ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ್ (Rukmini Vasanth) ಸದ್ಯ ಕನ್ನಡದ ಜತೆಗೆ ಪರಭಾಷೆಯಲ್ಲಿಯೂ ಮಿಂಚುತ್ತಿದ್ದಾರೆ. 2023ರಲ್ಲಿ ತೆರೆಕಂಡ ಹೇಮಂತ್ ರಾವ್-ರಕ್ಷಿತ್ ಶೆಟ್ಟಿ ಕಾಂಬಿನೇಷನ್‌ನ ʼಸಪ್ತ ಸಾಗರದಾಚೆ ಎಲ್ಲೋʼ (Sapta Saagaradaache Ello) ಸೈಡ್ ಎ ಮತ್ತು ಸೈಡ್ ಬಿ ಚಿತ್ರದ ಮೂಲಕ ಪರಭಾಷಿಕರನ್ನೂ ಸೆಳೆದ ಅವರು ಇದೀಗ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಈ ಮಧ್ಯೆ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುವ ಅವಕಾಶವೊಂದು ಸಿಕ್ಕಿದೆ. ಸ್ಯಾಂಡಲ್‌ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸುತ್ತಿರುವ, ಹೊಂಬಾಳೆ ಫಿಲ್ಮ್ಸ್‌ನಿರ್ಮಾರ್ಣದ ʼಕಾಂತಾರ: ಚಾಪ್ಟರ್ 1ʼ (Kantara: Chapter 1) ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದುವರೆಗೆ ಅವರು ನಟಿಸುತ್ತಿರುವ ವಿಚಾರವನ್ನು ಚಿತ್ರತಂಡ ಗುಟ್ಟಾಗಿ ಇಟ್ಟಿತ್ತು. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಅವರ ಫಸ್ಟ್ ಲುಕ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದೆ. ಇದರ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ಮಾತನಾಡಿದ ರುಕ್ಮಿಣಿ ʼಕಾಂತಾರʼ ಚಿತ್ರದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಚಿತ್ರದಲ್ಲಿ ಅವರು ಕದಂಬ ಸಾಮ್ರಾಜ್ಯದ ರಾಣಿ ಕನಕವತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಈ ಅವಕಾಶ ಸಿಕ್ಕಿದ್ದು ಕನಸು ನನಸಾದಂತಾಗಿದೆ ಎಂದು ಹೇಳಿದ್ದಾರೆ. ಸಿನಿಮಾ, ಪಾತ್ರದ ಬಗ್ಗೆ ಅವರು ಮನ ಬಿಚ್ಚಿ ಮಾತನಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Rukmini Vasanth: ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕೆ ನಾಯಕಿಯಾಗಿ ರುಕ್ಮಿಣಿ ವಸಂತ್ ಫಿಕ್ಸ್? ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿದೆ ಹಿಂಟ್
ರುಕ್ಮಿಣಿ ವಸಂತ್ ಹೇಳಿದ್ದೇನು?
ಕಳೆದ ವರ್ಷಾರಂಭದಲ್ಲಿ ʼಕಾಂತಾರ: ಚಾಪ್ಟರ್ 1ʼ ಚಿತ್ರದ ಅವಕಾಶ ಬಂದಿತ್ತು ಎಂದಿದ್ದಾರೆ. ʼʼರಿಷಬ್ ಶೆಟ್ಟಿ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ನನಗೆ ಕಥೆ, ಪಾತ್ರ ವಿವರಿಸಿದರು. ಈ ಅವಕಾಶ ಸಿಕ್ಕಾಗ ಬಹು ದಿನಗಳ ಕನಸು ನನಸಾದಂತಾಯ್ತು. ʼಸಪ್ತ ಸಾಗರದಾಚೆ ಎಲ್ಲೋʼ ಚಿತ್ರ ರಿಲೀಸ್ ಆದಾಗ ರಿಷಬ್ ಶೆಟ್ಟಿ ನನ್ನ ಪಾತ್ರಕ್ಕೆ ಮೆಚ್ಚುಗೆ ಸೂಚಿಸಿದ್ದರು. ʼಕಾಂತಾರʼದ ಆಫರ್ ಸಿಕ್ಕಾಗ ನಿಜಕ್ಕೂ ನಾನು ನೆಲದ ಮೇಲಿರಲಿಲ್ಲ. ಆ ಕ್ಷಣ ಥ್ರಿಲ್ಲಿಂಗ್ ನೀಡುವ ಜತೆಗೆ ನನ್ನ ಬಗ್ಗೆ ನನಗೇ ಕೆಲವೊಂದು ಸಂದೇಹವೂ ಇತ್ತು. ಅತಿ ದೊಡ್ಡ ಜವಾಬ್ದಾರಿ ಇದು ಎನ್ನುವ ಅರಿವೂ ನನಗಿತ್ತು. ʼಕಾಂತಾರʼದಲ್ಲಿ ನಟಿಸುತ್ತಿರುವ ಬಗ್ಗೆ ಎಲ್ಲೂ ಹೇಳಬಾರದೆಂದು ಚಿತ್ರತಂಡ ಮನವಿ ಮಾಡಿತ್ತು. ಹೀಗಾಗಿ ಮುಂದಿನ ಕನ್ನಡ ಚಿತ್ರ ಯಾವುದು ಎಂದು ಕೇಳಿದಾಗ ನಗುತ್ತ ಕಾಯಿರಿ, ಸ್ವಲ್ಪ ದಿನದಲ್ಲಿ ಗೊತ್ತಾಗುತ್ತದೆ ಎನ್ನುತ್ತಿದ್ದೆʼʼ ಎಂದು ವಿವರಿಸಿದ್ದಾರೆ.
ʼಸಪ್ತ ಸಾಗರದಾಚೆ ಎಲ್ಲೋʼ ಚಿತ್ರಗಳಲ್ಲಿ ರುಕ್ಮಿಣಿ ಮಧ್ಯಮ ವರ್ಗದ ಯುವತಿ ಪ್ರಿಯಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡು ಮನೋಜ್ಞ ಅಭಿನಯದ ಮೂಲಕವೇ ಪ್ರೇಕ್ಷಕರ, ವಿಮರ್ಶಕರ ಗಮನ ಸೆಳೆದಿದ್ದರು. ಈ ಚಿತ್ರದ ಕಾರಣದಿಂದಲೇ ಪರಭಾಷಿಕರೂ ಅವರನ್ನು ಗುರುತಿಸುವಂತಾಯ್ತು. ಈ ಬಗ್ಗೆ ಮಾತನಾಡಿದ ಅವರು, ʼʼನನ್ನ ವೃತ್ತಿ ಜೀವನದ ಆರಂಭಿಕ ದಿನಗಳಲ್ಲೇ ಇಂತಹದ್ದೊಂದು ಮೆಚ್ಚುಗೆ ಪಡೆಯಲು ಸಾಧ್ಯವಾಗಿದ್ದಕ್ಕೆ ತುಂಬ ಖುಷಿಯಾಗುತ್ತಿದೆʼʼ ಎಂದು ತಿಳಿಸಿದ್ದಾರೆ.
ʼಕಾಂತಾರʼ ಜಗತ್ತಿನ ಭಾಗವಾಗಿದ್ದರ ಬಗ್ಗೆ...
ಇದೀಗ ʼಕಾಂತಾರʼ ಜಗತ್ತಿಗೆ ಕಾಲಿಡುತ್ತಿರುವ ಬಗ್ಗೆ ಮಾತನಾಡಿದ ಅವರು ತನ್ನ ಮೇಲಿರುವ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ʼʼಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ʼಕಾಂತಾರʼದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ನಿರೀಕ್ಷೆಯೇ ನನ್ನ ಮೇಲೆ ಒತ್ತಡವಾಗದಂತೆ ನೋಡಿಕೊಂಡಿದ್ದೇನೆ. ಇನ್ನು ಬೇರೆ ಇಂಡಸ್ಟ್ರಿಯಲ್ಲಿ ಅಭಿನಯಿಸುವಾಗ ನಾನು ಹೊಂದಿಕೊಳ್ಳಬೇಕಾದ ಮುಖ್ಯ ವಿಷಯವೆಂದರೆ ಅದು ಭಾಷೆ. ನನಗೆ ಕನ್ನಡ ಚಿತ್ರದಲ್ಲಿ ನಟಿಸುವುದು ಹೆಚ್ಚು ಆರಾಮದಾಯಕ. ಇತರ ಭಾಷೆಗಳಲ್ಲಿ ಕೆಲಸ ಮಾಡುವಾಗ ಹೆಚ್ಚುವರಿ ತಯಾರಿ ಮಾಡಬೇಕಾಗುತ್ತದೆ. ಅದು ಬಿಟ್ಟರೆ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲʼʼ ಎಂದಿದ್ದಾರೆ.
ಸದ್ಯ ರುಕ್ಮಿಣಿ ವಸಂತ್ ತಮಿಳಿನ ʼಮದರಾಸಿʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್-ಜೂ. ಎನ್‌ಟಿರ್ ಕಾಂಬಿನೇಷನ್‌ನ ಮುಂದಿನ ತೆಲುಗು ಸಿನಿಮಾದ ನಾಯಕಿಯಾಗಿಯೂ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.