ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಪ್ರಜ್ವಲ್‌ ದೇವರಾಜ್‌ಗೆ ದುಬಾರಿ ಸಂಭಾವನೆ ಕೊಟ್ಟಿದ್ದೇ ಈ ಕಾರಣಕ್ಕೆ, ಆದ್ರೆ...ʼ: ʻಕರಾವಳಿʼ ಚಿತ್ರತಂಡದಿಂದ ಹೊಸ ಟ್ವಿಸ್ಟ್‌!

'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಚಿತ್ರದ ವಿವಾದ ಈಗ ಪೊಲೀಸ್ ಠಾಣೆ ತಲುಪಿದೆ. ಟ್ರೇಲರ್ ಲಾಂಚ್ ವೇಳೆ ಗದ್ದಲ ಸೃಷ್ಟಿಸಿದ ಅಪರಿಚಿತರ ವಿರುದ್ಧ ಹಾಗೂ ಚಿತ್ರದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರದ ತನಿಖೆಗೆ ಆಗ್ರಹಿಸಿ ಚಿತ್ರತಂಡ ದೂರು ನೀಡಿದೆ. ಈ ಮಧ್ಯೆ ನಿರ್ಮಾಣ ಸಂಸ್ಥೆ ಕಡೆಯಿಂದ ಸ್ಪಷ್ಟನೆಯೂ ಸಿಕ್ಕಿದೆ.

ʻಡೈನಾಮಿಕ್ ಪ್ರಿನ್ಸ್ʼ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷಿತ ‘ಕರಾವಳಿ’ ಸಿನಿಮಾದ ಸುತ್ತ ಎದ್ದಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಈಗ ಹೊಸದೊಂದು ತಿರುವು ಸಿಕ್ಕಿದೆ. ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆದ ಗದ್ದಲ ಹಾಗೂ ಸಂಭಾವನೆ ಬಾಕಿ ವಿಚಾರವಾಗಿ ನಿರ್ಮಾಣ ಸಂಸ್ಥೆ ಅಧಿಕೃತ ಸ್ಪಷ್ಟನೆ ನೀಡಿದ್ದು, ನಟ ಪ್ರಜ್ವಲ್ ದೇವರಾಜ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಚಿತ್ರತಂಡ

ಇತ್ತೀಚೆಗೆ ನಡೆದ ‘ಕರಾವಳಿ’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಅನಧಿಕೃತವಾಗಿ ಪ್ರವೇಶಿಸಿ, ಅಡ್ಡಿಪಡಿಸಲು ಯತ್ನಿಸಿದ ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ನಿರ್ಮಾಣ ಸಂಸ್ಥೆ ಈಗ ಅಧಿಕೃತವಾಗಿ ಪೊಲೀಸ್ ದೂರು ದಾಖಲಿಸಿದೆ. ಇನ್ನು ಪ್ರಜ್ವಲ್ ದೇವರಾಜ್ ಅವರಿಗೆ ಕೊಡಬೇಕಿದ್ದ ಬಾಕಿ ಹಣವನ್ನು ಈ ಘಟನೆ ನಡೆದ ಮರುದಿನವೇ ಸಂಪೂರ್ಣವಾಗಿ ಪಾವತಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ದುಬಾರಿ ಸಂಭಾವನೆ ಒಪ್ಪಿದ್ದಕ್ಕೆ ಕಾರಣವೇ ಬೇರೆ!

ಪ್ರಜ್ವಲ್ ದೇವರಾಜ್ ಅವರಿಗೆ ಅಷ್ಟು ದೊಡ್ಡ ಮೊತ್ತದ ಸಂಭಾವನೆ ನೀಡಲು ಒಪ್ಪಿಕೊಂಡಿದ್ದರ ಹಿಂದಿನ ಅಸಲಿ ಕಾರಣವನ್ನು ನಿರ್ಮಾಣ ಸಂಸ್ಥೆ ಬಿಚ್ಚಿಟ್ಟಿದೆ. "ನಟ ಪ್ರಜ್ವಲ್ ದೇವರಾಜ್ ಅವರು ಚಿತ್ರದ ಕಥೆಗೆ ಅತ್ಯಂತ ಮುಖ್ಯವಾಗಿದ್ದ ದೈಹಿಕ ರೂಪಾಂತರ (Physical Transformation/6 packs) ಮಾಡಿಕೊಳ್ಳುವುದಾಗಿ ಒಪ್ಪಿಕೊಂಡಿದ್ದರು. ಅದೇ ಕಾರಣಕ್ಕೆ ಅಷ್ಟು ದೊಡ್ಡ ಮೊತ್ತದ ಸಂಭಾವನೆ ನೀಡಲು ಒಪ್ಪಲಾಗಿತ್ತು. ಆದರೆ, ಒಪ್ಪಿಕೊಂಡಂತೆ ದೈಹಿಕ ರೂಪಾಂತರ ಸಾಧ್ಯವಾಗದೇ ಇದ್ದಿದ್ದರಿಂದ ಉಳಿದ ಹಣವನ್ನು ಬಾಕಿಯಾಗಿ ಉಳಿಸಿಕೊಳ್ಳಲಾಗಿತ್ತು" ಎಂದು ಚಿತ್ರತಂಡ ಹೊಸ ಟ್ವಿಸ್ಟ್ ನೀಡಿದೆ.

Prajwal Devaraj: ಪೊಲೀಸ್ ಠಾಣೆ ಮೆಟ್ಟಿಲೇರಿದ ಕರಾವಳಿ ಸಿನಿಮಾ ಗಲಾಟೆ!

ಬೇರೆಯವರಿಂದ ಡಬ್ಬಿಂಗ್ ಮಾಡಿಸಿದ ಅನಿವಾರ್ಯತೆ

ಬಾಕಿ ಹಣ ನೀಡದೆ ತಾನು ಡಬ್ಬಿಂಗ್ ಮಾಡುವುದಿಲ್ಲ ಎಂದು ಪ್ರಜ್ವಲ್ ದೇವರಾಜ್ ಖಡಾಖಂಡಿತವಾಗಿ ಹೇಳಿದ್ದರು. ಅವರಿಗಾಗಿ ಎರಡು ತಿಂಗಳು ಕಾದರೂ ಅವರು ಬರದೇ ಇದ್ದಾಗ, ಅನಿವಾರ್ಯವಾಗಿ ಚಿತ್ರತಂಡ ಬೇರೆಯವರಿಂದ ಡಬ್ಬಿಂಗ್ ಮಾಡಿಸಿದೆ. ಈ ಮಧ್ಯೆ ಪ್ರಜ್ವಲ್ ಅವರನ್ನು ಸಂಪರ್ಕಿಸಲು ಚಿತ್ರತಂಡ ಹಲವು ಬಾರಿ ಯತ್ನಿಸಿದರೂ ಅವರು ಸಿಕ್ಕಿಲ್ಲ. ಚಿತ್ರರಂಗದ ಪ್ರಮುಖರು ಹಾಗೂ ನಿರ್ಮಾಪಕರಾದ ಕೆ.ವಿ.ಎನ್ ಸಂಸ್ಥೆಯ ಸುಪ್ರಿತ್, ಜಾಕ್ ಮಂಜು ಮತ್ತು ಲೋಹಿತ್ (ಚಕ್ರವ್ಯೂಹ) ಅವರುಗಳು ಪ್ರತ್ಯೇಕವಾಗಿ ಮಧ್ಯಸ್ಥಿಕೆಗೆ ಪ್ರಯತ್ನಿಸಿದರಾದರೂ ಅದು ವಿಫಲವಾಗಿತ್ತು. "ಬಾಕಿ ಹಣ ಪಾವತಿಯಾಗದ ಹೊರತು ಕರಾವಳಿ ಚಿತ್ರದ ಯಾವುದೇ ಕೆಲಸದಲ್ಲೂ ಭಾಗಿಯಾಗುವುದಿಲ್ಲ" ಎಂದು ಪ್ರಜ್ವಲ್ ಖಡಾಖಂಡಿತವಾಗಿ ಹೇಳಿದ್ದರು ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.

ಅಪಪ್ರಚಾರದ ವಿರುದ್ಧ ತನಿಖೆಗೆ ಆಗ್ರಹ

ಟ್ರೈಲರ್‌ನಲ್ಲಿ ತನ್ನ ಧ್ವನಿ ಇಲ್ಲದಿರುವ ವಿಚಾರ ಪ್ರಜ್ವಲ್ ದೇವರಾಜ್ ಅವರಿಗೆ ಮೊದಲೇ ತಿಳಿದಿತ್ತು ಹಾಗೂ ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವ ವಿಷಯವನ್ನು ಅವರ ಮ್ಯಾನೇಜರ್ ಮೂಲಕ ಮುಂಚಿತವಾಗಿಯೇ ತಲುಪಿಸಲಾಗಿತ್ತು. ಇಷ್ಟೆಲ್ಲಾ ಆದರೂ, ಬಾಕಿ ಹಣ ತಲುಪಿದ ಮೇಲೂ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ಖಾತೆಗಳ ಮೂಲಕ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ‘ಕರಾವಳಿ’ ಸಿನಿಮಾ, ನಿರ್ದೇಶಕರು ಹಾಗೂ ನಿರ್ಮಾಣ ಸಂಸ್ಥೆಯ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಚಿತ್ರತಂಡ ನೀಡಿರುವ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದೆ.