Kantara Chapter 1: 'ಕಾಂತಾರ: ಚಾಪ್ಟರ್ 1' ಚಿತ್ರತಂಡದಿಂದ ಹೊರಬಿತ್ತು ಬಿಗ್ ಅಪ್‌ಡೇಟ್; ಯುದ್ಧದ ದೃಶ್ಯಕ್ಕಾಗಿ 500 ಫೈಟರ್‌ಗಳ ನೇಮಕ
ಇಡೀ ದೇಶದ ಗಮನ ಸೆಳೆದಿರುವ ರಿಷಬ್ ಶೆಟ್ಟಿ-ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್‌ನ ಕಾಂತಾರ: ಚಾಪ್ಟರ್ 1 ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇದೀಗ ಚಿತ್ರತಂಡದಿಂದ ಬಿಗ್ ಅಪ್‌ಡೇಟ್ ಹೊರ ಬಿದ್ದಿದ್ದು, ಸಿನಿಮಾದ ಯುದ್ಧದ ದೃಶ್ಯ ಚಿತ್ರೀಕರಣಕ್ಕಾಗಿ ಸುಮಾರು 500 ಫೈಟರ್ಸ್ ಅನ್ನು ನೇಮಕ ಮಾಡಿಕೊಳ್ಳಲಾಗಿದೆಯಂತೆ. ಈ ವರ್ಷದ ಅ. 2ರಂದು ಸಿನಿಮಾ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ.
ಬೆಂಗಳೂರು: ಕಾಂತಾರ (Kantara) ಚಿತ್ರದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಸದ್ಯ ʼಕಾಂತಾರ ಚಾಪ್ಟರ್ 1ʼ (Kantara: Chapter 1) ಸಿನಿಮಾದಲ್ಲಿ ನಿರತರಾಗಿದ್ದಾರೆ. ʼಕಾಂತಾರʼದ ಪ್ರೀಕ್ವೆಲ್ ಆಗಿರುವ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಈ ಬಹು ನಿರೀಕ್ಷಿತ ಸಿನಿಮಾ ಈಗಾಗಲೇ ಪ್ಯಾನ್ ಇಂಡಿಯಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಬಹು ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಈ ವರ್ಷದ ಅ. 2ರಂದು ತೆರೆಗೆ ಬರಲಿದೆ. ಈ ಮಧ್ಯೆ ಚಿತ್ರತಂಡದಿಂದ ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಚಿತ್ರವನ್ನು ಸಾಕಷ್ಟು ರೋಚಕವಾಗಿ ಕಟ್ಟಿಕೊಡಲು ಮುಂದಾಗಿರುವ ರಿಷಬ್ ಶೆಟ್ಟಿ & ಟೀಂ ಯುದ್ಧದ ದೃಶ್ಯವನ್ನು ಸೆರೆ ಹಿಡಿಯಲು ಸಾಕಷ್ಟು ತಯಾರಿ ನಡೆಸಿದೆ.
ʼಕಾಂತಾರʼ ಚಿತ್ರದಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ನಡೆದ ಸಂಘರ್ಷದ ದೃಶ್ಯ ಹೈಲೈಟ್ ಆಗಿತ್ತು. ಅದರಲ್ಲಿಯೂ ರಿಷಬ್ ಶೆಟ್ಟಿ ಅಭಿನಯ ನೋಡಿ ಪ್ರೇಕ್ಷಕರು ರೋಮಾಂಚನಗೊಂಡಿದ್ದರು. ಅದೇ ರೀತಿ ʼಕಾಂತಾರ: ಚಾಪ್ಟರ್ 1ʼ ಚಿತ್ರದಲ್ಲಿಯೂ ಯುದ್ಧದ ದೃಶ್ಯಕ್ಕೆ ಬಹಳ ಪ್ರಾಮುಖ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಅದ್ಧೂರಿಯಾಗಿ ಇದನ್ನು ತೆರೆಮೇಲೆ ಅನಾವರಣಗೊಳಿಸಲು ಚಿತ್ರತಂಡ ಮುಂದಾಗಿದೆ. ಹೀಗಾಗಿ ಈ ದೃಶ್ಯದ ಚಿತ್ರೀಕರಣಕ್ಕಾಗಿ ಬಹಳಷ್ಟು ತಯಾರಿ ನಡೆಸಿಕೊಂಡು ಅಖಾಡಕ್ಕೆ ಇಳಿದಿದೆ.
𝐓𝐇𝐄 𝐌𝐎𝐌𝐄𝐍𝐓 𝐇𝐀𝐒 𝐀𝐑𝐑𝐈𝐕𝐄𝐃 🔥
— Hombale Films (@hombalefilms) November 17, 2024
𝐓𝐇𝐄 𝐃𝐈𝐕𝐈𝐍𝐄 𝐅𝐎𝐑𝐄𝐒𝐓 𝐖𝐇𝐈𝐒𝐏𝐄𝐑𝐒 🕉️#KantaraChapter1 Worldwide Grand Release on 𝐎𝐂𝐓𝐎𝐁𝐄𝐑 𝟐, 𝟐𝟎𝟐𝟓.#KantaraChapter1onOct2 #Kantara@shetty_rishab @VKiragandur @hombalefilms @HombaleGroup @ChaluveG… pic.twitter.com/VoehP4xW96
500ಕ್ಕೂ ಹೆಚ್ಚು ನುರಿತ ಫೈಟರ್ಸ್
ಐಎಎನ್‌ಎಸ್ ಸುದ್ದಿಸಂಸ್ಥೆಯ ಪ್ರಕಾರ ʼಕಾಂತಾರ: ಚಾಪ್ಟರ್ 1ʼ ಚಿತ್ರದ ಯುದ್ಧ ದೃಶ್ಯವನ್ನು ಪರಿಣಾಮಕಾರಿಯಾಗಿ ಚಿತ್ರೀಕರಿಸಲು ಸುಮಾರು 500ಕ್ಕೂ ಹೆಚ್ಚು ನುರಿತ ಫೈಟರ್ಸ್ ಕಾರ್ಯನಿರ್ಹಿಸಲಿದ್ದಾರಂತೆ. ಆ್ಯಕ್ಷನ್ ಕೊರಿಯೋಗ್ರಫಿಯಲ್ಲಿ ನುರಿತರಾದವರನ್ನು ಹೊಂಬಾಳೆ ಫಿಲ್ಮ್ಸ್ ನೇಮಿಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.
ʼʼಹೊಂಬಾಳೆ ಫಿಲ್ಮ್ಸ್ ʼಕಾಂತಾರ: ಚಾಪ್ಟರ್ 1ʼ ಚಿತ್ರಕ್ಕಾಗಿ 500ಕ್ಕೂ ಹೆಚ್ಚು ನುರಿತ ಫೈಟರ್ಸ್‌ಗಳನ್ನು ನೇಮಿಸಿಕೊಳ್ಳಲಿದೆ. ಹಿಂದೆಂದೂ ಕಂಡಿರದ ಯುದ್ಧದ ದೃಶ್ಯ ತೆರೆ ಮೇಲೆ ಅನಾವರಣಗೊಳ್ಳಲಿದೆʼʼ ಎಂದು ಮೂಲಗಳು ತಿಳಿಸಿದ್ದಾಗಿ ವರದಿ ಮಾಡಿದೆ. ಯುದ್ಧ ದೃಶ್ಯಕ್ಕಾಗಿ ರಿಷಬ್ ಶೆಟ್ಟಿ ಕುದುರೆ ಸವಾರಿ ಮತ್ತು ಪ್ರಾಚೀನ ಸಮರ ಕಲೆ ಕಳಯಿಪಯಟ್ಟು ಕಲಿಯುತ್ತಿದ್ದಾರೆ ಎನ್ನಲಾಗಿದೆ.
ಕೆಲವು ತಿಂಗಳ ಹಿಂದೆಯೇ ಚಿತ್ರದ ಶೂಟಿಂಗ್ ಆರಂಭಿಸಿರುವ ರಿಷಬ್ ಶೆಟ್ಟಿ ಎಲ್ಲೂ ಯಾವೆಲ್ಲ ಕಲಾವಿದರು ಅಭಿನಯಿಸುತ್ತಿದ್ದಾರೆ ಎನ್ನುವ ಗುಟ್ಟು ಬಿಟ್ಟು ಕೊಟ್ಟಿಲ್ಲ. ಅವರ ಹೊರತು ಬೇರೆ ಯಾರೆಲ್ಲ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗಗೊಂಡಿಲ್ಲ. ಮಲಯಾಳಂನ ಹಿರಿಯ ನಟ ಮೋಹನ್ ಲಾಲ್, ಜಯರಾಂ ಮತ್ತಿತರರು ಅಭಿನಯಿಸುತ್ತಿದ್ದಾರೆ ಎನ್ನುವ ಗಾಳಿಸುದ್ದಿ ಹಬ್ಬಿದೆ. ನಾಯಕಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತೂ ಕೇಳಿ ಬಂದಿದೆ. ಆದರೆ ಯಾವುದೂ ಅಧಿಕೃತವಾಗಿಲ್ಲ. ಚಿತ್ರ ಕದಂಬ ಕಾಲಘಟ್ಟದ ಕಥೆಯನನು ಹೊಂದಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Kantara: Chapter 1: ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ; 'ಕಾಂತಾರ: ಚಾಪ್ಟರ್ 1' ಚಿತ್ರತಂಡಕ್ಕೆ ಕ್ಲೀನ್‌ಚಿಟ್
ʼಕಾಂತಾರʼ ಚಿತ್ರ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್ ಶೆಟ್ಟಿ ಈ ಭಾಗದಲ್ಲಿ ಕಟ್ಟಿಕೊಡಲಿದ್ದಾರೆ. ಚಿತ್ರೀಕರಣ ಆರಂಭವಾಗುವುದಕ್ಕೆ ಮುನ್ನವೇ ಸಿನಿಮಾದ ಒಟಿಟಿ ಹಕ್ಕನ್ನು ಅಮೇಜಾನ್ ಪ್ರೈಮ್ ಈಗಾಗಲೇ ದಾಖಲೆಯ ಮೊತ್ತಕ್ಕೆ ಖರೀದಿಸಿದೆ. ವಿವಿಧ ಭಾಷೆಗಳಲ್ಲಿ ಇದು ತೆರೆಗೆ ಬರಲಿದೆ.