ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೂರ್ಖರ ದಿನದಂದು ದಿಢೀರ್‌ ಅಂತ ಪ್ರೆಸ್‌ಮೀಟ್‌ ಮಾಡಿದ್ದೇಕೆ ಉಪೇಂದ್ರ? ಜನರಿಗೆ ʻರಿಯಲ್‌ ಸ್ಟಾರ್‌ʼ ಕೊಟ್ಟ ಸಂದೇಶ ಏನ್‌ ಗೊತ್ತಾ?

ನಟ ಉಪೇಂದ್ರ ಅವರು ಏಪ್ರಿಲ್ 1ರಂದು 'ದಿ ರಿಯಲ್ ಪ್ರಜಾಕೀಯ' ಎಂಬ ಮೊಬೈಲ್ ಅಪ್ಲಿಕೇಶನ್ ರಿಲೀಸ್‌ ಮಾಡಿದ್ದಾರೆ. ಜೊತೆಗೆ ಎಡ-ಬಲ ಸಿದ್ಧಾಂತಗಳ ನಡುವೆ ಸಿಲುಕದೆ, ಪ್ರಜೆಗಳು ಸ್ವತಂತ್ರವಾಗಿ ಯೋಚಿಸಿ ಸರ್ಕಾರದ ಮಾಲೀಕರೆಂದು ಗುರುತಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ 1 ರಂದು ಆಚರಿಸಲಾಗುವ 'ಮೂರ್ಖರ ದಿನ'ವನ್ನು (April Fool's Day) 'ಬುದ್ಧಿವಂತರ ದಿನ'ವನ್ನಾಗಿ (Intelligence Day) ಬದಲಿಸುವ ಹೊಸ ಆಲೋಚನೆಯೊಂದಿಗೆ ನಟ ಮತ್ತು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ಇಂದು (ಏ.1) 'ದಿ ರಿಯಲ್ ಪ್ರಜಾಕೀಯ' ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದಾರೆ.

ಈ ಆ್ಯಪ್ ಸ್ವತಂತ್ರವಾಗಿ ಯೋಚಿಸುವವರಿಗಾಗಿ!

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ ಅವರು, "ಇಷ್ಟು ವರ್ಷ ನಾವು ಏಪ್ರಿಲ್ ಒಂದನ್ನು ಮೂರ್ಖರ ದಿನ ಎಂದೇ ಆಚರಿಸಿಕೊಂಡು ಬಂದಿದ್ದೇವೆ. ಆದರೆ ಇಂದಿನಿಂದ ಅದನ್ನು ಬುದ್ಧಿವಂತರ ಅಥವಾ ಜ್ಞಾನಿಗಳ ದಿನವನ್ನಾಗಿ ಮಾಡೋಣ ಎಂಬುದು ನನ್ನ ಆಸೆ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ನೇರವಾಗಿ ಮಾತನಾಡಲು ಭಯವಾಗುತ್ತಿದೆ. ಇಲ್ಲಿ ಎಡ ಎನ್ನುವವರು ಒಬ್ಬರ ಮೇಲೆ ಅವಲಂಬಿತರಾಗಿದ್ದಾರೆ, ಬಲ ಎನ್ನುವವರು ಇನ್ನೊಬ್ಬರ ಮೇಲೆ ವಾಲಿ ನಿಂತಿದ್ದಾರೆ. ಆದರೆ ನಾನು ಮಧ್ಯದಲ್ಲಿ ನೇರವಾಗಿ ನಿಂತು ಸ್ವತಂತ್ರವಾಗಿ ಯೋಚಿಸುತ್ತಿದ್ದೇನೆ. ಈ ಆ್ಯಪ್ ಕೂಡ ಅಂತಹ ಸ್ವತಂತ್ರವಾಗಿ ಯೋಚಿಸುವವರಿಗಾಗಿಯೇ ರೂಪಿಸಲಾಗಿದೆ" ಎಂದು ಹೇಳಿದರು.

Aamir Khan: ಉಪೇಂದ್ರ ಸಿನಿಮಾದ ಟ್ರೇಲರ್ ನೋಡಿ ʼನಾನು ಉಪೇಂದ್ರ ಅಭಿಮಾನಿʼ ಎಂದ ಆಮೀರ್ ಖಾನ್!

ನಾವು ಇಂಡಿಪೆಂಡೆಂಟ್ ಆಗಿರಬೇಕು

"ಜೀವನದಲ್ಲಿ ನಾವು ಪ್ರತಿಯೊಂದಕ್ಕೂ ಇತರರ ಮೇಲೆ ಅವಲಂಬಿತರಾಗುತ್ತಿದ್ದೇವೆ. ನಾವು ಎಷ್ಟು ಕಡಿಮೆ ಅವಲಂಬಿತರಾಗುತ್ತೇವೆಯೋ ಅಷ್ಟು ಸಮಸ್ಯೆಗಳು ದೂರವಾಗುತ್ತವೆ. ಪ್ರಪಂಚವೇ ಒಬ್ಬರಿಗೊಬ್ಬರು ಡಿಪೆಂಡೆಂಟ್ ಆಗಿರಬಹುದು, ಆದರೆ ನಮ್ಮ ಸ್ವಂತ ನಿರ್ಧಾರಗಳಲ್ಲಿ ನಾವು ಇಂಡಿಪೆಂಡೆಂಟ್ ಆಗಿರಬೇಕು. ಇಲ್ಲಿಯವರೆಗಿನ ಪ್ರಜಾಕೀಯ ಕೇವಲ ಒಂದು ಆಲೋಚನೆಯಾಗಿರಬಹುದು, ಆದರೆ ಈ ಆ್ಯಪ್ ಮೂಲಕ ನಾವು 'ರಿಯಲ್ ಪ್ರಜಾಕೀಯ'ದ ಕೆಲಸಗಳನ್ನು ಜನರಿಗೆ ತಲುಪಿಸಲಿದ್ದೇವೆ" ಎಂದು ಯೋಜನೆಗಳನ್ನು ಉಪೇಂದ್ರ ಹಂಚಿಕೊಂಡರು.

ಹಳೆಯ ಘಟನೆಗಳ ನೆನಪು ಮಾಡಿಕೊಂಡ ಉಪ್ಪಿ

ತಮ್ಮ ರಾಜಕೀಯ ಪಯಣದ ಆರಂಭಿಕ ದಿನಗಳ ಅಡೆತಡೆಗಳನ್ನು ನೆನಪಿಸಿಕೊಂಡ ಉಪೇಂದ್ರ, "ಆರಂಭದಲ್ಲಿ ನಾನು ಒಂದು ಪಕ್ಷಕ್ಕೆ ಹೋದಾಗ ಅವರ ವಿಚಾರಗಳು ನನಗೆ ಒಪ್ಪಿಗೆಯಾಗಲಿಲ್ಲ. ಕೊನೆಗೆ ಟಿಕೆಟ್ ಹಂಚಿಕೆಯ ಸಮಯದಲ್ಲಿ ಅವರು ನಡೆದುಕೊಂಡ ರೀತಿ ನನಗೆ ಸರಿ ಅನಿಸಲಿಲ್ಲ. ಹಾಗಾಗಿ ನಾನೇ ಹೊರಬಂದು ಸ್ವತಂತ್ರವಾಗಿ ಪಕ್ಷ ಕಟ್ಟಿದೆ. ಈಗ ಈ ಆ್ಯಪ್ ಮೂಲಕ ಜನಸಾಮಾನ್ಯರ ಜೊತೆ ನೇರ ಸಂಪರ್ಕ ಸಾಧಿಸಲು ನಾವು ಸಜ್ಜಾಗಿದ್ದೇವೆ" ಎಂದು ತಿಳಿಸಿದರು.

Actor Upendra: ಸಿಲಿಂಡರ್‌ಗೂ ನನಗೂ ಲಿಂಕ್‌ ಇಲ್ಲ; ಮತ್ತೆ ತಲೆಗೆ ಹುಳ ಬಿಟ್ಟ ನಟ ಉಪೇಂದ್ರ

ಉಪೇಂದ್ರ ಅವರ ಸುದ್ದಿಗೋಷ್ಠಿ



ಪ್ರಜೆಗಳು ಸರ್ಕಾರದ ಮಾಲೀಕರು

"ಇದು ನನ್ನ ದೇಶ, ನನ್ನ ತೆರಿಗೆ ಹಣದಿಂದ ಈ ಸರ್ಕಾರಗಳು ನಡೆಯುತ್ತಿವೆ. ನಾನು ಕೇವಲ ಫಾಲೋವರ್ ಅಲ್ಲ, ಈ ವ್ಯವಸ್ಥೆಯ ಮಾಲೀಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಜನರಿಗೆ ಮಾತ್ರ ಪ್ರಜಾಕೀಯದಲ್ಲಿ ಆದ್ಯತೆ ಇದೆ. ಪ್ರಜೆಗಳು ತಮ್ಮನ್ನು ತಾವು ಕೇವಲ ಮತದಾರರೆಂದು ಭಾವಿಸದೆ, ಸರ್ಕಾರದ ಮಾಲೀಕರೆಂದು ಗುರುತಿಸಿಕೊಂಡಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳು ಈಡೇರಲು ಸಾಧ್ಯ" ಎಂದು ಉಪೇಂದ್ರ ತಿಳಿಸಿದ್ದಾರೆ.