ಕಾಗಿ ಜಾನ್ವಿ ಪಡೆದಿದ್ದಾರೆ. ಆದರೂ ಪಾತ್ರ ಚಿಕ್ಕದು ಎಂಬ ನೆಪವೊಡ್ಡಿ ಪ್ರಚಾರದಿಂದ ದೂರ ಉಳಿಯುತ್ತಿರುವುದು ಎಷ್ಟು ಸರಿ ಎಂಬ ಟೀಕೆಗಳು ಕೇಳಿಬರುತ್ತಿವೆ. ಆದರೂ ಚಿತ್ರತಂಡ ಮಾತ್ರ ಜಾನ್ವಿಯನ್ನು ಪ್ರಚಾರಕ್ಕೆ ಬರಲೇಬೇಕು ಒತ್ತಾಯಿಸಿಲ್ಲವಂತೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಿಲೀಸ್ ಡೇಟ್ ಪೋಸ್ಟರ್ ವೊಂದನ್ನು ಹಂಚಿಕೊಂಡಿರುವುದು ಬಿಟ್ಟರೆ, ಈಚೆಗೆ ಪೆದ್ದಿ ಬಗ್ಗೆ ಜಾನ್ವಿ ಏನನ್ನೂ ಶೇರ್ ಮಾಡಿಕೊಂಡಿಲ್ಲ.
Peddi Movie: 'ಪೆದ್ದಿ' ಸಿನಿಮಾದಲ್ಲಿನ ಶಿವಣ್ಣನ ಖದರ್ ನೋಡಿ ಫ್ಯಾನ್ಸ್ ಫಿದಾ!
ಪೆದ್ದಿ ಸಿನಿಮಾಗೆ ಒಂದೊಂದಲ್ಲ ಸಮಸ್ಯೆ!
ಇನ್ನು, 'ಪೆದ್ದಿ' ಚಿತ್ರದ ನಿರ್ಮಾಪಕರು ಹಾಗೂ ಪ್ರದರ್ಶಕರ ನಡುವಿನ 'ಬಾಡಿಗೆ ಮತ್ತು ಲಾಭದ ಹಂಚಿಕೆ' ವಿವಾದ ದೊಡ್ಡ ಸ್ವರೂಪ ಪಡೆದುಕೊಂಡಿದೆ. ಈ ಸಂಬಂಧ ಫಿಲ್ಮ್ ಚೇಂಬರ್ ಸಭೆಯಲ್ಲಿ ಮಾತನಾಡಿರುವ ಚಿತ್ರದ ನಿರ್ಮಾಪಕರು, "ಈ ಲಾಭದ ಹಂಚಿಕೆ ವಿವಾದವು ತಮ್ಮ ಚಿತ್ರದ ಬಿಡುಗಡೆಯ ಮೇಲೆ ಪರಿಣಾಮ ಬೀರದಂತೆ ಹಿರಿಯ ನಿರ್ಮಾಪಕರು ಮತ್ತು ಪ್ರದರ್ಶಕರು ನೋಡಿಕೊಳ್ಳಬೇಕು. 350 ಕೋಟಿ ರೂಪಾಯಿ ಬಜೆಟ್‌ನ ಈ ಸಿನಿಮಾವನ್ನು ಈಗಾಗಲೇ ಮಾರ್ಚ್ 27 ಮತ್ತು ಏಪ್ರಿಲ್ 30 ರ ಬಿಡುಗಡೆ ದಿನಾಂಕಗಳಿಂದ ಮುಂದೂಡಿದ್ದೇವೆ. ಈಗ ಮತ್ತೆ ವಿಳಂಬವಾದರೆ ಚಿತ್ರಕ್ಕೆ ದೊಡ್ಡ ಮಟ್ಟದ ತೊಂದರೆಯಾಗಲಿದೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಚಿತ್ರಮಂದಿರಗಳ ಬಾಡಿಗೆ ಮತ್ತು ಶೇಕಡಾವಾರು ಲಾಭದ ಹಂಚಿಕೆ ಪದ್ಧತಿಯ ನಡುವಿನ ವಿವಾದವು ಈಗ ದೊಡ್ಡದಾಗಿದೆ. ರಾಮ್ ಚರಣ್ ಅಭಿನಯದ 'ಪೆದ್ದಿ' ಜೂನ್ 4 ರಂದು ಬಿಡುಗಡೆಯಾಗಲಿದೆ. ಆದರೆ ತೆಲಂಗಾಣ ಫಿಲ್ಮ್ ಚೇಂಬರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಕರು, ತಮ್ಮ ಬೇಡಿಕೆಗಳು ಈಡೇರದಿದ್ದರೆ ನೈಜಾಂ ಪ್ರದೇಶದ ಯಾವುದೇ ಚಿತ್ರಮಂದಿರಗಳಲ್ಲಿ 'ಪೆದ್ದಿ' ಚಿತ್ರವನ್ನು ಪ್ರದರ್ಶಿಸುವುದಿಲ್ಲ ಎಂದು ಹೇಳಿದ್ದಾರೆ. ಆದಷ್ಟು ಬೇಗ ಇವೆಲ್ಲಾ ಬಗೆಹರಿಯಲಿ ಎಂದು ಸಿನಿಪ್ರಿಯರು ಆಶಿಸುತ್ತಿದ್ದಾರೆ.