ಬೆಂಗಳೂರು: ʼಸಹಾರʼ ಸಿನಿಮಾ ಮೂಲಕ ಚಂದವನಕ್ಕೆ ಹೆಜ್ಜೆ ಇಟ್ಟಿದ್ದ ನಿರ್ದೇಶಕ ಮಂಜೇಶ್ ಭಾಗವತ್ ಈಗ ʼಕನಸೊಂದು ಶುರುವಾಗಿದೆʼ (Kanasondu Shuruvagide) ಚಿತ್ರದ ಮೂಲಕ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳಲು ರೆಡಿಯಾಗಿದ್ದಾರೆ. ಮಾ. 7ರಂದು ತೆರೆಗೆ ಬರುತ್ತಿರುವ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಇತ್ತೀಚೆಗೆ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಟರಾದ ಡಾರ್ಲಿಂಗ್ ಕೃಷ್ಣ, ಲೂಸ್ ಮಾದ ಯೋಗಿ, ಸಾಹಸ ನಿರ್ದೇಶಕರ ಥ್ರಿಲರ್ ಮಂಜು ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊಸ ತಂಡಕ್ಕೆ ಸಾಥ್ ಕೊಟ್ಟರು.
ಡಾರ್ಲಿಂಗ್ ಕೃಷ್ಣ ಮಾತನಾಡಿ, ʼʼಟೈಟಲ್ ತುಂಬಾ ಇಷ್ಟವಾಯ್ತು. 'ಕ' ಡಿಸೈನ್ ಮಾಡಿರುವ ರೀತಿ ತುಂಬಾ ಚೆನ್ನಾಗಿದೆ. ಮಂಜೇಶ್ ಅವರಿಗೆ ಒಳ್ಳೆಯದಾಗಲಿ. ಇದು ಅವರ ಎರಡನೇ ಚಿತ್ರ. ಇನ್ನೂ ಹೆಚ್ಚು ಒಳ್ಳೆ ಸಿನಿಮಾ ಮಾಡಲಿ. ನಿರ್ಮಾಪಕರಿಗೂ ಕೂಡ ಒಳ್ಳೆದಾಗಲಿ. ಸಂತು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ದೊಡ್ಡ ಜವಾಬ್ದಾರಿ. ಸಿನಿಮಾ ನಿಲ್ಲಿಸುವುದು ಕಷ್ಟದ ಕೆಲಸ. ಮಾ. 7ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರಮಂದಿರಗಳಲ್ಲಿಯೇ ʼಕನಸೊಂದು ಶುರುವಾಗಿದೆʼ ಸಿನಿಮಾವನ್ನು ನೋಡಿʼʼ ಎಂದು ತಿಳಿಸಿದರು.
ನಟ ಲೂಸ್ ಮಾದ ಯೋಗಿ ಮಾತನಾಡಿ, ʼʼಇಡೀ ಚಿತ್ರತಂಡಕ್ಕೆ ಒಳ್ಳೆದಾಗ್ಲಿ. ಚಿಕ್ಕ ಸಿನಿಮಾ ದೊಡ್ಡ ಸಿನಿಮಾ ಮ್ಯಾಟರ್ ಅಲ್ಲ. ಜನ ನೋಡಬೇಕು. ಚಿಕ್ಕದೋ? ದೊಡ್ಡದೋ? ಅವರು ಡಿಸೈಡ್ ಮಾಡ್ತಾರೆ. ಇವತ್ತಿನ ಪರಿಸ್ಥಿತಿಗೆ ಸಿನಿಮಾ ಮಾಡೋದುವುದು ಸುಲಭ. ಆದರೆ ಅದನ್ನು ತಲುಪಿಸುವುದು ಕಷ್ಟ. ಅದೊಂದು ಫೋಕಸ್ ಆಗಿ ಮಾಡಿ. ಜನರಿಗೆ ರೀಚ್ ಆದರೆ ಸಾಕು. ಆ ಕೆಲಸ ಮಾಡಿʼʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿರ್ದೇಶಕ ಮಂಜೇಶ್ ಭಾಗವತ್ ಮಾತನಾಡಿ, ʼʼಇದು ನನ್ನ 2ನೇ ಸಿನಿಮಾ. ಚಿಕ್ಕ ಕಥೆಯಿಂದ ಶುರುವಾದ ಜರ್ನಿ ಇದು. ಅಂದುಕೊಂಡ ಬಜೆಟ್‌ಗಿಂತ ಸ್ವಲ್ಪ ಜಾಸ್ತಿ ಬಜೆಟ್ ಆಯ್ತು. ನಿರ್ಮಾಪಕರು ಕೂಡ ಸಾಥ್ ಕೊಟ್ಟರು. ʼಕನಸೊಂದು ಶುರುವಾಗಿದೆʼ ಎಂದರೆ ಅಪ್ಪು ಸರ್ ನೆನಪಿಗೆ ಬರ್ತಾರೆ. ಅವರ ಸಿನಿಮಾದ ಹಾಡಿನಲ್ಲಿ ಬರುವ ಲೈನ್ ಇಟ್ಕೊಂಡು ಟೈಟಲ್ ಇಟ್ಟಿದ್ದೇವೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಮೂವಿ. ನೈಜ ಘಟನೆ ಇಟ್ಕೊಂಡು ಸಿನಿಮಾ ಮಾಡಲಾಗಿದೆʼʼ ಎಂದು ಹೇಳಿದರು.
ಕೆಕೆಆರ್ (KKR) ಮೀಡಿಯಾ ಬ್ಯಾನರ್ ನಡಿ ಲಕ್ಷ್ಮೀ ಕಾಂತ್ ರೆಡ್ಡಿ ನಿರ್ಮಿಸಿರುವ 'ಕನಸೊಂದು ಶುರುವಾಗಿದೆ' ಚಿತ್ರದ ಮೂಲಕ ಸಂತೋಷ್ ಬಿಲ್ಲವ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಅವರಿಗೆ ಜೋಡಿಯಾಗಿ ನಟಿ ಸಾತ್ವಿಕಾ ಕಾಣಿಸಿಕೊಂಡಿದ್ದಾರೆ. ಥ್ರಿಲ್ಲರ್ ಮಂಜು, ಕುರಿ ಸುನಿಲ್ , ರಶ್ಮಿ, ರಾಜು ಕಾಲ್ಕುಣಿ, ಕೃಷ್ಣಮೂರ್ತಿ ಕನಕಪುರ, ನಾಗರತ್ನ ಭಟ್ ಮತ್ತಿತರರು ಮುಖ್ಯ ಪಾತ್ರದಲ್ಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ʼಕನಸೊಂದು ಶುರುವಾಗಿದೆʼ ಚಿತ್ರಕ್ಕೆ ಬೆಂಗಳೂರು, ಕುಂದಾಪುರ & ಕುಣಿಗಲ್ ಸುತ್ತಮುತ್ತಲ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Pinaka Movie: ʼಪಿನಾಕʼ ಚಿತ್ರದ ವಿಭಿನ್ನ ಪೋಸ್ಟರ್ ರಿಲೀಸ್: ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ
ಮಂಜೇಶ್ ಭಾಗವತ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕ್ಯಾಮೆರಾ ಹಿಡಿದಿದ್ದು, ಸೂರಜ್ ಜೋಯಿಸ್ ಸಂಗೀತ, ದೀಪಕ್ ಸಿಎಸ್ ಗೌಡ ಸಂಕಲನ ಜವಾಬ್ದಾರಿ ನಿಭಾಯಿಸಿದ್ದಾರೆ. ಶಶಾಂಕ್, ಸಿಂಪಲ್ ಸುನಿ & ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಸೋನು ನಿಗಂ, ರಾಜೇಶ್ ಕೃಷ್ಣನ್ ಹಾಗೂ ವಾಸುಕಿ ವೈಭವ್ ಧ್ವನಿಯಾಗಿದ್ದಾರೆ. ಧೀರಜ್ ರಾಜ್ಯಾದ್ಯಂತ ʼಕನಸೊಂದು ಶುರುವಾಗಿದೆʼ ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ.