ಸ್ಯಾಂಡಲ್‌ವುಡ್ ನಟ, ನಿರ್ದೇಶಕ ‘ದುನಿಯಾ’ ವಿಜಯ್ ಹಾಗೂ ಅವರ ಪತ್ನಿ ನಾಗರತ್ನ ನಡುವಿನ ದಾಂಪತ್ಯ ಬದುಕು ಕೊನೆಗೂ ಅಂತ್ಯ ಕಂಡಿದೆ. ಕಳೆದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಇವರ ವಿಚ್ಛೇದನ ಪ್ರಕರಣವನ್ನು ಇತ್ಯರ್ಥಪಡಿಸಿರುವ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ, ದಂಪತಿಗೆ ಅಧಿಕೃತವಾಗಿ ಡಿವೋರ್ಸ್ ಮಂಜೂರು ಮಾಡಿದೆ.
2 ಕೋಟಿ ರೂ. ಜೀವನಾಂಶ
ನ್ಯಾಯಮೂರ್ತಿ ಡಿ. ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿಭೂಷಣ್ ಅವರನ್ನೊಳಗೊಂಡ ಹೈಕೋರ್ಟ್ ಪೀಠವು ಈ ಆದೇಶವನ್ನು ಹೊರಡಿಸಿದೆ. ಪತ್ನಿ ಹಾಗೂ ಮೂವರು ಮಕ್ಕಳ ಭವಿಷ್ಯದ ಜೊತೆಗೆ ನಟ ದುನಿಯಾ ವಿಜಯ್ ಅವರ ಸಾಮಾಜಿಕ ಸ್ಥಾನಮಾನ ಹಾಗೂ ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸಿದ ನ್ಯಾಯಾಲಯ, ಪತ್ನಿ ನಾಗರತ್ನ ಅವರಿಗೆ 2 ಕೋಟಿ ರೂಪಾಯಿ ಜೀವನಾಂಶ ನೀಡುವಂತೆ ವಿಜಯ್ ಅವರಿಗೆ ಆದೇಶಿಸಿದೆ.
13 ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ
ದುನಿಯಾ ವಿಜಯ್ ಅವರು ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಕೋರಿ 2013ರಲ್ಲೇ ನ್ಯಾಯಾಲಯದ ಮೆಟ್ಟಿಲೇರಿದ್ದರು. 2014ರಲ್ಲಿ ದಂಪತಿ ನಡುವೆ ಸಂಧಾನಕ್ಕೆ ಪ್ರಯತ್ನ ನಡೆಸಲಾಗಿತ್ತಾದರೂ, ನಂತರದ ದಿನಗಳಲ್ಲಿ ವಿವಾದ ಮತ್ತೆ ತಾರಕಕ್ಕೇರಿ ಕಾನೂನು ಹೋರಾಟ ಮುಂದುವರಿದಿತ್ತು. 2019ರಲ್ಲಿ ಮಹಿಳಾ ಆಯೋಗದ ಮುಂದೆಯೂ ಹಾಜರಾಗಿದ್ದ ವಿಜಯ್, "ನಾಗರತ್ನ ಅವರೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ, ಮಕ್ಕಳ ಜವಾಬ್ದಾರಿಯನ್ನು ನಾನೇ ನೋಡಿಕೊಳ್ಳುತ್ತೇನೆ" ಎಂದು ಸ್ಪಷ್ಟಪಡಿಸಿದ್ದರು. ಸತತ 13 ವರ್ಷಗಳ ಕೌಟುಂಬಿಕ ಬಿಕ್ಕಟ್ಟು ಹಾಗೂ ನ್ಯಾಯಾಲಯ ಪ್ರಕ್ರಿಯೆಗಳ ಬಳಿಕ ಇದೀಗ ಈ ಪ್ರಕರಣಕ್ಕೆ ಅಧಿಕೃತ ತೆರೆಬಿದ್ದಿದೆ.
ನಟ 'ದುನಿಯಾ' ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ FIR! ಯಾವೆಲ್ಲಾ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲು?
ದುನಿಯಾ ವಿಜಯ್ ಮತ್ತು ನಾಗರತ್ನ ದಂಪತಿಗೆ ರಿತನ್ಯಾ, ಮೊನಿಷಾ ಹಾಗೂ ಸಾಮ್ರಾಟ್ ಎಂಬ ಮೂವರು ಮಕ್ಕಳಿದ್ದಾರೆ. ಇವರಲ್ಲಿ ಹಿರಿಯ ಪುತ್ರಿ ರಿತನ್ಯಾ ‘ಲ್ಯಾಂಡ್‌ಲಾರ್ಡ್’ ಚಿತ್ರದ ಮೂಲಕ ಹಾಗೂ ಮೊನಿಷಾ ‘ಸಿಟಿಲೈಟ್ಸ್’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದು, ಕಿರಿಯ ಪುತ್ರ ಸಾಮ್ರಾಟ್ ಸದ್ಯ ವಿದ್ಯಾಭ್ಯಾಸದಲ್ಲಿ ನಿರತರಾಗಿದ್ದಾರೆ. ಇನ್ನು ನಟ ವಿಜಯ್ ಅವರು ಕಳೆದ ಕೆಲ ವರ್ಷಗಳಿಂದ ನಟಿ ಹಾಗೂ ಗಾಯಕಿ ಕೀರ್ತಿ ಪಟ್ಟಾಡಿ ಅವರೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದಾರೆ.