Rukmini Vasanth: ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕೆ ನಾಯಕಿಯಾಗಿ ರುಕ್ಮಿಣಿ ವಸಂತ್ ಫಿಕ್ಸ್? ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿದೆ ಹಿಂಟ್
NTR-Neel: ಸದ್ಯ ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರ ದೇಶದ ಗಮನ ಸೆಳೆದಿದೆ. ಈಗಾಗಲೇ ಶೂಟಿಂಗ್ ಆರಂಭವಾಗಿದ್ದು, ಮುಂದಿನ ವರ್ಷ ತೆರೆಗೆ ಬರುವ ಎಲ್ಲ ಸಾಧ್ಯತೆಗಳಿವೆ. ಈ ಮಧ್ಯೆ ಈ ಚಿತ್ರದ ನಾಯಕಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

ರುಕ್ಮಿಣಿ ವಸಂತ್.

ಹೈದರಾಬಾದ್: ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಬಳಿಕ ವಿವಿಧ ಚಿತ್ರರಂಗದಲ್ಲಿ ಮಿಂಚಿದ ಸಾಕಷ್ಟು ಕಲಾವಿದರಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ರುಕ್ಮಿಣಿ ವಸಂತ್ (Rukmini Vasanth). 2019ರಲ್ಲಿ ತೆರೆಕಂಡ ʼಬೀರ್‌ಬಲ್ ತ್ರಯಾಲಜಿ ಕೇಸ್ 1ʼ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅವರು 2023ರಲ್ಲಿ ರಿಲೀಸ್ ಆದ ರಕ್ಷಿತ್ ಶೆಟ್ಟಿ-ಹೇಮಂತ್ ರಾವ್ ಕಾಂಬಿನೇಷನ್‌ನ ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್ ಎ, ಸೈಡ್ ಬಿ ಮೂಲಕ ಸಿನಿಪ್ರಿಯರ ಗಮನ ಸೆಳೆದರು. ಇದು ತೆಲುಗಿಗೂ ಡಬ್ ಆಗಿ ರುಕ್ಮಿಣಿ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇದೀಗ ಅವರು ದೇಶದ ಕುತೂಹಲ ಕೆರಳಿಸಿದ, ಟಾಲಿವುಡ್ ಸೂಪರ್ ಸ್ಟಾರ್ ಜೂ.ಎನ್‌ಟಿಆರ್ (NTR Jr)-ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್‌ನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಜಾಕ್‌ಪಾಟ್ ಹೊಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬರದಿದ್ದರೂ, ರುಕ್ಮಿಣಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಈ ಬಗ್ಗೆ ಹಿಂಟ್ ನೀಡಿದೆ.
ಹೌದು, ರುಕ್ಮಿಣಿ ಇತ್ತೀಚೆಗೆ ಹಂಚಿಕೊಂಡಿರುವ ಪೋಸ್ಟ್ ಹಲವರ ಗಮನ ಸೆಳೆದಿದೆ. ಸೆಲ್ಫಿಯೊಂದನ್ನು ಶೇರ್ ಮಾಡಿಕೊಂಡಿರುವ ಅವರು ಅದಕ್ಕೆ ಗೂಢಾರ್ಥದ ಕ್ಯಾಪ್ಶನ್ ನೀಡಿದ್ದು, ಅದನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಹುಲಿ ಚಿತ್ರವಿರುವ ಟೀಶರ್ಟ್ ಧರಿಸಿ ಕನ್ನಡಿ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡಿರುವ ಫೋಟೊ ಶೇರ್ ಮಾಡಿರುವ ರುಕ್ಮಿಣಿ ʼʼಟೈಗರ್ ಟೈಗರ್ ಬರ್ನಿಂಗ್ ಬ್ರೈಟ್ʼʼ ಎಂದು ಬರೆದುಕೊಂಡಿದ್ದಾರೆ.
ರುಕ್ಮಿಣಿ ವಸಂತ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್:
ಈ ಸುದ್ದಿಯನ್ನೂ ಓದಿ: Actor Sivakarthikeyan: ಶಿವಕಾರ್ತಿಕೇಯನ್ ಈಗ ʼಮದರಾಸಿʼ; ಮುರುಗದಾಸ್ ಚಿತ್ರದ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ರುಕ್ಮಿಣಿ ವಸಂತ್
ರುಕ್ಮಿಣಿ ನೀಡಿದ ಹಿಂಟ್ ಏನು?
ಜೂ.ಎನ್‌ಟಿಆರ್ ಅವರನ್ನು ಯಂಗ್ ಟೈಗರ್ ಎಂದು ಕರೆಯಲಾಗುತ್ತದೆ. ಹೀಗಾಗಿ ರುಕ್ಮಿಣಿ ಕ್ಯಾಪ್ಶನ್‌ನಲ್ಲಿ ʼʼಟೈಗರ್ʼʼ ಎಂದು ಬರೆಯುವ ಮೂಲಕ ಜೂ.ಎನ್‌ಟಿಆರ್ ಹೆಸರನ್ನು ಸೂಚ್ಯವಾಗಿ ತಿಳಿಸಿದ್ದಾರೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ. ಈ ಪೋಸ್ಟ್ ನೋಡಿ ಅವರ ಫ್ಯಾನ್ಸ್ ಹುಚ್ಚೆದ್ದು ಕುಣಿದಿದ್ದು, ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದೇ ಅಭಿಪ್ರಾಯಪಡುತ್ತಿದ್ದಾರೆ. ಕೆಲವು ದಿನಗಳಿಂದಲೂ ಈ ಚಿತ್ರಕ್ಕೆ ರುಕ್ಮಿಣಿ ನಾಯಕಿ ಎನ್ನುವ ವದಂತಿ ಹಬ್ಬಿತ್ತು. ಇದೀಗ ಈ ವದಂತಿಗೆ ಇನ್ನಷ್ಟು ಪುಷ್ಟಿ ಬಂದಂತಾಗಿದೆ.
ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ಜಾಗತಿಕ ಸಿನಿಪ್ರಿಯರ ಗಮನ ಸೆಳೆದ ಸ್ಯಾಂಡಲ್‌ವುಡ್‌ನ ಪ್ರಶಾಂತ್ ನೀಲ್ ಸದ್ಯ ಟಾಲಿವುಡ್‌ನಲ್ಲಿಯೂ ಬಹು ಬೇಡಿಕೆಯ ನಿರ್ದೇಶಕ ಎನಿಸಿಕೊಂಡಿದ್ದಾರೆ. ಅವರು ಜೂ.ಎನ್‌ಟಿಆರ್ ಜತೆಗೆ ಚಿತ್ರ ಘೋಷಿಸಿದಾಗಲೇ ನಿರೀಕ್ಷೆ ಗರಿಗೆದರಿತ್ತು. ಸದ್ಯ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಭರಪೂರ್ ಆ್ಯಕ್ಷನ್ ದೃಶ್ಯಗಳಲ್ಲಿ ಜೂ.ಎನ್‌ಟಿಆರ್ ಕಾಣಿಸಿಕೊಳ್ಳುತ್ತಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮುಂದಿನ ವರ್ಷ ತೆರೆಗೆ ಬರಲಿದೆ. ಹೀಗಾಗಿ ಸಾಕಷ್ಟು ಕುತೂಹಲ ಕೆರಳಿಸಿದ ಈ ಚಿತ್ರಕ್ಕೆ ರುಕ್ಮಿಣಿ ನಾಯಕಿಯಾಗುತ್ತಾರೆ ಎನ್ನುವ ಸುದ್ದಿ ತಿಳಿದೇ ಅವರ ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ. ಈ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡತಿ ರಶ್ಮಿಕಾ ಮಂದಣ್ಣ ಸ್ಪೆಶಲ್ ಹಾಡಿಗೆ ಹೆಜ್ಜೆ ಹಾಕುತ್ತಾರೆ ಎನ್ನುವ ಗಾಳಿಸುದ್ದಿಯೂ ದಟ್ಟವಾಗಿ ಹಬ್ಬಿದೆ.