ʻಜೋಗಿʼ ಪ್ರೇಮ್ ಬರೆದಿರುವ ʻಕೆಡಿ: ದಿ ಡೆವಿಲ್ʼ ಚಿತ್ರದ ʻಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆʼ ಹಾಡು ಈಗ ವಿವಾದಕ್ಕೆ ಗುರಿಯಾಗಿದೆ. ಇದೀಗ ಇದು ರಾಷ್ಟ್ರವ್ಯಾಪಿ ಸದ್ದು ಮಾಡುತ್ತಿದೆ. ಇದರ ಹಿಂದಿ ಆವೃತ್ತಿ 'ಸರ್ಕೆ ಚುನರ್ ತೇರಿ ಸರ್ಕೆ' ಹಾಡಿನಲ್ಲಿ ಅಶ್ಲೀಲ ಮತ್ತು ಅಶ್ಲೀಲ ಸಾಹಿತ್ಯ ಬಳಸಲಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಕೆಡಿ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ ಎಂದ ಹೇಳಲಾಗುತ್ತಿದೆ. ನೋರಾ ಫತೇಹಿ ಮತ್ತು ಸಂಜಯ್ ದತ್ ಅವರು ಈ ಇರುವ ಈ ಹಾಡನ್ನು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕಬೇಕೆಂದು ಆಯೋಗ ಒತ್ತಾಯಿಸಿದೆ.
ದೆಹಲಿಯಲ್ಲಿ ದೂರು ದಾಖಲು
ಈಗಾಗಲೇ ಯೂಟ್ಯೂಬ್‌ನಲ್ಲಿ 'ಸರ್ಕೆ ಚುನರ್ ತೇರಿ ಸರ್ಕೆ' ಹಾಡು ಡಿಲೀಟ್ ಆಗಿದೆ. ಸದ್ಯ ಕನ್ನಡ, ತಮಿಳು, ತೆಲುಗು, ಮಲಯಾಳಂ ವರ್ಷನ್‌ಗಳು ಮಾತ್ರ ಇವೆ. ಅವುಗಳನ್ನು ಕೂಡ ಡಿಲೀಟ್ ಮಾಡಲಾಗುತ್ತಾದಾ ಎಂಬ ಪ್ರಶ್ನೆ ಮೂಡಿದೆ. ಈ ಮಧ್ಯೆ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ಅವರು ಹಾಡಿನೊಂದಿಗೆ ಸಂಬಂಧ ಹೊಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. "ಲೈಂಗಿಕತೆ ಸೂಚಿಸುವ ಮತ್ತು ಅಶ್ಲೀಲ ಸಾಹಿತ್ಯ ಇರುವ ಈ ಹಾಡು ಸಾರ್ವಜನಿಕ ವೀಕ್ಷಣೆಗೆ ಸೂಕ್ತವಲ್ಲ" ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
KD Movie: ‘ಸರ್ಸೆ ನಿನ್ನ ಸೆರಗ’ ಹಾಡಿನ ಸಾಹಿತ್ಯಕ್ಕೆ ಆಕ್ರೋಶ; ಪ್ರೇಮ್ ವಿರುದ್ಧ ಜನರು ಗರಂ
ಈ ಹಾಡನ್ನು ಡ್ಯಾನ್ಸ್-ಬಾರ್ ಶೈಲಿಯ ಪರಿಸರದಲ್ಲಿ ಚಿತ್ರೀಕರಿಸಲಾಗಿದ್ದು, ನೋರಾ ಫತೇಹಿ ಅವರು ಹಿನ್ನೆಲೆ ನೃತ್ಯಗಾರರೊಂದಿಗೆ ನೃತ್ಯ ಮಾಡಿದ್ದಾರೆ. ಆದರೆ ಈ ಹಾಡಿನ ಸಾಹಿತ್ಯ ಮತ್ತು ಶೂಟಿಂಗ್ ಮಾಡಿರುವ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಾಡು ಅಶ್ಲೀಲ ಸಂಭಾಷಣೆ ಮತ್ತು ಪ್ರಚೋದನಕಾರಿ ಚಿತ್ರಣಗಳನ್ನು ಹೆಚ್ಚು ಅವಲಂಬಿಸಿದೆ ಎಂದು ಟೀಕೆ ಮಾಡಲಾಗುತ್ತಿದೆ.
ಗಾಯಕ ಅರ್ಮಾನ್ ಮಲಿಕ್ ಗರಂ
ಈ ಹಾಡಿನ ಬಗ್ಗೆ ಗಾಯಕ ಅರ್ಮಾನ್ ಮಲಿಕ್ ಕೂಡ ಈ ಹಾಡಿನ ಬಗ್ಗೆ ಪ್ರತಿಕ್ರಿಯಿಸಿದ್ದು, ಇದರ ಸಾಹಿತ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಉದ್ದೇಶದ ಹಾಡು ಬರವಣಿಗೆಯಲ್ಲಿ ಇದು "ಹೊಸ ಕೀಳುಮಟ್ಟ" ಎಂದು ಅವರು ಕರೆದಿದ್ದಾರೆ. ಅವರ ಈ ಹೇಳಿಕೆಯು ಹಾಡಿನ ಬಗ್ಗೆ ನಡೆಯುತ್ತಿದ್ದ ಚರ್ಚೆಗೆ ಮತ್ತಷ್ಟು ತುಪ್ಪ ಸುರಿದಿದೆ.
ಬಹುತಾರಾರಗಣದ ಸಿನಿಮಾ ʻಕೆಡಿʼ
ʻಕೆಡಿʼ ಚಿತ್ರವನ್ನು ಏಪ್ರಿಲ್ 30ರಂದು ತೆರೆಕಾಣಿಸಲು ನಿರ್ದೇಶಕರು ಸಜ್ಜಾಗಿದ್ದಾರೆ. ಇದೊಂದು ಪ್ಯಾನ್-ಇಂಡಿಯಾ ಆಕ್ಷನ್ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಧ್ರುವ ಸರ್ಜಾ, ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.