ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸುವ ವ್ಯಕ್ತಿʼ: ಪ್ರಜ್ವಲ್‌ ದೇವರಾಜ್‌‌ ನಿಸ್ವಾರ್ಥ ಗುಣವನ್ನು ಕೊಂಡಾಡಿದ ಪತ್ನಿ ರಾಗಿಣಿ ಚಂದ್ರನ್‌

ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಚಿತ್ರದ ಟ್ರೇಲರ್‌ನಲ್ಲಿ ನಾಯಕನ ಧ್ವನಿಯನ್ನು ಬದಲಿಸಿ ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವುದು ಮತ್ತು ಸಂಭಾವನೆ ಬಾಕಿ ವಿಚಾರ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಈ ಗದ್ದಲದ ನಡುವೆ ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್ ಇನ್‌ಸ್ಟಾಗ್ರಾಮ್‌ನಲ್ಲಿ ಪತಿಯ ನಿಸ್ವಾರ್ಥ ವ್ಯಕ್ತಿತ್ವ ಹಾಗೂ ಮೌಲ್ಯಗಳನ್ನು ಕೊಂಡಾಡಿದ್ದಾರೆ.

'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ 'ಕರಾವಳಿ' ಸಿನಿಮಾ ಜುಲೈ 24ರಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಆದರೆ, ಚಿತ್ರದ ಟ್ರೇಲರ್ ಬಿಡುಗಡೆಯ ಬೆನ್ನಲ್ಲೇ ಸೃಷ್ಟಿಯಾಗಿರುವ ವಿವಾದ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕರಾವಳಿ ಚಿತ್ರದ ಟ್ರೇಲರ್‌ ಲಾಂಚ್‌ ಈವೆಂಟ್‌ಗೆ ಖುದ್ದು ನಾಯಕ ನಟ ಪ್ರಜ್ವಲ್‌ ದೇವರಾಜ್ ಗೈರಾಗಿರುವುದು ಒಂದೆಡೆಯಾದರೆ, ಟ್ರೇಲರ್‌ನಲ್ಲಿ ಅವರ ಪಾತ್ರಕ್ಕೆ ಬೇರೊಬ್ಬ ಕಲಾವಿದರಿಂದ ಡಬ್ಬಿಂಗ್‌ ಮಾಡಿಸಿರುವುದು ಪ್ರಜ್ವಲ್ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪತಿಯ ಪರವಾಗಿ ನಿಂತ ರಾಗಿಣಿ ಚಂದ್ರನ್

ಸಿನಿಮಾ ಸುತ್ತಲಿನ ಈ ಎಲ್ಲಾ ವಿವಾದ ಹಾಗೂ ಗದ್ದಲಗಳ ನಡುವೆ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಭಾವುಕ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪ್ರಜ್ವಲ್ ಅವರ ಹುಟ್ಟುಹಬ್ಬ ಜುಲೈ 4ರಂದೇ ಮುಗಿದಿದ್ದರೂ ಸಹ, ರಾಗಿಣಿ ಅವರು ಮತ್ತೊಮ್ಮೆ ಪತಿಗೆ ಜನ್ಮದಿನದ ಶುಭಾಶಯ ಕೋರಿ ಅವರ ನಿಸ್ವಾರ್ಥ ವ್ಯಕ್ತಿತ್ವವನ್ನು ಶ್ಲಾಘಿಸಿದ್ದಾರೆ.

"ನೀವು ದಯೆ, ಪ್ರೀತಿ ಮತ್ತು ನಿಸ್ವಾರ್ಥತೆಗೆ ಸಾಕಾರ ರೂಪ. ತನ್ನ ಸುತ್ತಲಿರುವ ಪ್ರತಿಯೊಬ್ಬರಿಗೂ ಯಾವಾಗಲೂ ಒಳ್ಳೆಯದನ್ನೇ ಬಯಸುವ ವ್ಯಕ್ತಿಗೆ, ನನ್ನನ್ನು ರಾಜಕುಮಾರಿಯಂತೆ ಹೂವಿನಂತೆ ನೋಡಿಕೊಳ್ಳುವ ಪತಿಗೆ, ಕುಟುಂಬಕ್ಕೆ ಸದಾ ಮೊದಲ ಆದ್ಯತೆ ನೀಡುವ ಮಗನಿಗೆ ಮತ್ತು ಎರಡು ದಶಕಗಳಿಗೂ ಹೆಚ್ಚು ಕಾಲ ತನ್ನ ಅಭಿಮಾನಿಗಳಿಗೆ ಅತ್ಯುತ್ತಮ ನಟನೆಯನ್ನು ನೀಡುತ್ತಾ ಬಂದಿರುವ ಅದ್ಭುತ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ರಾಗಿಣಿ ಚಂದ್ರನ್‌ ಬರೆದುಕೊಂಡಿದ್ದಾರೆ.

ನಿಮ್ಮ ಮೌಲ್ಯಗಳಿಗೆ ನಮ್ಮ ಗೌರವವಿದೆ

"ನಿಮ್ಮ ಸುತ್ತಲಿನ ಪ್ರತಿಯೊಬ್ಬರಿಗೂ ನೀವು ನೀಡುವ ನಮ್ರತೆ ಮತ್ತು ಗೌರವವೇ ನಿಮ್ಮ ಶಕ್ತಿ. ನಿಮ್ಮ ಕಲೆಗೆ, ನಮ್ಮ ಚಿತ್ರರಂಗಕ್ಕೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ನೀವು ಯಾವಾಗಲೂ ನಿಮ್ಮ 100% ಶ್ರಮವನ್ನು ನೀಡಿದ್ದೀರಿ. ಅದು ಎಂದಿಗೂ ಬದಲಾಗದ ನಿಮ್ಮ ಶ್ರೇಷ್ಠ ಗುಣ. ನೀವು ಹೇಗಿದ್ದೀರೋ ಹಾಗೆಯೇ ನಾವು ನಿಮ್ಮನ್ನು ಪ್ರೀತಿಸುತ್ತೇವೆ ಮತ್ತು ನೀವು ನಂಬಿರುವ ಮೌಲ್ಯಗಳನ್ನು ಸದಾ ಗೌರವಿಸುತ್ತೇವೆ. ನೀವು ನಮ್ಮ ಹೆಮ್ಮೆ" ಎಂದು ರಾಗಿಣಿ ತಮ್ಮ ಪತಿಯ ಬೆಂಬಲಕ್ಕೆ ನಿಂತಿದ್ದಾರೆ.

ಪ್ರಜ್ವಲ್‌ ದೇವರಾಜ್‌ ಪತ್ನಿ ರಾಗಿಣಿ ಪೋಸ್ಟ್



ಏನಿದು ʻಕರಾವಳಿʼ ಚಿತ್ರದ ವಿವಾದ?

'ಕರಾವಳಿ' ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಸ್ವತಃ ಚಿತ್ರದ ಹೀರೋ ಪ್ರಜ್ವಲ್‌ ಅವರನ್ನೇ ಆಹ್ವಾನಿಸಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರಿಂದ ಗರಂ ಆದ ಪ್ರಜ್ವಲ್ ಅಭಿಮಾನಿಗಳು ಚಿತ್ರತಂಡದ ವಿರುದ್ಧ ಕಾರ್ಯಕ್ರಮದ ಸ್ಥಳದಲ್ಲೇ ತೀವ್ರ ಆಕ್ರೋಶ ಹೊರಹಾಕಿದ್ದರು. ಅಷ್ಟೇ ಅಲ್ಲದೆ, ಬಿಡುಗಡೆಯಾದ ಟ್ರೇಲರ್‌ನಲ್ಲಿ ಪ್ರಜ್ವಲ್ ದೇವರಾಜ್ ಅವರ ಧ್ವನಿಯ ಬದಲಿಗೆ ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವುದು ಅಭಿಮಾನಿಗಳ ಕೋಪವನ್ನು ಮತ್ತಷ್ಟು ನೆತ್ತಿಗೇರಿಸಿತ್ತು.

ಅದ್ದೂರಿಯಾಗಿ ಬಿಡುಗಡೆಯಾಯ್ತು ‘ಕರಾವಳಿ’ ಟ್ರೈಲರ್: ಕಂಬಳದ ಕ್ರೀಡೆ, ಸಸ್ಪೆನ್ಸ್ ಕಥೆಗೆ ಪ್ರೇಕ್ಷಕರು ಫಿದಾ

ಮೂಲಗಳ ಪ್ರಕಾರ, ಈ ವಿವಾದಕ್ಕೆ ಮುಖ್ಯ ಕಾರಣ ಸಂಭಾವನೆ ಎನ್ನಲಾಗಿದೆ. ಪ್ರಜ್ವಲ್ ಅವರಿಗೆ ಒಟ್ಟು 1.25 ಕೋಟಿ ರೂ. ಸಂಭಾವನೆ ನಿಗದಿಯಾಗಿದ್ದು, ಅದರಲ್ಲಿ ಚಿತ್ರತಂಡ 25 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಪ್ರಜ್ವಲ್ ದೇವರಾಜ್ ಅವರೇ ತಮಗೆ ಸರಿಯಾದ ರೀತಿಯಲ್ಲಿ ಸಂಭಾವನೆ ಸಂದಾಯವಾಗಿಲ್ಲ ಎಂಬುದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಚರ್ಚೆ ಹುಟ್ಟುಹಾಕಿರುವ ಈ ಸಂಭಾವನೆ ಹಾಗೂ ಡಬ್ಬಿಂಗ್ ವಿವಾದವು ಆದಷ್ಟು ಬೇಗ ಸುಖಾಂತ್ಯ ಕಂಡು, ಸಿನಿಮಾ ಅದ್ದೂರಿಯಾಗಿ ತೆರೆಕಾಣಲಿ ಎಂಬುದೇ ಸನಿಪ್ರಿಯರ ಆಶಯವಾಗಿದೆ.