ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

10 ತಿಂಗಳ ಹಸುಗೂಸನ್ನು ಗಂಡನ ಮಡಿಲಿನಲ್ಲಿಟ್ಟು ತೆಲುಗು ‘ಬಿಗ್ ಬಾಸ್‌ 10’ ಶೋಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಕನ್ನಡತಿ ಚೈತ್ರಾ ರೈ!

ಕನ್ನಡ ನಟಿ ಚೈತ್ರಾ ರೈ ಅವರು ತೆಲುಗು ಬಿಗ್ ಬಾಸ್ 10ನೇ ಆವೃತ್ತಿಗೆ 6ನೇ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ. ಕೇವಲ 10 ತಿಂಗಳ ಹಸುಗೂಸನ್ನು ಪತಿಗೆ ಸುಪರ್ದಿಗೆ ನೀಡಿ, ರಿಯಾಲಿಟಿ ಶೋ ಪ್ರವೇಶಿಸಿದ ಅವರ ನಡೆ ಪ್ರೇಕ್ಷಕರ ಗಮನಸೆಳೆಯುತ್ತಿದೆ. 2ನೇ ಹೆರಿಗೆಯ ನಂತರ ಮೂರು ತಿಂಗಳಲ್ಲಿ 22 ಕೆಜಿ ತೂಕ ಇಳಿಸಿಕೊಂಡಿದ್ದ ಚೈತ್ರಾ ಎಲ್ಲರ ಗಮನಸೆಳೆದಿದ್ದರು.

ನಟ ನಾಗಾರ್ಜುನ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಬಿಗ್ ಬಾಸ್ ತೆಲುಗು ಸೀಸನ್ 10’ ಸೆಪ್ಟೆಂಬರ್ 6ರಿಂದ ಅದ್ದೂರಿಯಾಗಿ ಆರಂಭಗೊಂಡಿದೆ. ಈ ಬಾರಿ ‘ದಶಾವತಾರಂ’ ಥೀಮ್‌ನ ಈ ಸೀಸನ್‌ಗೆ ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಮನೆಮಾತಾಗಿರುವ ಮಂಗಳೂರು ಮೂಲದ ನಟಿ ಚೈತ್ರಾ ರೈ 6ನೇ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಇತ್ತೀಚೆಗಷ್ಟೇ ಎರಡನೇ ಮಗುವಿಗೆ ತಾಯಿಯಾಗಿರುವ ಚೈತ್ರಾ, ಕೇವಲ 10 ತಿಂಗಳ ಪುಟ್ಟ ಮಗಳನ್ನು ಪತಿಯ ಸುಪರ್ದಿಗೆ ಒಪ್ಪಿಸಿ ಬಿಗ್ ಬಾಸ್ ಮನೆ ಪ್ರವೇಶಿಸಿರುವುದು ವಿಶೇಷ.

ತೆಲುಗು ರಾಜ್ಯಗಳಲ್ಲಿ ಚೈತ್ರಾಗೆ ಬೇಡಿಕೆ

ಮಂಗಳೂರು ಮೂಲದ ಚೈತ್ರಾ ರೈ ಅವರು 2009ರಲ್ಲಿ ‘ಕುಸುಮಾಂಜಲಿ’ ಧಾರಾವಾಹಿ ಮೂಲಕ ನಟನಾ ಪಯಣ ಆರಂಭಿಸಿದರು. ‘ಬೊಂಬೆಯಾಟವಯ್ಯ’, ‘ಗೆಜ್ಜೆಪೂಜೆ’, ‘ಯುಗಾದಿ’, ‘ನಾಗಮಣಿ’ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಇವರು, ವಿಶೇಷವಾಗಿ ‘ರಾಧಾ ಕಲ್ಯಾಣ’ ಸೀರಿಯಲ್‌ನ ನೆಗೆಟಿವ್ ಶೇಡ್‌ನ ವಿಶಾಖ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು.

ಬಳಿಕ 2014ರಲ್ಲಿ ‘ಜಂಬೂ ಸವಾರಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೂ ಪಾದಾರ್ಪಣೆ ಮಾಡಿದರು. 2017ರಲ್ಲಿ ‘ಅಷ್ಟ ಚಮ್ಮಾ’ ಧಾರಾವಾಹಿ ಮೂಲಕ ತೆಲುಗು ಕಿರುತೆರೆ ಪ್ರವೇಶಿಸಿದ ಚೈತ್ರಾ, ‘ಅತ್ತರಿಂಟ್ಲೋ ಅಕ್ಕಚೆಲ್ಲೆಲ್ಲು’, ‘ಅಲಾ ಮೊದಲೈಂದಿ’, ‘ದಟ್ಸ್ ಮಹಾಲಕ್ಷ್ಮಿ’ ಸೇರಿದಂತೆ ಸಾಲು ಸಾಲು ಹಿಟ್ ಧಾರಾವಾಹಿಗಳ ಮೂಲಕ ಆಂಧ್ರ-ತೆಲಂಗಾಣದಲ್ಲೂ ಭರ್ಜರಿ ಕ್ರೇಜ್ ಸೃಷ್ಟಿಸಿಕೊಂಡರು.

ಫಿಟ್‌ನೆಸ್‌ ವಿಚಾರದಲ್ಲಿ ಸದ್ದು ಮಾಡಿದ್ದ ನಟಿ

ಕತಾರ್‌ನಲ್ಲಿ ಉದ್ಯೋಗದಲ್ಲಿರುವ ಪ್ರಸನ್ನ ಶೆಟ್ಟಿ ಅವರನ್ನು ಚೈತ್ರಾ ವಿವಾಹವಾಗಿದ್ದಾರೆ. ಈ ದಂಪತಿಗೆ 2021ರಲ್ಲಿ ಮೊದಲ ಮಗಳು ನಿಷ್ಕಾ ಜನಿಸಿದ್ದು, ಇತ್ತೀಚೆಗಷ್ಟೇ ಎರಡನೇ ಮಗಳು ಪ್ರಿಷ್ಕಾಳಿಗೆ ಜನ್ಮ ನೀಡಿದ್ದಾರೆ. ಎರಡನೇ ಹೆರಿಗೆಯ ಬಳಿಕ ಎದುರಾದ ನೆಗೆಟಿವ್‌ ಕಾಮೆಂಟ್ ಹಾಗೂ ಬಾಡಿ ಶೇಮಿಂಗ್ ಅನ್ನು ಗಂಭೀರವಾಗಿ ಪರಿಗಣಿಸಿದ ಚೈತ್ರಾ ರೈ, ಕಟ್ಟುನಿಟ್ಟಾದ ವರ್ಕೌಟ್ ಹಾಗೂ ಡಯಟ್ ಮೂಲಕ ಕೇವಲ ಮೂರೇ ತಿಂಗಳಲ್ಲಿ ಬರೋಬ್ಬರಿ 22 ಕೆಜಿ ತೂಕ ಇಳಿಸಿಕೊಂಡು ಫಿಟ್ನೆಸ್ ವಿಚಾರದಲ್ಲೂ ಸುದ್ದಿಯಾಗಿದ್ದರು ಚೈತ್ರಾ ರೈ.

ತೆಲುಗು 'ಬಿಗ್‌ ಬಾಸ್‌' ಶೋಗೆ ಕಾಲಿಟ್ಟ ಕನ್ನಡದ 'ತೀರ್ಥರೂಪ ತಂದೆಯವರಿಗೆ' ಸಿನಿಮಾ ನಟ ನಿಹಾರ್‌ ಮುಕೇಶ್; ನಿರೂಪಕ ನಾಗಾರ್ಜುನ ಕೇಳಿದ್ದೇನು?

ಮುಕೇಶ್ ಗೌಡ ‌ಜೊತೆ ಚೈತ್ರಾ ರೈ ಕೂಡ ಎಂಟ್ರಿ

ತೆಲುಗು ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ಮೈಸೂರಿನ ಮುಕೇಶ್ ಗೌಡ ಅವರೊಂದಿಗೆ ಚೈತ್ರಾ ರೈ ಕೂಡ ಕನ್ನಡಿಗರ ಪ್ರತಿನಿಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. 10 ತಿಂಗಳ ಹಸುಗೂಸನ್ನು ಮನೆಯಲ್ಲಿ ಬಿಟ್ಟು ಈ ಶೋಗೆ ಕಾಲಿಟ್ಟಿರುವ ಚೈತ್ರಾ ಅವರ ಈ ದಿಟ್ಟ ನಿರ್ಧಾರ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ತೆಲುಗು ವೀಕ್ಷಕರ ನೆಚ್ಚಿನ ನಟಿಯಾಗಿರುವ ಚೈತ್ರಾ, ಬಿಗ್ ಬಾಸ್ ಮನೆಯಲ್ಲಿ ತಮ್ಮ ಮನರಂಜನೆ, ವ್ಯಕ್ತಿತ್ವ ಹಾಗೂ ಆಟದ ವೈಖರಿಯ ಮೂಲಕ ಎಷ್ಟರಮಟ್ಟಿಗೆ ಮನರಂಜನೆ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.