ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1: 'ಕಾಂತಾರ: ಚಾಪ್ಟರ್‌ 1' ಚಿತ್ರತಂಡದಿಂದ ಹೊರಬಿತ್ತು ಮತ್ತೊಂದು ಅಪ್‌ಡೇಟ್‌; ಮುಖ್ಯ ಪಾತ್ರದಲ್ಲಿ ಕರ್ನಾಟಕ ಮೂಲದ ಬಾಲಿವುಡ್‌ ನಟ

Gulshan Devaiah: ಸಿನಿ ಜಗತ್ತಿನ ಕುತೂಹಲ ಕೆರಳಿಸಿದ ಸ್ಯಾಂಡಲ್‌ವುಡ್‌ನ ʼಕಾಂತಾರ: ಚಾಪ್ಟರ್‌ 1ʼ ಚಿತ್ರತಂಡದಿಂದ ಮತ್ತೊಂದು ಅಪ್‌ಡೇಟ್‌ ಹೊರಬಿದ್ದಿದೆ. ಗುಟ್ಟಾಗಿ ಚಿತ್ರೀಕರಣ ನಡೆಸಿ, ಕಲಾವಿದರ ವಿವರ ಬಿಟ್ಟುಕೊಡದ ಸಿನಿಮಾ ತಂಡ ಇದೀಗ ಒಂದೋಂದೇ ಪಾತ್ರವನ್ನು ಪರಿಚಯಿಸುತ್ತಿದೆ. ಇದೀಗ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಕೊಡಗು ಮೂಲದ ಬಾಲಿವುಡ್‌ ನಟ ಗುಲ್ಷನ್ ದೇವಯ್ಯ ಪಾತ್ರದ ಫಸ್ಟ್‌ ಲುಕ್‌ ರಿಲೀಸ್‌ ಮಾಡಲಾಗಿದೆ.

ಬೆಂಗಳೂರು: ಸಿನಿ ಜಗತ್ತಿನ ಕುತೂಹಲ ಕೆರಳಿಸಿದ ಸ್ಯಾಂಡಲ್‌ವುಡ್‌ನ ʼಕಾಂತಾರ: ಚಾಪ್ಟರ್‌ 1ʼ (Kantara Chapter 1) ಚಿತ್ರತಂಡದಿಂದ ಮತ್ತೊಂದು ಅಪ್‌ಡೇಟ್‌ ಹೊರಬಿದ್ದಿದೆ. ಹೊಂಬಾಳೆ ಫಿಲ್ಮ್ಸ್‌ (Hombale Films) ಅ‍ದ್ಧೂರಿ ಬಜೆಟ್‌ನಲ್ಲಿ ನಿರ್ಮಿಸುತ್ತಿರುವ, ರಿಷಬ್‌ ಶೆಟ್ಟಿ (Rishab Shetty) ನಟಿಸಿ ನಿರ್ದೇಶಿಸುತ್ತಿರುವ ʼಕಾಂತಾರ: ಚಾಪ್ಟರ್‌ 1ʼ ಈಗಾಗಲೇ ನಿರೀಕ್ಷೆ ಮೂಡಿಸಿದ್ದು, ದಸರಾ ಪ್ರಯುಕ್ತ ವಿವಿಧ ಭಾಷೆಗಳಲ್ಲಿ ಅಕ್ಟೋಬರ್‌ 2ರಂದು ತೆರೆ ಕಾಣಲಿದೆ. ಗುಟ್ಟಾಗಿ ಚಿತ್ರೀಕರಣ ನಡೆಸಿ, ಕಲಾವಿದರ ವಿವರ ಬಿಟ್ಟುಕೊಡದ ಸಿನಿಮಾ ತಂಡ ಇದೀಗ ಒಂದೋಂದೇ ಪಾತ್ರವನ್ನು ಪರಿಚಯಿಸುತ್ತಿದೆ. ಇತ್ತೀಚೆಗಷ್ಟೇ ನಾಯಕಿ ರುಕ್ಮಿಣಿ ವಸಂತ್‌ (Rukmini Vasanth) ಅವರ ಕನಕವತಿ ಪಾತ್ರವನ್ನು ಪರಿಚಯಿಸಿದ್ದ ಹೊಂಬಾಳೆ ಫಿಲ್ಮ್ಸ್‌ ಇದೀಗ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಬಾಲಿವುಡ್‌ ನಟನ ವಿವರ ರಿವೀಲ್‌ ಮಾಡಿದೆ.

ಸುಮಾರು 2 ದಶಕಗಳಿಂದ ಬಾಲಿವುಡ್‌ನಲ್ಲಿ ನಟಿಸುತ್ತಿರುವ ಕೊಡಗು ಮೂಲದ ಗುಲ್ಷನ್ ದೇವಯ್ಯ (Gulshan Devaiah) ಇದೀಗ ʼಕಾಂತಾರ: ಚಾಪ್ಟರ್‌ 1ʼ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಕುಲಶೇಖರ ಎನ್ನುವ ಪ್ರಮುಖ ಪಾತ್ರದಲ್ಲಿ ಅವರು ನಟಿಸಿತ್ತಿದ್ದು, ಅವರ ಫಸ್ಟ್‌ ಲುಕ್‌ ರಿಲೀಸ್‌ ಮಾಡಲಾಗಿದೆ.



ಈ ಸುದ್ದಿಯನ್ನೂ ಓದಿ: Kantara Chapter 1: 'ಕಾಂತಾರ: ಚಾಪ್ಟರ್‌ 1' ಚಿತ್ರತಂಡದಿಂದ ಹೊರಬಿತ್ತು ಬಿಗ್‌ ಅಪ್‌ಡೇಟ್‌; ಯುದ್ಧದ ದೃಶ್ಯಕ್ಕಾಗಿ 500 ಫೈಟರ್‌ಗಳ ನೇಮಕ

ಗುಲ್ಷನ್ ದೇವಯ್ಯ 2004ರಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ಅವ​ರ ‘ದಿಲ್ ನೆ ಜಿಸೆ ಅಪ್ನಾ ಕಹಾ’ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅದಾದ ಬಳಿಕ ʼದಟ್‌ ಗರ್ಲ್‌ ಇನ್‌ ಯೆಲ್ಲೋ ಬೂಟ್ಸ್‌ʼ, ʼಶೈತಾನ್‌ʼ, ʼಹೇಟ್‌ ಸ್ಟೋರಿʼ, ʼಗೋಲಿಯೋನ್‌ ಕಿ ರಾಸ್‌ಲೀಲ ರಾಮ್‌-ಲೀಲಾʼ, ʼಕಮಾಂಡೋ 3ʼ ಮುಂತಾದ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವೆಬ್‌ ಸೀರೀಸ್‌ನಲ್ಲಿ ನಟಿಸಿರುವ ಅವರು ಇದೀಗ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಫಸ್ಟ್‌ ಲುಕ್‌ ಮೂಲಕ ಅವರು ರಾಜನ ಪಾತ್ರ ನಿರ್ವಹಿಸುತ್ತಿರುವ ಸೂಚನೆ ಸಿಕ್ಕಿದೆ.

ಮೂಲಗಳ ಪ್ರಕಾರ ʼಕಾಂತಾರ: ಚಾಪ್ಟರ್‌ 1ʼ ಕದಂಬರ ಕಾಲದ ಕಥೆಯನ್ನು ಯೊಂದಿದೆ. 2022ರಲ್ಲಿ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆಯುವ ಜತೆಗೆ ರಾಷ್ಟ್ರ ಪ್ರಶಸ್ತಿಯನ್ನೂ ಮುಡುಗೇರಿಸಿಕೊಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಇದು. ʼಕಾಂತಾರʼದ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ಈ ಭಾಗದಲ್ಲಿ ರಿಷಬ್‌ ಶೆಟ್ಟಿ ಹೇಳಲಿದ್ದಾರೆ. 2023ರಲ್ಲಿ ಚಿತ್ರ ಆರಂಭವಾಗಿದ್ದು, ಕುಂದಾಪುರ, ಹಾಸನ ಮುಂತಾದ ಕಡೆಗಳಲ್ಲಿ ಬೃಹತ್‌ ಸೆಟ್‌ ಹಾಕಿ ಶೂಟಿಂಗ್‌ ನಡೆಸಲಾಗಿದೆ.

ಕರಾವಳಿಯ ಭೂತಾರಾಧನೆಯನ್ನು ತೆರೆ ಮೇಲೆ ತಂದು ರಿಷಬ್‌ ಶೆಟ್ಟಿ ʼಕಾಂತಾರʼವನ್ನು ವಿಶಿಷ್ಟವಾಗಿಸಿದ್ದರು. ಅಲ್ಲಿನ ಅನನ್ಯ ಸಂಸ್ಕೃತಿಯನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ಜೈ ಎಂದಿದ್ದರು. ಆರಂಭದಲ್ಲಿ ಕನ್ನಡದಲ್ಲಿ ತೆರೆಕಂಡು ಬಳಿಕ ವಿವಿಧ ಭಾಷೆಗಳಿಗೆ ಡಬ್‌ ಆಗಿ ಯಶಸ್ವಿಯಾಗಿತ್ತು. ಸುಮಾರು 16 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ 400 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿತ್ತು. ಹೀಗಾಗಿ ಇದರ ಪ್ರೀಕ್ವೆಲ್‌ ಸಹಜವಾಗಿಯೇ ಕುತೂಹಲ ಮೂಡಿಸಿದ್ದು, ಕನ್ನಡ ಜತೆಗೆ ವಿವಿಧ ಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಚಿತ್ರವಾಗಿ ರಿಲೀಸ್‌ ಆಗಲಿದೆ.