ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ಎಂದೇ ಪರಿಗಣಿಸಲಾಗುವ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ (Dadasaheb Phalke Award) ಸ್ಯಾಂಡಲ್‌ವುಡ್‌ನ ಹಿರಿಯ ನಟ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಅನಂತ್ ನಾಗ್ ಅವರು ಭಾಜನರಾಗಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿರುವ ಗಣನೀಯ ಕೊಡುಗೆಯನ್ನು ಗೌರವಿಸಿ 2024ನೇ ಸಾಲಿನ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಈ ಕುರಿತ ಅಧಿಕೃತ ಪ್ರಕಟಣೆಯನ್ನು ಕೇಂದ್ರ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ (PIB) ಬುಧವಾರ (ಸೆ.16) ಹೊರಡಿಸಿದೆ.
ಕಲಾವಿದರಿಗೆ ಸ್ಫೂರ್ತಿಯಾಗಿರುವ ಆನಂತ್
ಈ ಮಹತ್ವದ ನಿರ್ಧಾರದ ಕುರಿತು ವಿವರ ನೀಡಿರುವ ಪತ್ರಿಕಾ ಮಾಹಿತಿ ಬ್ಯೂರೋ, "ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ, ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆ ಹಾಗೂ ತಲೆಮಾರುಗಳ ಸಿನಿರಸಿಕರಿಗೆ ಮತ್ತು ಕಲಾವಿದರಿಗೆ ಸ್ಫೂರ್ತಿಯಾಗಿರುವ ಅವರ 5 ದಶಕಗಳ ವೈಭವೋಪೇತ ಸಿನಿಪಯಣವನ್ನು ಪರಿಗಣಿಸಿ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲು ಭಾರತ ಸರ್ಕಾರವು ಹರ್ಷಿಸುತ್ತದೆ" ಎಂದು ತಿಳಿಸಿದೆ.
ಘೋಷಣೆ ಮಾಡಿದ ಪಿಐಬಿ
ಕನ್ನಡ ಮಾತ್ರವಲ್ಲದೆ ಹಿಂದಿ, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ವಿಶಿಷ್ಟ ನಟನೆಯ ಮೂಲಕ ಛಾಪು ಮೂಡಿಸಿರುವ ಅನಂತ್ ನಾಗ್ ಅವರ ಸಾಧನೆಗೆ ಸಂದ ಈ ಗೌರವವು ಇಡೀ ಚಂದನವನಕ್ಕೆ ಹೆಮ್ಮೆ ತಂದಿದೆ.
ಅಭಿಮಾನಿಗಳು ಖುಷ್
ಅನಂತ್ ನಾಗ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಇದೇ ಸೆಪ್ಟೆಂಬರ್ 22ರಂದು ಗುಜರಾತ್‌ನ ಕೆವಾಡಿಯಾದಲ್ಲಿ ಆಯೋಜಿಸಲಾಗುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು. ಈ ಹಿಂದೆ ಕನ್ನಡ ಚಿತ್ರರಂಗದಿಂದ ಡಾ. ರಾಜ್‌ಕುಮಾರ್ ಅವರಂತಹ ಮಹನೀಯರಿಗೆ ದಕ್ಕಿದ್ದ ಈ ಶ್ರೇಷ್ಠ ಗೌರವ, ಇದೀಗ ಅನಂತ್ ನಾಗ್ ಅವರ ಮುಡಿಗೇರುವ ಮೂಲಕ ಕನ್ನಡ ನಾಡಿನ ಕಲಾಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಉತ್ತುಂಗಕ್ಕೇರಿಸಿದೆ. ಅವರ ಈ ಸಾಧನೆಗೆ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಹಾಗೂ ಅಪಾರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.