ರಾಜಕೀಯ ಅತ್ಯಂತ ಕಡಿಮೆ ಸಂಬಳದ ಉದ್ಯೋಗ; ಸಚಿವ ಸ್ಥಾನ ತ್ಯಾಗಕ್ಕೆ ಮುಂದಾದ ಸುರೇಶ್ ಗೋಪಿಗೆ ಕಂಗನಾ ರಣಾವತ್ ಬೆಂಬಲ
ಕೇರಳದ ಬಿಜೆಪಿಯ ಏಕೈಕ ಲೋಕಸಭಾ ಸದಸ್ಯ ಹಾಗೂ ನಟ ಸುರೇಶ್ ಗೋಪಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ಸಿನಿಮಾ ವೃತ್ತಿಜೀವನಕ್ಕೆ ಮರಳುವ ಆಸೆಯಿಂದ ಅವರು ಈ ನಿರ್ಧಾರ ಕೈಗೊಂಡಿದ್ದು, ಆದಾಯದಲ್ಲಿ ಕುಸಿತ ರಾಜೀನಾಮೆಗೆ ಕಾರಣ ಎಂದು ತಿಳಿಸಿದ್ದಾರೆ. ತಮ್ಮ ಸ್ಥಾನಕ್ಕೆ ಹಿರಿಯ ಬಿಜೆಪಿ ನಾಯಕ ಸಿ. ಸದಾನಂದನ್ ಮಾಸ್ಟರ್ ಅವರನ್ನು ನೇಮಿಸುವಂತೆ ಶಿಫಾರಸು ಮಾಡಿದ್ದಾರೆ.

ಕಂಗನಾ ರಣಾವತ್ - ಸುರೇಶ್ ಗೋಪಿ -

ನವದೆಹಲಿ: ನಟ ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ (Suresh Gopi) ತಮ್ಮ ಸಚಿವ ಸ್ಥಾನವನ್ನು ತ್ಯಜಿಸಿ ಪುನಃ ಸಿನಿಮಾ ರಂಗಕ್ಕೆ ಮರಳಲು ಬಯಸಿರುವುದನ್ನು ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆಯಾಗಿರುವ ಕಂಗನಾ ರಣಾವತ್ (Kangana Ranaut) ಬೆಂಬಲಿಸಿದ್ದಾರೆ.
ಅಕ್ಟೋಬರ್ 14ರಂದು ತಮ್ಮ ಇನ್‌ಸ್ಟಾಗ್ರಾಮ್ (Instagram) ಸ್ಟೋರಿ ಮೂಲಕ ಪ್ರತಿಕ್ರಿಯಿಸಿರುವ ಕಂಗನಾ, "ಸಾರ್ವಜನಿಕ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವ ರಾಜಕಾರಣಿಗಳಿಗೆ, ತಮ್ಮ ಇತರ ವೃತ್ತಿಗಳನ್ನೂ ಮುಂದುವರಿಸಲು ಅವಕಾಶ ನೀಡಬೇಕು" ಎಂದಿದ್ದಾರೆ.
"ರಾಜಕೀಯ ತುಂಬಾ ಕಠಿಣ ವೃತ್ತಿ ಮತ್ತು ಅತ್ಯಂತ ಕಡಿಮೆ ಸಂಬಳದ ಉದ್ಯೋಗವಾಗಿದ್ದು, ಇಲ್ಲಿ ಸಾಕಷ್ಟು ಖರ್ಚುಗಳಿರುತ್ತವೆ. ಕಲಾವಿದರೂ ಆಗಿರುವ ರಾಜಕಾರಣಿಗಳು ತಮ್ಮ ವೃತ್ತಿಗೆ ಸಮಯ ನೀಡಿದರೆ ಟೀಕೆಗಳಿಗೆ ಗುರಿಯಾಗುತ್ತಾರೆ. ಈ ರೀತಿಯ ಪರಿಸ್ಥಿತಿ ಇರುವುದರಿಂದಲೇ ನಿಜವಾದ ಮತ್ತು ಪ್ರಾಮಾಣಿಕ ಸಾಧಕರು ಜನ ಸೇವೆಗೆ ಬರಲು ಇಷ್ಟ ಪಡುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ವೃತ್ತಿಪರರ ಬಗ್ಗೆ ಜನರು ತಮ್ಮ ಮನೋಭಾವನೆಯನ್ನು ಬದಲಿಸಿಕೊಳ್ಳಬೇಕು. ನಾವು ಯಾವುದೇ ಹುದ್ದೆ ಅಥವಾ ಅಧಿಕಾರದಲ್ಲಿದ್ದರೂ, ನಮ್ಮ ಸ್ವಂತ ವೃತ್ತಿಯಲ್ಲಿ ಕೆಲಸ ಮಾಡುವ ಹಕ್ಕು ನಮಗಿದೆ ಎಂದು ನಂಬಬೇಕು" ಎಂದು ಕಂಗನಾ ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Dharmasthala: ಧರ್ಮಸ್ಥಳ ಪ್ರಕರಣ; ಯೂಟ್ಯೂಬರ್ ಸಮೀರ್, ಗಿರೀಶ್ ಮಟ್ಟಣ್ಣನವರ್ ಸೇರಿ ಹಲವರಿಗೆ ಸಂಕಷ್ಟ
ಇತ್ತೀಚೆಗಷ್ಟೇ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸುರೇಶ್ ಗೋಪಿ "ನಾನು ಸಚಿವ ಸ್ಥಾನದಿಂದ ಕೆಳಗಿಳಿದ ಬಳಿಕ ಸದಾನಂದನ್ ಮಾಸ್ಟರ್ ಅವರನ್ನೇ ಕೇಂದ್ರ ಸಚಿವರನ್ನಾಗಿ ಮಾಡಬೇಕು ಎಂದು ಗೌರವಪೂರ್ವಕವಾಗಿ ಹೇಳುತ್ತೇನೆ. ಇದು ಕೇರಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಲಿದೆ," ಎಂದಿದ್ದರು. ಅಲ್ಲದೇ "ನಾನು ಎಂದಿಗೂ ಸಿನಿಮಾ ವೃತ್ತಿಯನ್ನು ಬಿಟ್ಟು ಸಚಿವನಾಗುವ ಆಸೆ ಹೊಂದಿರಲಿಲ್ಲ. ಇತ್ತೀಚೆಗೆ ನನ್ನ ಆದಾಯವೂ ಕಡಿಮೆ ಆಗಿದೆ" ಸುರೇಶ್ ಗೋಪಿ ಹೇಳಿಕೊಂಡಿದ್ದರು.
ಸುರೇಶ್ ಗೋಪಿ ಪ್ರಸ್ತುತ ಪೆಟ್ರೋಲಿಯಂ ಮತ್ತು ಪ್ರವಾಸೋದ್ಯಮ ಖಾತೆಯ ಕೇಂದ್ರ ರಾಜ್ಯ ಸಚಿವರಾಗಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ ಆಗಿರುವ ಕಂಗನಾ, ತಮ್ಮ ಸಿನಿಮಾ ಜೀವನವನ್ನೂ ಸಮತೋಲದನಿಂದ ನಿರ್ವಹಿಸಿಕೊಂಡು ಬಂದಿದ್ದಾರೆ. 'ಎಮರ್ಜೆನ್ಸಿ' ಚಿತ್ರದಲ್ಲಿ ಕಂಗನಾ ಕೊನೆಯದಾಗಿ ಕಾಣಿಸಿಕೊಂಡಿದ್ದು, ಇದು ತಾವೇ ನಿರ್ದೇಶಿಸಿದ ಮೊದಲ ಸಿನಿಮಾ ಕೂಡ ಆಗಿದೆ. ಈ ಚಿತ್ರದಲ್ಲಿ ಅವರು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಪಾತ್ರವನ್ನು ನಿರ್ವಹಿಸಿದ್ದಾರೆ.
ಮುಂಬರುವ ‘Blessed Be The Evil’ ಎಂಬ ಹಾರರ್ ಸಿನಿಮಾದಲ್ಲಿ ಕಂಗನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಅಧಿಕೃತವಾಗಿ ಹಾಲಿವುಡ್(Hollywood)ಗೆ ಪಾದಾರ್ಪಣೆ ಮಾಡಲಿದ್ದಾರೆ.