ಭಾರತೀಯ ಕೊರಿಯನ್ ಪಾಪ್ (K-pop) ಅಭಿಮಾನಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಸಂಗೀತ ರಸದೌತಣ ಸಿಗುವುದು ಖಚಿತವಾಗಿದೆ. ವಿಶ್ವವಿಖ್ಯಾತ ಕೊರಿಯನ್ ಸಂಗೀತೋತ್ಸವ ‘ವಿವರ್ಸ್ ಕಾನ್ ಫೆಸ್ಟಿವಲ್’ ಇದೇ ಮೊದಲ ಬಾರಿಗೆ ಭಾರತದ ನೆಲಕ್ಕೆ ಕಾಲಿಡುತ್ತಿದೆ. ಜಾಗತಿಕ ಮನರಂಜನಾ ಸಂಸ್ಥೆ 'ಹೈಬ್' ನೇತೃತ್ವದಲ್ಲಿ ನಡೆಯಲಿರುವ ಈ ಎರಡು ದಿನಗಳ ಅದ್ಧೂರಿ ಸಂಗೀತೋತ್ಸವವು 2027ರ ಮಾರ್ಚ್ 27 ಮತ್ತು 28ರಂದು ನವದೆಹಲಿಯಲ್ಲಿ ಜರುಗಲಿದೆ. ವಿಶೇಷವೆಂದರೆ, ದಕ್ಷಿಣ ಕೊರಿಯಾದ ಆಚೆಗೆ ‘ವಿವರ್ಸ್ ಕಾನ್’ ಆಯೋಜನೆಗೊಳ್ಳುತ್ತಿರುವುದು ಜಾಗತಿಕ ಮಟ್ಟದಲ್ಲೇ ಇದು ಮೊದಲ ಬಾರಿಯಾಗಿದೆ.
ಏನಿದು ವಿವರ್ಸ್ ಕಾನ್ ವಿಶೇಷತೆ?
ಭಾರತದಲ್ಲಿ ಇದುವರೆಗೆ ನಡೆದ ಸಂಗೀತ ಕಾರ್ಯಕ್ರಮಗಳಲ್ಲೇ ಇದು ಅತ್ಯಂತ ವಿಶಿಷ್ಟ ಹಾಗೂ ಬೃಹತ್ ಮಟ್ಟದ ಉತ್ಸವವಾಗಲಿದೆ. ಇಲ್ಲಿ ಕೇವಲ ಕೊರಿಯನ್ ಬ್ಯಾಂಡ್‌ಗಳ ಲೈವ್ ಪರ್ಫಾರ್ಮೆನ್ಸ್ ಮಾತ್ರವಲ್ಲದೆ, ದೇಶ-ವಿದೇಶಗಳ ಖ್ಯಾತ ಕಲಾವಿದರ ಸಂಯೋಜಿತ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಲಿವೆ. ಡಿಜಿಟಲ್ ಫ್ಯಾನ್-ಪ್ಲಾಟ್‌ಫಾರ್ಮ್ ‘Weverse’ ಮೂಲಕ ಆನ್‌ಲೈನ್‌ನಲ್ಲಿ ಬೆಸೆದುಕೊಂಡಿರುವ ಅಭಿಮಾನಿಗಳನ್ನು ಆಫ್‌ಲೈನ್‌ನಲ್ಲಿ ಒಂದೇ ವೇದಿಕೆಗೆ ತಂದು, ನೆಚ್ಚಿನ ತಾರೆಯರೊಂದಿಗೆ ನೇರ ಸಂವಾದ, ಫ್ಯಾನ್ ಜೋನ್ ಚಟುವಟಿಕೆಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಅನುಭವಗಳನ್ನು ಒದಗಿಸುವುದು ಇದರ ಮೂಲ ಉದ್ದೇಶವಾಗಿದೆ.
ಭಾರತ ನಮಗೆ ಪ್ರಮುಖ ಮಾರುಕಟ್ಟೆ: ಹೈಬ್ ಸಿಇಒ
ಈ ಮಹತ್ವದ ಬೆಳವಣಿಗೆಯ ಕುರಿತು ಮಾತನಾಡಿದ ಹೈಬ್ ಸಿಇಒ ಜಾಸನ್ ಜೈಸಾಂಗ್ ಲೀ, "ನಮ್ಮ ‘ಮಲ್ಟಿ-ಹೋಮ್, ಮಲ್ಟಿ-ಜಾನರ್’ ಕಾರ್ಯತಂತ್ರದಲ್ಲಿ ಭಾರತ ಮಹತ್ವದ ಮೈಲಿಗಲ್ಲು. ಭಾರತದ ಯುವಜನತೆಯ ಸೃಜನಶೀಲತೆ ಮತ್ತು ನಮ್ಮ ಜಾಗತಿಕ ವೇದಿಕೆಯ ಶಕ್ತಿಯನ್ನು ಒಟ್ಟುಗೂಡಿಸಿ ಭಾರತೀಯ ಪ್ರೇಕ್ಷಕರಿಗೆ ಅವಿಸ್ಮರಣೀಯ ಅನುಭವ ನೀಡಲು ನಾವು ಉತ್ಸುಕರಾಗಿದ್ದೇವೆ. ಹೈಬ್‌ನ ಜಾಗತಿಕ ಬೆಳವಣಿಗೆಯಲ್ಲಿ ಭಾರತವು ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ" ಎಂದಿದ್ದಾರೆ.
ವಿವರ್ಸ್ ಕಂಪನಿಯ ಅಧ್ಯಕ್ಷ ಝೋಯಿಲ್ ಯಾಂಗ್ ಸಹ ಮಾತನಾಡಿ, "ವಿಶ್ವದಲ್ಲೇ ಅತಿ ದೊಡ್ಡ ಕೆ-ಪಾಪ್ ಅಭಿಮಾನಿ ಬಳಗ ಹೊಂದಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಇಲ್ಲಿಯವರೆಗೆ ಆನ್‌ಲೈನ್‌ನಲ್ಲಿ ಮಾತ್ರ ಸಾಧ್ಯವಾಗುತ್ತಿದ್ದ ಅಭಿಮಾನಿ-ಕಲಾವಿದರ ಒಡನಾಟವನ್ನು ನವದೆಹಲಿಯ ವೇದಿಕೆಯ ಮೂಲಕ ಪ್ರತ್ಯಕ್ಷ ಅನುಭವಕ್ಕೆ ಪರಿವರ್ತಿಸಲು ನಾವು ಸಂತಸಪಡುತ್ತೇವೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಟಿಕೆಟ್ ಬುಕ್ಕಿಂಗ್ ಮತ್ತು ಪಾಲುದಾರಿಕೆ
‘ಬುಕ್ ಮೈ ಶೋ’ನ ಲೈವ್ ಮನರಂಜನಾ ವಿಭಾಗವಾದ ‘ಬುಕ್ ಮೈ ಶೋ ಲೈವ್’ ಈ ಕಾರ್ಯಕ್ರಮದ ಸಹ-ನಿರ್ಮಾಣ ಮತ್ತು ಪ್ರಚಾರದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಉತ್ಸವದ ಪ್ರವೇಶ ಟಿಕೆಟ್‌ಗಳು ಅಧಿಕೃತವಾಗಿ ಬುಕ್ ಮೈ ಶೋ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿರಲಿವೆ.
ಕಾರ್ಯಕ್ರಮಕ್ಕೆ ಜಾಗತಿಕ ಬ್ರ್ಯಾಂಡ್‌ಗಳು ಕೈಜೋಡಿಸಿದ್ದು, ಕಿಯಾ ಇಂಡಿಯಾ, ಸ್ಯಾಮ್‌ಸಂಗ್, ಪ್ರಾಜೆಕ್ಟ್ ಬಿ ಹಾಗೂ ನಾಂಗ್‌ಶಿಮ್ ಪ್ರಮುಖ ಸಹಭಾಗಿಗಳಾಗಿವೆ. ಇದರ ಬ್ಯಾಂಕಿಂಗ್ ಪಾಲುದಾರ ಸಂಸ್ಥೆಯಾದ ಮಾಸ್ಟರ್‌ಕಾರ್ಡ್ ತನ್ನ ಕಾರ್ಡ್ ಬಳಕೆದಾರರಿಗೆ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್‌ಗೆ ವಿಶೇಷ ಆದ್ಯತೆ ನೀಡಲಿದೆ.
ಸ್ಥಳೀಯ ಪ್ರತಿಭೆಗಳಿಗೂ ಸಿಗಲಿದೆ ಮಣೆ
ಈ ಉತ್ಸವವು ಜಾಗತಿಕ ಕೆ-ಪಾಪ್ ಕಲಾವಿದರ ಜೊತೆಗೆ ಭಾರತೀಯ ಸಂಗೀತಗಾರರ ಸಮ್ಮಿಲನಕ್ಕೂ ವೇದಿಕೆಯಾಗಲಿದೆ. ಭಾರತದಲ್ಲಿ ತನ್ನ ನೆಲೆಯನ್ನು ವಿಸ್ತರಿಸುತ್ತಿರುವ ‘ಹೈಬ್ ಇಂಡಿಯಾ’, ಈಗಾಗಲೇ ದೇಶಾದ್ಯಂತ ಆಡಿಷನ್ ಆರಂಭಿಸಿದ್ದು, ಸ್ಥಳೀಯ ಸಂಗೀತ ಪ್ರತಿಭೆಗಳನ್ನು ಜಾಗತಿಕ ಗುಣಮಟ್ಟಕ್ಕೆ ತರಬೇತುಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ. ಭಾರತ ಮತ್ತು ಕೊರಿಯನ್ ಸಂಗೀತ ಸಂಸ್ಕೃತಿಯ ಈ ಅಪರೂಪದ ಸಂಗಮವು ದೇಶದ ಸಂಗೀತ ಪ್ರಿಯರಿಗೆ ಹೊಸ ಅನುಭವ ನೀಡಲಿದೆ.