ಸ್ಯಾಂಡಲ್‌ವುಡ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಅಶ್ಲೀಲ ಹಾಗೂ ನಿಂದನಾತ್ಮಕ ಕಾಮೆಂಟ್‌ಗಳನ್ನು ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಕೆಳ ನ್ಯಾಯಾಲಯವು ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ, ಆರೋಪಿಗಳಾದ ಬಿ. ಚಂದ್ರಶೇಖರ್, ಪ್ರಶಾಂತ್ ತಲ್ವಾರ್, ನಿಂಗರಾಜ್ ಗುಲಾಪ್ಪ ತಲ್ವಾರ್ ಮತ್ತು ಜಿ. ಬಿ. ನಿತಿನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಏಕಸದಸ್ಯ ಪೀಠವು, ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿ ಅರ್ಜಿಗಳನ್ನು ವಜಾಗೊಳಿಸಿದೆ.
ದರ್ಶನ್ ಜೊತೆ ಮುಖಾಮುಖಿ ಭೇಟಿಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ- ಪುತ್ರ ವಿನೀಶ್
ದೇಶದ ಮಹಿಳೆಯರ ಬಗೆಗಿನ ಕೀಳು ಮನಸ್ಥಿತಿ ಇದು!
ಪ್ರಕರಣದ ಗಾಂಭೀರ್ಯತೆಯನ್ನು ಉಲ್ಲೇಖಿಸಿದ ಹೈಕೋರ್ಟ್ ಪೀಠವು, "ದೂರುದಾರೆ ವಿಜಯಲಕ್ಷ್ಮಿ ಅವರು 2025ರ ಡಿಸೆಂಬರ್‌ನಲ್ಲಿ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಹಸೀ ಅಶ್ಲೀಲ ಪದಗಳಿಂದ ನಿಂದಿಸಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ಮಹಿಳೆಯ ವಿರುದ್ಧ ಇಂತಹ ಕೀಳು ಮಟ್ಟದ ಕಾಮೆಂಟ್‌ಗಳನ್ನು ಮಾಡುವುದನ್ನು ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ. ಆರೋಪಿಗಳು ಮಾಡಿರುವ ಕಾಮೆಂಟ್‌ಗಳು, ಒಟ್ಟಾರೆ ದೇಶದ ಮಹಿಳೆಯರ ಬಗ್ಗೆ ಅವರಿಗಿರುವ ವಿಕೃತ ಮನಸ್ಥಿತಿಯನ್ನು ಸೂಚಿಸುತ್ತದೆ" ಎಂದು ಗಂಭೀರವಾಗಿ ನುಡಿಯಿತು.
ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಕಾನೂನು ಮೀರುವುದಲ್ಲ!
"ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ನೀಡಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಪ್ರತಿಯೊಂದು ಹಕ್ಕಿಗೂ ಅದರದ್ದೇ ಆದ ಸಮಂಜಸವಾದ ನಿರ್ಬಂಧಗಳೂ ಇವೆ. ಆ ನಿರ್ಬಂಧಗಳ ಗೆರೆ ದಾಟುವುದು ಅಥವಾ ಇನ್ನೊಬ್ಬ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸುವುದು ಖಂಡಿತವಾಗಿಯೂ ಗಂಭೀರ ಅಪರಾಧವಾಗುತ್ತದೆ. ಅಂತಹ ಅಪರಾಧಗಳನ್ನು ಕಾನೂನಿನ ಪ್ರಕಾರವೇ ಕಠಿಣವಾಗಿ ಎದುರಿಸಬೇಕಾಗುತ್ತದೆ" ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Actor Darshan: ವಿವಾಹ ವಾರ್ಷಿಕೋತ್ಸವ; ವಿಜಯಲಕ್ಷ್ಮಿ ದರ್ಶನ್ ಭಾವುಕ!
ಜೊತೆಗೆ, ಸಾಮಾಜಿಕ ಮಾಧ್ಯಮಗಳನ್ನು ಬಳಸುವವರು ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತಾರದಂತೆ ನಡೆದುಕೊಳ್ಳಬೇಕು ಎಂದು ಪೀಠವು ಸಲಹೆ ನೀಡಿದೆ.
ನ್ಯಾಯಾಲಯಗಳು ಮೂಕ ಪ್ರೇಕ್ಷಕನಲ್ಲ!
ಸಾಮಾಜಿಕ ಜಾಲತಾಣಗಳ ಕಂಪನಿಗಳ ಜವಾಬ್ದಾರಿಯನ್ನು ನೆನಪಿಸಿದ ನ್ಯಾಯಾಲಯ, "ಆಧಾರರಹಿತ, ಸುಳ್ಳು, ಕ್ಷುಲ್ಲಕ ಮತ್ತು ಬೆದರಿಸುವ ಸಂದೇಶಗಳನ್ನು ಹರಡುವುದನ್ನು ಆಯಾ ಸಾಮಾಜಿಕ ಜಾಲತಾಣದ ಕಂಪನಿಗಳೇ ನಿಯಂತ್ರಿಸಬೇಕಾಗುತ್ತದೆ. ಒಂದು ವೇಳೆ ಅವು ವಿಫಲವಾದರೆ, ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ನ್ಯಾಯಾಲಯಗಳು ಮಧ್ಯಪ್ರವೇಶಿಸಬೇಕಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿ ನ್ಯಾಯಾಲಯಗಳು ಮೂಕ ಪ್ರೇಕ್ಷಕನಾಗಿ ಕುಳಿತುಕೊಳ್ಳುವುದಿಲ್ಲ. ಸಾರ್ವಜನಿಕರ ಹಿತಾಸಕ್ತಿ ಹಾಗೂ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸಲು ನ್ಯಾಯಾಲಯಗಳು ಯಾವುದೇ ಹಿಂಜರಿಕೆಯಿಲ್ಲದೆ ಕಠಿಣ ಹೆಜ್ಜೆ ಇಡುತ್ತವೆ" ಎಂದು ಎಚ್ಚರಿಸಿದೆ.
ಪ್ರಕರಣದ ಹಿನ್ನೆಲೆ ಏನು?
'ಡೆವಿಲ್' ಚಿತ್ರದ ಪ್ರಚಾರದ ವೇಳೆ ವಿಜಯಲಕ್ಷ್ಮಿ ದರ್ಶನ್ ಅವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅಶ್ಲೀಲ ಪೋಸ್ಟ್‌ಗಳನ್ನು ಹಾಕಿದ್ದರು. ಈ ಬಗ್ಗೆ ಸ್ವತಃ ವಿಜಯಲಕ್ಷ್ಮಿ ಅವರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಲಿಖಿತ ದೂರು ನೀಡಿದ್ದರು. ಅವರ ದೂರಿನ ಅನ್ವಯ ಸೈಬರ್ ಕ್ರೈಮ್ (CEN) ಪೊಲೀಸರು ಎಫ್‌ಐಆರ್ ದಾಖಲಿಸಿ ಈ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಸದ್ಯ ಹೈಕೋರ್ಟ್ ಕೂಡ ಜಾಮೀನು ನಿರಾಕರಿಸಿರುವುದರಿಂದ ಆರೋಪಿಗಳಿಗೆ ಜೈಲೇ ಗತಿಯಾಗಿದೆ.