ಬೆಂಗಳೂರು: ಬಹುನಿರೀಕ್ಷಿತ ಕನ್ನಡ ಚಿತ್ರ 'ಕಾಂತಾರ ಚಾಪ್ಟರ್ 1' (Kantara: Chapter 1), ಅಕ್ಟೋಬರ್ 2ರಂದು ವಿಶ್ವಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಇದೀಗ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿನ ವೀಕ್ಷಕರಿಗಾಗಿ, ಈ ಚಿತ್ರವನ್ನು ಡ್ರೀಮ್ ಸ್ಕ್ರೀನ್ಸ್ ಇಂಟರ್‌ನ್ಯಾಷನಲ್ ವಿತರಿಸಲಿದ್ದು, ಅಲ್ಲಿನ ಸಿನಿಪ್ರಿಯರಿಗೆ ಈ ದೈವಿಕ ಕಥೆಯನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಜಾಗತಿಕವಾಗಿ ಮೆಚ್ಚುಗೆ ಗಳಿಸಿದ್ದ ʼಕಾಂತಾರʼ (2022) ಚಿತ್ರದ ಪ್ರಿಕ್ವೆಲ್ ಆಗಿರುವ ಈ ಸಿನಿಮಾ, ನಮ್ಮ ಸಂಸ್ಕೃತಿ, ಜಾನಪದ ಮತ್ತು ಆಧ್ಯಾತ್ಮಿಕತೆಯ ಬೇರುಗಳನ್ನು ಮತ್ತಷ್ಟು ಆಳವಾಗಿ ಪರಿಚಯಿಸಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವು ಭಾರತೀಯ ಹಾಗೂ ಜಾಗತಿಕ ಸಿನಿಪ್ರಿಯರಿಗೆ ಒಂದು ಅದ್ಭುತ ಅನುಭವ ನೀಡಲಿದೆ.
ಇದನ್ನು ಓದಿ:Karavali Movie: ಪ್ರಜ್ವಲ್ ದೇವರಾಜ್ ಅಭಿನಯದ 'ಕರಾವಳಿ' ಸದ್ಯದಲ್ಲೇ ತೆರೆಗೆ
'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಎಲ್ಲರ ಮೆಚ್ಚುಗೆ ಪಡೆದಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿ ಚಿತ್ರರಂಗದಲ್ಲೆ ಹೊಸ ದಾಖಲೆ ನಿರ್ಮಿಸಿತ್ತು. ಸದ್ಯ ಕಾಲಾತೀತ ಕಥೆಗಳನ್ನು ಸೃಷ್ಟಿಸುವ ಹೊಂಬಾಳೆ ಫಿಲ್ಮ್ಸ್‌ನ ದೂರದೃಷ್ಟಿಯ ಭಾಗವಾಗಿರುವ ʼಕಾಂತಾರ ಚಾಪ್ಟರ್ 1ʼ ಅನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ.