ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾನೂನು ಹೋರಾಟದಲ್ಲಿ ʻಬಾಸ್‌ʼ ಚಿತ್ರತಂಡಕ್ಕೆ ಗೆಲುವು; ಸಿನಿಮಾ ಬಿಡುಗಡೆಗೆ ಹೈಕೋರ್ಟ್ ಹಸಿರು ನಿಶಾನೆ, ರಿಲೀಸ್‌ ಯಾವಾಗ?

ʻಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸುವ ಮೂಲಕ ಕರ್ನಾಟಕ ಹೈಕೋರ್ಟ್ 'ಬಾಸ್' ಸಿನಿಮಾದ ಬಿಡುಗಡೆಗೆ ಮುಕ್ತ ಅನುಮತಿ ನೀಡಿದೆ. ಒಂದೂವರೆ ತಿಂಗಳ ಕಠಿಣ ಕಾನೂನು ಹೋರಾಟದ ನಂತರ ಸಿಕ್ಕ ಈ ಜಯವನ್ನು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂದ ಜಯ ಎಂದು ಚಿತ್ರತಂಡ ಬಣ್ಣಿಸಿದೆ.

ಸ್ಯಾಂಡಲ್‌ವುಡ್‌ನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಭಾರಿ ಕುತೂಹಲ ಮೂಡಿಸಿದ್ದ 'ಬಾಸ್' ಸಿನಿಮಾದ ಬಿಡುಗಡೆಗೆ ಸಂಬಂಧಿಸಿದ ಕಾನೂನು ಸಮರಕ್ಕೆ ಕೊನೆಗೂ ತೆರೆ ಬಿದ್ದಿದೆ. ಚಿತ್ರದ ರಿಲೀಸ್‌ಗೆ ತಡೆ ನೀಡಬೇಕು ಎಂದು ಕೋರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ಇಂದು (ಜುಲೈ 17) ವಜಾಗೊಳಿಸಿದೆ. ಈ ಮೂಲಕ ನ್ಯಾಯಾಲಯವು 'ಬಾಸ್' ಚಿತ್ರದ ಬಿಡುಗಡೆಗೆ ಮುಕ್ತ ಅವಕಾಶ ಕಲ್ಪಿಸಿದ್ದು, ತನುಷ್ ಸಿನಿಮಾಸ್ ಹಾಗೂ ಇಡೀ ಚಿತ್ರತಂಡಕ್ಕೆ ಮಹತ್ವದ ಕಾನೂನು ಜಯ ಸಿಕ್ಕಂತಾಗಿದೆ.

ನ್ಯಾಯದ ಗೆಲುವು ಎಂದ ನಿರ್ಮಾಪಕ, ನಿರ್ದೇಶಕ

ಹೈಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆಯೇ ಚಿತ್ರದ ನಾಯಕ ನಟ ಹಾಗೂ ನಿರ್ಮಾಪಕರಾದ ತನುಷ್ ಶಿವಣ್ಣ ಮತ್ತು ನಿರ್ದೇಶಕ ಲವಾ ವಿ. ಜಂಟಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ನಿರ್ಮಾಪಕ ತನುಷ್ ಶಿವಣ್ಣ, "ನಮ್ಮ ಸಿನಿಮಾವನ್ನು ನಂಬಿ, ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಇಂದು ಸತ್ಯ ಮತ್ತು ನ್ಯಾಯಕ್ಕೆ ಗೆಲುವಾಗಿದೆ. ನ್ಯಾಯಾಲಯದ ಅನುಮತಿಯೊಂದಿಗೆ 'ಬಾಸ್' ಸಿನಿಮಾ ಇಂದು ಪ್ರೇಕ್ಷಕರ ಮುಂದೆ ಬರುತ್ತಿದ್ದು, ಸಿನಿಪ್ರೇಕ್ಷಕರು ಚಿತ್ರವನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ಅಚಲ ವಿಶ್ವಾಸ ನಮಗಿದೆ" ಎಂದರು.

ನ್ಯಾಯ ಎಲ್ಲರಿಗೂ ಒಂದೇ

ಬಳಿಕ ನಿರ್ದೇಶಕ ಲವಾ ವಿ. ಮಾತನಾಡಿ, "ಒಂದೂವರೆ ತಿಂಗಳಿನಿಂದ ನ್ಯಾಯಾಲಯದಲ್ಲಿ ನಿರಂತರವಾಗಿ ಕಠಿಣ ಕಾನೂನು ಹೋರಾಟ ನಡೆಸಿದ್ದೇವೆ. ಇಂದು ಸತ್ಯಕ್ಕೆ ಜಯ ಸಿಕ್ಕಿದೆ. ಭಾರತದ ಸಂವಿಧಾನ ನಮಗೆ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಮಗೆ ಮೊದಲಿನಿಂದಲೂ ಅಪಾರ ನಂಬಿಕೆ ಇತ್ತು, ಅದು ಇಂದು ನಿಜವಾಗಿದೆ. ಈ ದೇಶದಲ್ಲಿ ಕಾನೂನು ಮತ್ತು ನ್ಯಾಯ ಎಲ್ಲರಿಗೂ ಒಂದೇ. ಈ ತೀರ್ಪಿನಿಂದಾಗಿ ನ್ಯಾಯಾಂಗ ವ್ಯವಸ್ಥೆಯ ಮೇಲಿರುವ ನಮ್ಮ ಗೌರವ ಮತ್ತು ವಿಶ್ವಾಸ ಮತ್ತಷ್ಟು ಗಟ್ಟಿಯಾಗಿದೆ. ನಾವೆಲ್ಲರೂ ಭಾರತದ ಕಾನೂನನ್ನು ಗೌರವಿಸೋಣ ಹಾಗೂ ಪ್ರೀತಿಸೋಣ" ಎಂದು ಅಭಿಪ್ರಾಯಪಟ್ಟರು.

ಆರ್ಥಿಕ ನಷ್ಟವಾದರೂ ದರ್ಶನ್ ಅವರಿಗೆ ಒಳಿತಾಗಲಿ ಎಂದ ತಂಡ

"ಈ ಸುದೀರ್ಘ ಕಾನೂನು ಹೋರಾಟದ ಪ್ರಕ್ರಿಯೆಯಿಂದಾಗಿ ಚಿತ್ರತಂಡಕ್ಕೆ ಸಾಕಷ್ಟು ಅಮೂಲ್ಯವಾದ ಸಮಯ ವ್ಯರ್ಥವಾಗಿದೆ. ಅಷ್ಟೇ ಅಲ್ಲದೆ, ಕೋಟ್ಯಂತರ ರೂಪಾಯಿಗಳ ಭಾರಿ ಆರ್ಥಿಕ ನಷ್ಟವನ್ನೂ ನಾವು ಅನುಭವಿಸಬೇಕಾಗಿ ಬಂತು. ಆದಾಗ್ಯೂ, ನಮ್ಮ ಮನಸ್ಸಿನಲ್ಲಿ ಯಾರ ಮೇಲೂ ಯಾವುದೇ ರೀತಿಯ ದ್ವೇಷ ಅಥವಾ ಹಗೆತನ ಇಲ್ಲ. ಸದ್ಯ ಜೈಲು ವಾಸದಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶೀಘ್ರದಲ್ಲೇ ತಮ್ಮ ಎಲ್ಲಾ ಸಂಕಷ್ಟಗಳಿಂದ ಮುಕ್ತರಾಗಿ ಹೊರಬರಲಿ, ಅವರಿಗೆ ದೇವರು ಇನ್ನಷ್ಟು ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತೇವೆ. ನಾವು ಯಾರಿಗೂ ಎಂದಿಗೂ ಕೆಟ್ಟದ್ದನ್ನು ಬಯಸುವುದಿಲ್ಲ" ಎಂದು ನಿರ್ದೇಶಕ ಲವಾ ತಿಳಿಸಿದರು.

ಕಾನೂನು ಹೋರಾಟದಲ್ಲಿ ಗೆದ್ದ ತನುಷ್ ಶಿವಣ್ಣ ನಟನೆಯ ‘ಬಾಸ್’ ಸಿನಿಮಾ; ಬಿಡುಗಡೆಗೆ ಇದ್ದ ತಡೆಯಾಜ್ಞೆ ತೆರವು

ತಪ್ಪು ಮಾಹಿತಿ ಹರಡಿದವರಿಗೂ ಒಳ್ಳೆಯದಾಗಲಿ

ಚಿತ್ರದ ಬಿಡುಗಡೆಯನ್ನು ಯಾವುದೇ ರೀತ್ಯಾ ತಡೆಯಲೇಬೇಕು ಎಂಬ ಉದ್ದೇಶದಿಂದ ಕೆಲವರು ಸೋಷಿಯಲ್ ಮೀಡಿಯಾ ಹಾಗೂ ಸಾರ್ವಜನಿಕ ವಲಯದಲ್ಲಿ ಸಿನಿಮಾದ ಬಗ್ಗೆ ತಪ್ಪು ಮತ್ತು ಸುಳ್ಳು ಮಾಹಿತಿಗಳನ್ನು ಹರಡಲು ವ್ಯವಸ್ಥಿತ ಯತ್ನ ನಡೆಸಿದ್ದರು ಎಂದು ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. "ನಮ್ಮ ವಿರುದ್ಧ ಅಪಪ್ರಚಾರ ಮಾಡಿ, ತಪ್ಪು ಮಾಹಿತಿ ಹರಡಿದವರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇವೆ. ಈಗ ವಿವಾದಗಳೆಲ್ಲ ಮುಗಿದಿದ್ದು, ಪ್ರೇಕ್ಷಕರಿಗೆ ಒಂದು ಅತ್ಯುತ್ತಮ ಸಿನಿಮಾವನ್ನು ತಲುಪಿಸುವುದರ ಮೇಲಷ್ಟೇ ನಮ್ಮ ಸಂಪೂರ್ಣ ಗಮನವಿದೆ" ಎಂದು ತನುಷ್ ಸಿನಿಮಾಸ್ ಬ್ಯಾನರ್ ವಿಶ್ವಾಸ ವ್ಯಕ್ತಪಡಿಸಿದೆ.

ಎಲ್ಲಾ ಅಡೆತಡೆಗಳನ್ನು ದಾಟಿ ಇಂದೇ ಪ್ರೇಕ್ಷಕರ ಮುಂದೆ ಬರಲಿರುವ 'ಬಾಸ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ, ಇಂದು (ಜುಲೈ 17) ಸಂಜೆಯೇ ಟ್ರೇಲರ್‌ ರಿಲೀಸ್‌ ಆಗಲಿದೆ. ಅತೀ ಶೀಘ್ರದಲ್ಲೇ ಈ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್‌ ಮಾಡಿಕೊಳ್ಳುತ್ತಿದೆ.