ಬೆಂಗಳೂರು: ಭಾರತೀಯ ಸಿನಿಮಾ ರಂಗದಲ್ಲಿ ಈಗ ‘ಕಾಂತಾರ: ಚಾಪ್ಟರ್ 1ʼ(Kantara Chapter 1) ನದ್ದೇ ಹವಾ. ಎಲ್ಲ ಭಾಷೆಗಳಿಂದಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿಂದೆ 2022ರಲ್ಲಿ ʼಕಾಂತಾರʼ ಬಿಡುಗಡೆಯಾದಾಗ ಪ್ರೇಕ್ಷಕರ ಜತೆಗೆ ಸಿನಿ ಸೆಲೆಬ್ರಿಟಿಗಳು ರಿಷಬ್ ಶೆಟ್ಟಿ ನಟನೆಗೆ, ನಿರ್ದೇಶನಕ್ಕೆ ಫಿದಾ ಆಗಿದ್ದರು. ಈಗ ಮತ್ತೊಮ್ಮೆ ರಿಷಬ್ ಸಿನಿ ಪ್ರಿಯರ ಮನಸ್ಸು ಗೆದ್ದಿದ್ದು, ಈಗಾಗಲೇ ಅನೇಕ ಸ್ಟಾರ್ಸ್ ನೋಡಿ ಮೆಚ್ಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲೂ ‘ಕಾಂತಾರ: ಚಾಪ್ಟರ್ 1ʼ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಅಕ್ಟೋಬರ್ 2ರಂದು ತೆರೆಗೆ ಬಂದ ಸಿನಿಮಾ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.
ಚಿತ್ರ ರಿಲೀಸ್ ಆಗಿ 3ನೇ ದಿನವೂ ಜನ ಮುಗಿ ಬಿದ್ದು ವೀಕ್ಷಿಸುತ್ತಿದ್ದಾರೆ. ವಾರಾಂತ್ಯದಲ್ಲಿಯೂ ಸಹ ʼಕಾಂತಾರʼ ಸಿನಿಮಾಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡದ ʼಕಾಂತಾರʼ ಅಬ್ಬರ ಬಾಲಿವುಡ್ ಮಂದಿಯ ನಿದ್ದೆ ಗೆಡಿಸಿದೆ. ಈಗಾಗಲೇ ದಕ್ಷಿಣ ಭಾರತೀಯ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ತತ್ತರಿಸಿದೆ. ಇದೀಗ ʼಕಾಂತಾರʼ ಹವಾ ಕೂಡ ನಡುಕ ಹುಟ್ಟಿಸಿದೆ. ʼಕಾಂತಾರʼ ಹಿಂದಿಯಲ್ಲಿ ಮೊದಲ ದಿನದಿಂದ ಉತ್ತಮ ಕಲೆಕ್ಷನ್ ಮಾಡಿದೆ. ದಿನದಿಂದ ದಿನಕ್ಕೆ ʼಕಾಂತಾರʼ ಕಲೆಕ್ಷನ್ ಹೆಚ್ಚಾಗುತ್ತಿದೆ. ಮೊದಲ ದಿನಕ್ಕಿಂತ ಎರಡು ಮತ್ತು ಮೂರನೇ ದಿನ ಕೂಡ ಹೆಚ್ಚಾಗಿದೆ.
ಹೊಬಾಳೆ ಫಿಲ್ಮ್ಸ್‌ನ ಎಕ್ಸ್ ಪೋಸ್ಟ್:
‘ಕಾಂತಾರ: ಚಾಪ್ಟರ್ 1’ ಚಿತ್ರದ ಮೊದಲ ದಿನ 62 ಕೋಟಿ ರೂ. ಗಳಿಕೆ ಆಗಿದ್ದು, ಭಾಷಾವಾರು ಲೆಕ್ಕ ನೋಡುವುದಾದರೆ ಕನ್ನಡದಿಂದ 20 ಕೋಟಿ ರೂ., ತೆಲುಗಿನಿಂದ 13 ಕೋಟಿ ರೂ., ಹಿಂದಿಯಿಂದ 18.5 ಕೋಟಿ ರೂ., ತಮಿಳಿನಿಂದ 5.5 ಕೋಟಿ ರೂ. ಹಾಗೂ ಮಲಯಾಳಂನಿಂದ 5.25 ಕೋಟಿ ರೂ. ಹರಿದು ಬಂದಿದೆ. 2 ದಿನಗಲಲ್ಲಿ 100 ಕೋಟಿ ರೂ. ಕ್ಲಬ್ ಸೇರಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ 300 ಕೋಟಿ ರೂ. ಕ್ಲಬ್ ಸೇರುವ ಸಾಧ್ಯತೆ ಇದೆ.
ಈ ಸುದ್ದಿಯನ್ನು ಓದಿ: Kantara Chapter 1: ಕಾಂತಾರ-1 ಮೆಚ್ಚಿದ ರಾಕಿ ಬಾಯ್; ಚಿತ್ರದ ಬಗ್ಗೆ ನಟ ಯಶ್ ಹೇಳಿದ್ದೇನು?
ರಿಷಬ್ ಶೆಟ್ಟಿ ʼಕಾಂತಾರʼ ಮತ್ತೊಂದು ದಾಖಲೆ ಮಾಡಿದ್ದು, ರೇಟಿಂಗ್ ವಿಚಾರದಲ್ಲಿಯೂ ಸದ್ದು ಮಾಡುತ್ತಿದೆ. ಭಾರತದಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾವಾಗಿ ಹೊರಹೊಮ್ಮಿದೆ. IMDbನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಸಿನಿಮಾವಾಗಿದ್ದು, 9.6 ರೇಟಿಂಗ್ ಸಿಕ್ಕಿದೆ. ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ ಇದಾಗಿದೆ.
ಇನ್ನು ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ, ಬೆಂಗಾಲಿ, ಇಂಗ್ಲಿಷ್ ವರ್ಷನ್ನಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ವೀಕೆಂಡ್ ದಿನದ ಎಲ್ಲ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೂಡ ಭರ್ಜರಿ ಕಲೆಕ್ಷನ್ ನಿರೀಕ್ಷೆ ಹುಟ್ಟುಹಾಕಿದೆ.