Photos: ʻಬಿಗ್ ಬಾಸ್ʼ ಖ್ಯಾತಿಯ ಭವ್ಯಾ ಗೌಡ ಸಹೋದರಿ ದಿವ್ಯಾಗೆ ಮದುವೆ ಫಿಕ್ಸ್, ಸಿಂಪಲ್ ಆಗಿ ನಡೆದ ಹೂವು ಮುಡಿಸೋ ಶಾಸ್ತ್ರ; ಹುಡುಗ ಯಾರು?
'ಗೀತಾ' ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮಾತಾಗಿ, ನಂತರ 'ಬಿಗ್ ಬಾಸ್ ಕನ್ನಡ 11' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ನಟಿ ಭವ್ಯಾ ಗೌಡ ಈಗ ಜೀ ಕನ್ನಡದ 'ಕರ್ಣ' ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ, ಇವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ, ಅವರ ಸಹೋದರಿ ದಿವ್ಯಾ ಗೌಡ ಮನೆಯೊಳಗೆ ಬಂದಿದ್ದರು. ಒಂದೆರಡು ದಿನ ಇದ್ದ ಅವರು ಸಖತ್ ಫೇಮಸ್ ಆಗಿದ್ದರು. ಇದೀಗ ಅವರು ಮದುವೆ ಆಗುವುದರ ಮೂಲಕ ಸುದ್ದಿಯಾಗಿದ್ದಾರೆ.. ಹೌದು, ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಈಚೆಗಷ್ಟೇ ಮನೆಯಲ್ಲಿ ಮದುವೆಯ ಭಾಗವಾಗಿ ಹೂವು ಮುಡಿಸೋ ಶಾಸ್ತ್ರ ಕೂಡ ನಡೆದಿದೆ. ಇಲ್ಲಿವೆ ಈ ಜೋಡಿಯ ಮುದ್ದಾದ ಫೋಟೋಗಳು.
ವೃತ್ತಿಯಲ್ಲಿ ಮೇಕಪ್ ಆರ್ಟಿಸ್ಟ್ ಹಾಗೂ ಉದ್ಯಮಿಯಾಗಿರುವ ದಿವ್ಯಾ ಗೌಡ, ಬೆಂಗಳೂರಿನಲ್ಲಿ ತಮ್ಮ ತಂಗಿ ಭವ್ಯಾ ಗೌಡ ಜೊತೆ ಸೇರಿ 'ಹೌಸ್ ಆಫ್ ಫ್ಲವರ್ಸ್' ಎಂಬ ಪ್ರಸಿದ್ಧ ಹೂವಿನ ಮಳಿಗೆಯನ್ನು ನಡೆಸುತ್ತಿದ್ದಾರೆ.
ದಿವ್ಯಾ ಗೌಡ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದು, ಭಾವಿ ಪತಿಯ ಜೊತೆಗಿರುವ ರೋಮ್ಯಾಂಟಿಕ್ ವಿಡಿಯೋವನ್ನು ಹಂಚಿಕೊಂಡು, "ನಮ್ಮ ಬದುಕಿನ ಮುಂದಿನ ಅಧ್ಯಾಯ ಅದಾಗಲೇ ನನಗೆ ಫೇವರಿಟ್ ಆಗಿದೆ" ಎಂದು ಬರೆದುಕೊಂಡಿದ್ದಾರೆ.
ಬಿಗ್ ಬಾಸ್‌ನ ಫ್ಯಾಮಿಲಿ ವೀಕ್‌ನಲ್ಲಿ ಮನೆಗೆ ಬಂದಿದ್ದ ದಿವ್ಯಾ ಗೌಡ, ಸ್ಪರ್ಧಿ ಹನುಮಂತು ಜೊತೆ 'ಹೇಳು ಬೇ.. ಕೇಳಬೇ..' ಎಂದು ಕೌಂಟರ್ ಕೊಟ್ಟು ಒಂದೇ ದಿನಕ್ಕೆ ಸಖತ್ ಫೇಮಸ್ ಆಗಿದ್ದರು.
ದಿವ್ಯಾ ಮದುವೆಯಾಗುತ್ತಿರುವ ಹುಡುಗ ಹೇಮಂತ್ ಕುಮಾರ್. ಇವರು ಪ್ರತಿಷ್ಠಿತ 'ಎಂಡಮೋಲ್ ಶೈನ್' ಕಂಪನಿಯಲ್ಲಿ ಮತ್ತು ಬಿಗ್ ಬಾಸ್ ಶೋನಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಭವ್ಯಾ ಗೌಡ ಬಿಗ್ ಬಾಸ್‌ನಲ್ಲಿದ್ದಾಗ, ದಿವ್ಯಾ ಅವರು ಫ್ಯಾಮಿಲಿ ಪರವಾಗಿ ಬಿಗ್ ಬಾಸ್ ತಂಡದ ಜೊತೆ ಸಂಪರ್ಕದಲ್ಲಿದ್ದರು. ಆ ಸಮಯದಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಹೇಮಂತ್ ಮತ್ತು ದಿವ್ಯಾ ನಡುವೆ ಉಂಟಾದ ಪರಿಚಯ ಪ್ರೇಮಕ್ಕೆ ತಿರುಗಿದೆ ಎನ್ನಲಾಗಿದೆ.
ಹೇಮಂತ್ ಕುಮಾರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ, "ಇವಳೇ... ಅವಳು... ಕನಸಲಿ ಬಂದವಳು.." ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದಕ್ಕೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್, "ಅಬ್ಬಬ್ಬಾ… ನಿಮಗೋಸ್ಕರ ರೆಡಿ ಇದ್ದಾರೆ" ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಪ್ರಸ್ತುತ ದಿವ್ಯಾ ಗೌಡ ಹಾಗೂ ಹೇಮಂತ್ ಕುಮಾರ್ ಮದುವೆಗೆ ಎರಡೂ ಕುಟುಂಬದವರು ಹಸಿರು ನಿಶಾನೆ ತೋರಿಸಿದ್ದು, ಶೀಘ್ರದಲ್ಲೇ ಈ ಜೋಡಿ ಸಪ್ತಪದಿ ತುಳಿಯಲಿದೆ. ಚಿತ್ರರಂಗ ಹಾಗೂ ಉದ್ಯಮ ಹಿನ್ನೆಲೆಯ ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.