ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಮ್ಯಾಜಿಕ್‌ʼ ಕಿರುಚಿತ್ರ ನಿರ್ಮಾಣ ಮಾಡಿದ ʻಕಾಂತಾರʼ ರಿಷಬ್‌ ಶೆಟ್ಟಿ; ಹೊಸ ಪ್ರತಿಭೆಗಳ ಬೆನ್ನಿಗೆ ನಿಂತ 'ಡಿವೈನ್ ಸ್ಟಾರ್'

ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಸಂಸ್ಥೆಯು ನಿರ್ಮಿಸಿರುವ ವಿಶಿಷ್ಟ ಕಥಾಹಂದರದ ‘MAGICC’ ಕಿರುಚಿತ್ರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಅಪಾರ ಮನ್ನಣೆ ಗಳಿಸುತ್ತಿದೆ. ಹಿರಿಯ ಲೇಖಕ ಜೋಗಿ ರಚಿಸಿರುವ ಈ ತಾತ್ವಿಕ ಕಥನವನ್ನು ಶಿವಚಿರಂತನ ನಿರ್ದೇಶಿಸಿದ್ದಾರೆ. ಸದ್ದು ಅಡಗಿದಾಗ ಮನುಷ್ಯನ ಆತ್ಮಾವಲೋಕನ ಹೇಗಿರುತ್ತದೆ ಎಂಬ ಗಂಭೀರ ಸತ್ಯವನ್ನು ಇದರ ಮೂಲಕ ಅನಾವರಣಗೊಳಿಸಿಲಾಗಿದೆಯಂತೆ.

'ಕಾಂತಾರ' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿದ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ, ಪ್ರತಿಭಾವಂತವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮುಂದುವರಿಸಿದ್ದಾರೆ. ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಹಾಗೂ ವಿಶಿಷ್ಟ ಕಥಾಹಂದರದ ‘MAGICC’ (ಮ್ಯಾಜಿಕ್) ಕಿರುಚಿತ್ರವೀಗ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆಯುತ್ತಿದೆ. ಹೊಸಬರ ತಂಡಕ್ಕೆ ಬೆನ್ನೆಲುಬಾಗಿ ನಿಂತು ಈ ಕಿರುಚಿತ್ರವನ್ನು ನಿರ್ಮಿಸಿರುವ ರಿಷಬ್ ಶೆಟ್ಟಿಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ನಮ್ಮ ಸುತ್ತಲಿನ ಸದ್ದು ಅಡಗಿದಾಗ...

ಈ ಕಿರುಚಿತ್ರದ ಮೂಲಕ ಪ್ರತಿಭಾವಂತ ನವನಿರ್ದೇಶಕ ಶಿವಚಿರಂತನ ಚಿತ್ರರಂಗಕ್ಕೆ ಭರವಸೆಯ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದು, ಆದಿತ್ಯ ಬಿ. ಪೂಜಾರ್ ನಾಯಕ ನಟನಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ (ಮಲ್ಟಿ-ಆಡಿಯೋ) ಲಭ್ಯವಿರುವ ಈ ಕಿರುಚಿತ್ರವು, ಶಬ್ದ ಮತ್ತು ಮನುಷ್ಯನ ಆತ್ಮಾವಲೋಕನದ ಸುತ್ತ ಸಾಗುತ್ತದೆ. "ನಮ್ಮ ಸುತ್ತಲಿನ ಸದ್ದು ಅಡಗಿದಾಗ, ಕೊನೆಗೆ ಉಳಿಯುವುದೇನು?" ಎಂಬ ಗಂಭೀರ ತತ್ವಚಿಂತನೆಯನ್ನು ಈ ಚಿತ್ರದ ಮುಖ್ಯ ವಸ್ತುವಾಗಿಟ್ಟುಕೊಂಡು ಶಿವಚಿರಂತನ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಬರಹಗಾರ ಜೋಗಿ (ಗಿರೀಶ್ ರಾವ್ ಹತ್ವಾರ್) ಅವರು ಈ ವಿಶಿಷ್ಟ ಕಥೆಯನ್ನು ರಚಿಸಿದ್ದು, ರಿಷಬ್ ಶೆಟ್ಟಿ, ವಿ. ರವಿಕುಮಾರ್, ನಟ ಆದಿತ್ಯ ಬಿ. ಪೂಜಾರ್ ಮತ್ತು ನಿರ್ದೇಶಕ ಶಿವಚಿರಂತನ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇವರಿಗೆ 'ಮನ್ಪ್ರಸಾದ್ ಕ್ರಿಯೇಷನ್ಸ್' ಮತ್ತು 'ಷಟ್ಟರ್ ಸ್ಪೇಸ್' ಸಂಸ್ಥೆಗಳು ಸಹ-ನಿರ್ಮಾಣದ ಮೂಲಕ ಕೈಜೋಡಿಸಿವೆ.

ಈ ಕಿರುಚಿತ್ರದ ಗುಣಮಟ್ಟವನ್ನು ಹೆಚ್ಚಿಸಲು ಬಲಿಷ್ಠ ತಾಂತ್ರಿಕ ಬಳಗವೇ ಶ್ರಮಿಸಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ಧ್ವನಿ ವಿನ್ಯಾಸಕ ಎಂ. ಆರ್. ರಾಜಕೃಷ್ಣನ್ ಅವರ ಸೌಂಡ್ ಡಿಸೈನ್ ಈ ಕಿರುಚಿತ್ರದ ತೂಕವನ್ನು ಹೆಚ್ಚಿಸಿದ್ದು, ಭುವನ್ ರೆಡ್ಡಿ ಅವರ ಛಾಯಾಗ್ರಹಣ ಹಾಗೂ ನಚಿಕೇತ್ ಶರ್ಮಾ ಅವರ ಸಂಗೀತ ಕಥೆಗೆ ತಕ್ಕ ಆಪ್ತತೆಯನ್ನು ತುಂಬಿದೆ.

Rishab Shetty: ರಕ್ಷಿತ್‌ ಶೆಟ್ಟಿ ಸೇರಿ ಎಲ್ಲರನ್ನ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ!

ಗೌತಮ್ ಸರಟೂರ್ ಅವರ ಸಂಕಲನ, ರಮೇಶ್ ಸಿ. ಪಿ. ಅವರ ವರ್ಣವಿನ್ಯಾಸ, ಧರಣಿ ಗಂಗೆಪುತ್ರ ಅವರ ಕಲಾ ನಿರ್ದೇಶನ ಕಿರುಚಿತ್ರಕ್ಕೆ ಪೂರಕವಾಗಿ ಮೂಡಿಬಂದಿವೆ. ಜೊತೆಗೆ ಅನೀಶ್ ಶರ್ಮಾ ಮತ್ತು ಪಟಾ ಪೋಸ್ಟರ್ಸ್ ಅವರ ಆಕರ್ಷಕ ಪೋಸ್ಟರ್ ವಿನ್ಯಾಸ ಹಾಗೂ ರೋಹಿತ್ ಚಿಕ್ಕಮಗಳೂರು ಅವರ ಪೋಸ್ಟ್ ಪ್ರೊಡಕ್ಷನ್ ಮೇಲ್ವಿಚಾರಣೆ ಚಿತ್ರಕ್ಕಿದೆ. ಪ್ರಸ್ತುತ ಐದು ಭಾಷೆಗಳ ಡಿಜಿಟಲ್ ವೀಕ್ಷಕರನ್ನು ತಲುಪುತ್ತಿರುವ ಈ ಕಿರುಚಿತ್ರವು ಸಿನಿರಸಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.