ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಾಪರಾಜಿಗಳ ಮೇಲೆ ಸ್ಯಾಂಡಲ್‌ವುಡ್‌ ಗರಂ; ಅಸಭ್ಯ ಆಂಗಲ್‌ನಿಂದ ಫೋಟೋ-ವಿಡಿಯೋ ಕ್ಯಾಪ್ಚರ್‌ ಮಾಡುವುದಕ್ಕೆ ವಾಣಿಜ್ಯ ಮಂಡಳಿ ಬ್ರೇಕ್, ಖಡಕ್ ಎಚ್ಚರಿಕೆ!

Paparazzi Culture in Sandalwood: ಪಾಪರಾಜಿಗಳ ವರ್ತನೆ ಇತ್ತೀಚೆಗೆ ಮಿತಿಮೀರುತ್ತಿದ್ದು, ನಟಿ ಸಪ್ತಮಿ ಗೌಡ ಎತ್ತಿದ ಧ್ವನಿಗೆ ಈಗ ಅಧಿಕೃತ ಮನ್ನಣೆ ಸಿಕ್ಕಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮಹಿಳಾ ಕಲಾವಿದರನ್ನು ಅಸಭ್ಯವಾಗಿ ಚಿತ್ರೀಕರಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಈಚೆಗೆ ನಟಿ ಸಪ್ತಮಿ ಗೌಡ ಅವರು ಪಾಪರಾಜಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಸಭ್ಯ ಆಂಗಲ್‌ನಿಂದ ಫೋಟೋ ಅಥವಾ ವಿಡಿಯೋ ಕ್ಯಾಪ್ಚರ್‌ ಮಾಡಿ ಪೋಸ್ಟ್‌ ಮಾಡುವವರ ವಿರುದ್ಧ ಸಪ್ತಮಿ ಗೌಡ ಧ್ವನಿ ಎತ್ತಿದ್ದರು. ಈ ವಿಚಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿತ್ತು. ಇದೀಗ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ಅವರು ಸಭೆ ನಡೆಸಿ, ಸುತ್ತೊಲೆಯೊಂದನ್ನು ಹೊರಡಿಸಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದ್ದೇನು?

"ಚಲನಚಿತ್ರ ಕಲಾವಿದರುಗಳಾದ ಕುಮಾರಿ ಸಪ್ತಮಿ ಗೌಡ, ಡಾಲಿ ಧನಂಜಯ ಇವರು ವಾಣಿಜ್ಯ ಮಂಡಳಿಗೆ ಪತ್ರ ಬರೆದು, ಸಿನಿಮಾ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಚಲನಚಿತ್ರ ಮಹಿಳಾ ಕಲಾವಿದರುಗಳ ಫೋಟೋ, ವಿಡಿಯೋಗಳನ್ನು ಅಸಭ್ಯವಾಗಿ ಚಿತ್ರೀಕರಿಸುತ್ತಿರುವುದರಿಂದ ಈ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕೆಂದು ಕೋರಿದ್ದಾರೆ. ಸದರಿ ದೂರಿನ ಮೇರೆಗೆ ದಿನಾಂಕ 9-3-2026ರಂದು ವಾಣಿಜ್ಯ ಮಂಡಳಿಯ ಸಭಾಂಗಣದಲ್ಲಿ ಕೇಂದ್ರ ಸಂಧಾನ ಸಮಿತಿ ಸಭೆಯನ್ನು ಆಯೋಜಿಸಲಾಗಿತ್ತು"

ʻಕೆಲವರ ಈ ವರ್ತನೆ ಅಸಭ್ಯ, ಅವಮಾನಕಾರಿಯಾಗಿದೆʼ; ಪಾಪರಾಜಿಗಳ ಮೇಲೆ ರೊಚ್ಚಿಗೆದ್ದ ನಟಿ ಸಪ್ತಮಿ ಗೌಡ, ಸಾಥ್‌ ನೀಡಿದ ಸ್ಯಾಂಡಲ್‌ವುಡ್‌!

ಸಭೆಯಲ್ಲಿ ಯಾರೆಲ್ಲಾ ಇದ್ದರು?

"ಅಂದಿನ ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಎಲ್ಲಾ ಅಂಗ-ಸಂಸ್ಥೆಗಳ ಅಧ್ಯಕ್ಷರುಗಳು ಹಾಗೂ ಚಲನಚಿತ್ರ ಕಲಾವಿದರುಗಳಾದ ಸಪ್ತಮಿ ಗೌಡ, ಮಾಳವಿಕಾ ಅವಿನಾಶ್, ಶ್ರುತಿ, ಸುನಯನ ಸುರೇಶ್, ತರುಣ್ ಸುಧೀರ್, ಚಲನಚಿತ್ರ ಪಿಆರ್‌ಓಗಳು, ಡಿಜಿಟಲ್ ಮೀಡಿಯಾ ಮತ್ತು ಯೂಟ್ಯೂಬರ್ಸ್‌ಗಳ ಪ್ರತಿನಿಧಿಗಳು ಭಾಗವಹಿಸಿದ್ದರು"

The Rise of Ashoka: ಪ್ಯಾನ್‌ ಇಂಡಿಯಾ ಚಿತ್ರದ ಮೂಲಕ ಮೊದಲ ಬಾರಿಗೆ ಜೋಡಿಯಾದ ಸತೀಶ್‌ ನೀನಾಸಂ-ಸಪ್ತಮಿ ಗೌಡ; ʼದಿ ರೈಸ್ ಆಫ್ ಅಶೋಕʼ ಡಬ್ಬಿಂಗ್ ಪೂರ್ಣ

ಇನ್ನುಮುಂದೆ ಇಂತಹ ಘಟನೆಗಳು ಮರುಕಳಿಸಬಾರದು

"ಸಭೆಯಲ್ಲಿ ಸುದೀರ್ಘ ಚರ್ಚೆಗಳು ನಡೆದು, ಇನ್ನುಮುಂದೆ ಇಂತಹ ವಿಡಿಯೋಗಳು, ಪೋಟೋಗಳನ್ನು ಪೋಸ್ಟ್ ಮಾಡುವುದಿಲ್ಲ. ಈಗಾಗಲೇ ಪೋಸ್ಟ್ ಮಾಡಿರುವ ಫೋಟೋಗಳನ್ನು ತೆಗೆದುಹಾಕಲಾಗಿದೆ ಎಂದು ಡಿಜಿಟಲ್ ಮೀಡಿಯಾ ಹಾಗೂ ಪಿಆರ್‌ಒಗಳು ಭರವಸೆಯನ್ನು ನೀಡಿದರು. ತದನಂತರ ಸಭೆಯು, ಇನ್ನುಮುಂದೆ ಇಂತಹ ಘಟನೆಗಳು ಮರುಕಳಿಸಬಾರದು, ಮರುಕಳಿಸಿದ ಪಕ್ಷದಲ್ಲಿ ಅದಕ್ಕೆ ಪಿಆರ್‌ಒಗಳೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ರೀತಿಯ ಫೋಟೋಗಳು, ವಿಡಿಯೋಗಳು ಚಿತ್ರೀಕರಿಸಿದ ಘಟನೆಗಳು ಕಂಡುಬಂದಲ್ಲಿ ಕೂಡಲೇ ಸೈಬರ್ ಕ್ರೈಮ್‌ಗೆ ದೂರು ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ತೀರ್ಮಾನಿಸಲಾಯಿತು" ಎಂದು ವಾಣಿಜ್ಯ ಮಂಡಳಿ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.