ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಜನಪ್ರಿಯ ನಟ, ಯಶಸ್ವಿ ನಿರ್ಮಾಪಕ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆಯು ರಾಮನಗರದ ಅವರ ನೆಚ್ಚಿನ ಫಾರ್ಮ್ ಹೌಸ್‌ನಲ್ಲಿ ಬುಧವಾರ (ಮೇ 13) ಲಿಂಗಾಯತ ಸಂಪ್ರದಾಯದಂತೆ ನೆರವೇರಿತು. ಈ ಅಂತಿಮ ಕಾರ್ಯದಲ್ಲಿ ಚಿತ್ರರಂಗದ ಗಣ್ಯರು ಹಾಗೂ ಕಿರುತೆರೆಯ ನೂರಾರು ಕಲಾವಿದರು ಭಾಗವಹಿಸಿ ಪ್ರತಿಭಾನ್ವಿತ ನಟನಿಗೆ ಕಣ್ಣೀರಿನ ವಿದಾಯ ಹೇಳಿದರು.
ವಿಧಿವಿಧಾನಗಳನ್ನು ನೆರವೇರಿಸಿದ ಅಣ್ಣನ ಮಗ
ದಿಲೀಪ್ ರಾಜ್ ಅವರಿಗೆ ಧೃತಿ ಮತ್ತು ಅದಿತಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ಸಂಪ್ರದಾಯದಂತೆ ದಿಲೀಪ್ ಅವರ ಅಣ್ಣನ ಮಗ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿದರು. ದಿಲೀಪ್ ಅವರ ಪಾರ್ಥಿವ ಶರೀರವನ್ನು ಢೋಲಿಯಲ್ಲಿ ಕೂರಿಸಿ, ವಿಭೂತಿ ಹಚ್ಚಿ, ಬಿಲ್ವಪತ್ರೆಗಳಿಂದ ಅಲಂಕರಿಸಲಾಗಿತ್ತು. ಗುಂಡಿಯಲ್ಲಿ ಕಮಾನಿನ ರೀತಿ ರಚಿಸಿ, ದೀಪ ಹಚ್ಚಿ ಇಡಲಾಯಿತು. ಉಪ್ಪು, ಬಿಲ್ವಪತ್ರೆ, ಬಾಳೆಎಲೆ ಹಾಗೂ ಹೂವುಗಳನ್ನು ಅರ್ಪಿಸಿ ಪಾರ್ಥಿವ ಶರೀರವನ್ನು ಮಣ್ಣಿನಲ್ಲಿ ಲೀನವಾಗಿಸಲಾಯಿತು.
ರಾಜ್‌ಶ್ರೀ ಫಾರ್ಮ್ ಹೌಸ್‌ನಲ್ಲಿ ಲೀನ
ರಾಮನಗರ ಮತ್ತು ಕನಕಪುರ ಮುಖ್ಯರಸ್ತೆಯಲ್ಲಿರುವ ಗುನ್ನೂರು ಗ್ರಾಮದ ಬಳಿ ದಿಲೀಪ್ ಅವರು ಸುಮಾರು 10 ವರ್ಷಗಳ ಹಿಂದೆ ಒಂದು ಎಕರೆ ಜಮೀನನ್ನು ದಿಲೀಪ್ ಖರೀದಿಸಿದ್ದರು. ತಮ್ಮ ಮತ್ತು ಪತ್ನಿ ಶ್ರೀವಿದ್ಯಾ ಅವರ ಹೆಸರನ್ನು ಒಗ್ಗೂಡಿಸಿ ಇದಕ್ಕೆ ‘ರಾಜ್‌ಶ್ರೀ’ ಎಂದು ನಾಮಕರಣ ಮಾಡಿದ್ದರು. ತಿಂಗಳಿಗೊಮ್ಮೆಯಾದರೂ ಇಲ್ಲಿಗೆ ಬಂದು ಕಾಲ ಕಳೆಯುತ್ತಿದ್ದ ದಿಲೀಪ್ ಅವರಿಗೆ ಈ ತೋಟವೆಂದರೆ ಪಂಚಪ್ರಾಣವಾಗಿತ್ತು. ಇದೀಗ ಅದೇ ಜಾಗದಲ್ಲಿ ಅವರ ಅಂತಿಮ ಸಂಸ್ಕಾರ ಮಾಡಲಾಯಿತು.
ಹೈನುಗಾರಿಕೆಯ ಕನಸು ಅಪೂರ್ಣ
ದಿಲೀಪ್ ರಾಜ್ ಅವರು ಕೃಷಿ ಮತ್ತು ಹೈನುಗಾರಿಕೆಯ ಬಗ್ಗೆಯೂ ಅಪಾರ ಆಸಕ್ತಿ ಹೊಂದಿದ್ದರು. ರಾಮನಗರದ ಈ ತೋಟದಲ್ಲಿ ಹಸುಗಳನ್ನು ಸಾಕಿ ದೊಡ್ಡ ಮಟ್ಟದ ಹೈನುಗಾರಿಕೆ ಮಾಡಬೇಕೆಂಬ ಆಸೆ ಹೊಂದಿದ್ದರು. ಇದಕ್ಕಾಗಿ ಸ್ಥಳೀಯ ರೈತರೊಂದಿಗೆ ಚರ್ಚಿಸಿ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಆದರೆ, ವಿಧಿಯ ಆಟದಿಂದಾಗಿ ಈ ಕನಸು ನನಸಾಗುವ ಮೊದಲೇ ದಿಲೀಪ್ ಅವರು ಇಹಲೋಕ ತ್ಯಜಿಸಿದ್ದಾರೆ.
ಅಗಲಿದ ನಟನಿಗೆ ಅಂತಿಮ ಗೌರವ ಸಲ್ಲಿಸಲು ಬಂದಿದ್ದ ಧಾರಾವಾಹಿ ಕಲಾವಿದರು ಭಾವುಕರಾದರು. ಕನ್ನಡ ಚಿತ್ರರಂಗ ಒಬ್ಬ ಸಂಭಾವಿತ ನಟ ಮತ್ತು ಸೃಜನಶೀಲ ಧಾರಾವಾಹಿ ನಿರ್ಮಾಪಕನನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದೆ.