ಹೈದರಾಬಾದ್: ಮೆಗಾಸ್ಟಾರ್ ಜೂನಿಯರ್ ಎನ್‌ಟಿಆರ್ (Jr NTR) ಅಭಿನಯದ ಬಹುನಿರೀಕ್ಷಿತ 'ದೇವರ' ಪ್ಯಾನ್ ಇಂಡಿಯಾ ಟಾಲಿವುಡ್ ಆ್ಯಕ್ಷನ್ ಡ್ರಾಮಾ ಸಿನಿಮಾ ಕಳೆದ ವರ್ಷ ತೆರೆಕಂಡಿತ್ತು. ಈ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಸದ್ಯ ಈ ಸಿನಿಮಾ ಬಿಡುಗಡೆಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕರು ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಇದೀಗ 'ದೇವರʼ ಚಿತ್ರದ ಮುಂದುವರಿದ ಭಾಗ ʼದೇವರ 2' ಘೋಷಿಸಲಾಗಿದೆ. ಈ ಸುದ್ದಿ ಕೇಳಿದ ಜೂನಿಯರ್ ಅಭಿಮಾನಿಗಳು ಮತ್ತಷ್ಟು ಎಕ್ಸೈಟ್ ಆಗಿದ್ದಾರೆ.
2024ರ ಸೆಪ್ಟೆಂಬರ್ 27ರಂದು ಅದ್ಧೂರಿಯಾಗಿ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ʼದೇವರʼ ಚಿತ್ರದಲ್ಲಿ ಜೂ. ಎನ್‌ಟಿಆರ್, ಜಾಹ್ನವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 'ದೇವರ' ಸಿನಿಮಾದಲ್ಲಿ ಕರಾವಳಿ ತೀರದಲ್ಲಿ ನಡೆಯುವ ರಾಜಕೀಯ ಮತ್ತು ಅಧಿಕಾರದ ಸಂಘರ್ಷದ ಕಥೆಯನ್ನು ತೋರಿಸಲಾಗಿತ್ತು. ಮೊದಲ ಭಾಗವು ಇಂಟ್ರಸ್ಟಿಂಗ್ ಕಥೆಯೊಂದಿಗೆ ಕೊನೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸೀಕ್ವೆಲ್ ಬಗ್ಗೆ ದೊಡ್ಡ ನಿರೀಕ್ಷೆ ಇದೆ.
ಯುವಸುಧಾ ಆರ್ಟ್ಸ್‌ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಶೇರ್ ಮಾಡಲಾಗಿದ್ದು, "ಭಯದ ಬಿರುಗಾಳಿ ಕರಾವಳಿಗೆ ಬಂದು ಒಂದು ವರ್ಷ ಕಳೆದಿದೆ. ಇಡೀ ಜಗತ್ತು ನೆನಪಿಟ್ಟುಕೊಂಡ ಹೆಸರು ಎಂದರೆ 'ದೇವರ'. ಆ ಹೆಸರು ಹುಟ್ಟುಹಾಕಿದ ಭಯವಿರಲಿ ಅಥವಾ ಜನರ ಗಳಿಸಿದ ಪ್ರೀತಿ ಇರಲಿ, ಅದನ್ನು ಯಾರೂ ಮರೆಯಲಾಗದು. ಈಗ ʼದೇವರ 2ʼಗಾಗಿ ಸಿದ್ಧರಾಗಿ" ಎಂದು ಬರೆಯುವ ಮೂಲಕ ಸೀಕ್ವೆಲ್ ಘೋಷಿಸಲಾಗಿದೆ.
ಜೂ. ಎನ್‌ಟಿಆರ್ ದೇವರ ಮತ್ತು ವರದ ಎಂಬ ತಮ್ಮ ಎರಡು ಪ್ರಮುಖ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ. ಮೊದಲ ಭಾಗವನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದ ಕೊರಟಾಲ ಶಿವ ಅವರೇ ಈ ಸೀಕ್ವೆಲ್ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಹಿನ್ನೆಲೆ ಸಂಗೀತವು 'ದೇವರ'ದ ದೊಡ್ಡ ಆಕರ್ಷಣೆಯಾಗಿದ್ದು, ಅವರೇ 'ದೇವರ 2' ಗೂ ಸಂಗೀತ ಸಂಯೋಜಿಸಲಿದ್ದಾರೆ.
'ದೇವರ: ಭಾಗ 1' ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಜತೆಗೆ ಜಾಹ್ನವಿ ಕಪೂರ್ ನಾಯಕಿಯಾಗಿ ಹಾಗೂ ಸೈಫ್ ಅಲಿ ಖಾನ್, ಪ್ರಕಾಶ್ ರಾಜ್, ಶ್ರೀಕಾಂತ್ ಮೇಕಾ ಮುಂತಾದವರು ಮುಖ್ಯ ಪಾತ್ರಗಳಲ್ಲಿದ್ದರು. ಕರಾವಳಿ ತೀರದ ರಾಜಕಾರಣ ಮತ್ತು ಸಂಘರ್ಷವನ್ನು ಒಳಗೊಂಡಿದ್ದ ಈ ಕಥೆಯು ಒಂದು ಆಕರ್ಷಕ ಕ್ಲೈಮ್ಯಾಕ್ಸ್‌ನೊಂದಿಗೆ ಕೊನೆಗೊಂಡಿತ್ತು. ಇದೀಗ ಇದರ ಸೀಕ್ವೆಲ್ ಅನ್ನು ಮುಂದುವರಿಸಲು ನಿರ್ಮಾಪಕರು ಸಿದ್ಧತೆ ನಡೆಸಿದ್ದಾರೆ.