Kamal Haasan: 46 ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಒಟ್ಟಿಗೆ ಬರಲಿದ್ದಾರೆ ಕಮಲ್- ರಜನಿಕಾಂತ್; ಸಿನಿಮಾ ಯಾವುದು ಗೊತ್ತಾ?
ತಮಿಳು ಚಿತ್ರರಂಗದ ಇಬ್ಬರು ದಿಗ್ಗಜ ನಟರಾದ 'ಸೂಪರ್ ಸ್ಟಾರ್' ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ಬರೋಬ್ಬರಿ 46 ವರ್ಷಗಳ ಬಳಿಕ ಒಟ್ಟಿಗೆ ನಟಿಸಲಿದ್ದಾರೆ. ಕಮಲ್ ಹಾಸನ್ ಮುಂಬರುವ ಚಿತ್ರದಲ್ಲಿ ರಜನಿಕಾಂತ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.

-

ಚೆನ್ನೈ: ತಮಿಳು ಚಿತ್ರರಂಗದ ಇಬ್ಬರು ದಿಗ್ಗಜ ನಟರಾದ 'ಸೂಪರ್ ಸ್ಟಾರ್' ರಜನಿಕಾಂತ್ (Rajinikanth) ಮತ್ತು ಕಮಲ್ ಹಾಸನ್ (Kamal Haasan) ಅವರು ಬರೋಬ್ಬರಿ 46 ವರ್ಷಗಳ ಬಳಿಕ ಒಟ್ಟಿಗೆ ನಟಿಸಲಿದ್ದಾರೆ. ಕಮಲ್ ಹಾಸನ್ ಮುಂಬರುವ ಚಿತ್ರದಲ್ಲಿ ರಜನಿಕಾಂತ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಈ ಹಿಂದೆ ವದಂತಿಗಳು ಹರಡಿದ್ದವು. ಇದೀಗ ಕಮಲ್ ಹಾಸನ್ ಅದನ್ನು ಧೃಢಪಡಿಸಿದ್ದಾರೆ. ಹೌದು, ನಾವಿಬ್ಬರು ಒಟ್ಟಿಗೆ ಬರುತ್ತಿದ್ದೇವೆ" ಎಂದು ಕಮಲ್ ಹಾಸನ್ ಹೇಳಿದ್ದಾರೆ.
ದುಬೈನಲ್ಲಿ ನಡೆದ ಸೈಮಾ 2025 ಇವೆಂಟ್‌ಗೆ ಹೋಗಿದ್ದ ಕಮಲ್ ಹಾಸನ್ ಅವರು, ಬಹಿರಂಗ ವೇದಿಕೆಯಲ್ಲಿ ರಜನಿಕಾಂತ್ ಜೊತೆಗೆ ಸಿನಿಮಾ ಮಾಡುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ. "ನಾವು ಬಹಳ ಹಿಂದೆಯೇ ಒಂದಾಗಿದ್ದೆವು. ಆದರೆ ಒಂದು ಬಿಸ್ಕತ್ತನ್ನು ಇಬ್ಬರು ಅರ್ಧರ್ಧ ಹಂಚಿಕೊಳ್ಳುತ್ತಿದ್ದೆವು. ಆನಂತರ ನಾವು ಬೇರೆಯಾಗಿರಲು ನಿರ್ಧರಿಸಿದೆವು. ನಮ್ಮಿಬ್ಬರಿಗೂ ಪೂರ್ತಿ ಬಿಸ್ಕತ್ತು ಬೇಕಿತ್ತು. ನಾವು ಅದನ್ನು ಪಡೆದುಕೊಂಡು ಚೆನ್ನಾಗಿ ಆನಂದಿಸಿದೆವು. ಈಗ ನಾವು ಮತ್ತೆ ಅರ್ಧ ಬಿಸ್ಕತ್ತು ಸಾಕು ಎಂದು ನಿರ್ಧರಿಸಿದ್ದೇವೆ, ಆದ್ದರಿಂದ ನಾವು ಒಟ್ಟಿಗೆ ಬರಲಿದ್ದೇವೆ" ಎಂದು ಅವರು ಹೇಳಿದರು.
ನಮಗೆ ಅಂತಹ ಅವಕಾಶಗಳು ಸಿಕ್ಕಿದ್ದು ಒಂದು ದೊಡ್ಡ ವಿಷಯ. ನಾವು ಬಹಳ ಹಿಂದೆಯೇ ಹೀಗೆಯೇ ಇರಬೇಕೆಂದು ಮತ್ತು ಮಾದರಿಯಾಗಬೇಕೆಂದು ನಿರ್ಧರಿಸಿದ್ದೆವು. ಅವರು ಹಾಗೆಯೇ ಇದ್ದಾರೆ, ನಾನು ಕೂಡ ಹಾಗೆಯೇ ಇದ್ದೇನೆ. ಆದ್ದರಿಂದ ಈ ಪುನರ್ಮಿಲನವು ವ್ಯವಹಾರದ ದೃಷ್ಟಿಯಿಂದ ಆಶ್ಚರ್ಯಕರವಾಗಿದ್ದರೂ, ನಮಗೆ ಅಷ್ಟೊಂದು ಆಶ್ಚರ್ಯವಿಲ್ಲ. ಬಹಳ ಹಿಂದೆಯೇ ಆಗಬೇಕಿದ್ದ ಏನೋ ಈಗ ಆಗುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ ಎಂದು ಕಮಲ್ ಹೇಳಿದರು.
ಈ ಸುದ್ದಿಯನ್ನೂ ಓದಿ: ಸಿನಿಮಾಟೋಗ್ರಫಿ, ಸಿನಿಮಾ ಲೈಟಿಂಗ್: ಸುಚಿತ್ರ ಅಕಾಡೆಮಿ ವತಿಯಿಂದ ತರಬೇತಿಗೆ ಅರ್ಜಿ ಆಹ್ವಾನ
'ಕೂಲಿ' ನಿರ್ದೇಶಕ ಲೋಕೇಶ್ ಕನಕರಾಜ್ ಅವರೇ ರಜನಿಕಾಂತ್ ಮತ್ತು ಕಮಲ್ ಹಾಸನ್ ಕಾಂಬಿನೇಷನ್‌ನ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. 2022 ರಲ್ಲಿ ಲೋಕೇಶ್ ಕನಕರಾಜ್ ಕಮಲ್ ಹಾಸನ್ ಅಭಿನಯದ ' ವಿಕ್ರಮ್ ' ಚಿತ್ರವನ್ನು ನಿರ್ದೇಶಿಸಿದ್ದರು. ಈ ಸಿನಿಮಾವನ್ನು ಕಮಲ್ ಹಾಸನ್ ಒಡೆತನದ ರಾಜ್ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಕಂಪನಿ ನಿರ್ಮಿಸಲಿದ್ದು, ರೆಡ್ ಜೈಂಟ್ ಫಿಲ್ಮ್ಸ್ ಸಂಸ್ಥೆ ನಿರ್ಮಾಣದಲ್ಲಿ ಕೈಜೋಡಿಸಲಿದೆ ಎನ್ನಲಾಗಿದೆ. 1985ರಲ್ಲಿ ತೆರೆಕಂಡ ಬಾಲಿವುಡ್‌ನ 'ಗಿರಫ್ತಾರ್' ಚಿತ್ರದಲ್ಲಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ಒಟ್ಟಿಗೆ ನಟಿಸಿದ್ದ. ಆದಾದ ಬಳಿಕ ಇಬ್ಬರೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ.