ಸ್ಯಾಂಡಲ್‌ವುಡ್‌ನಲ್ಲಿ ಮೂರು ಹೊಸ ಸಿನಿಮಾಗಳ ಘೋಷಣೆ ಆಗಿದೆ. ಮೂರು ಸಿನಿಮಾಗಳನ್ನು ಒಂದೇ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿದ್ದು, ಈ ಎಲ್ಲಾ ಚಿತ್ರಗಳಿಗೂ ಒಂದೇ ಕಡೆ, ಒಟ್ಟಿಗೆ ಮುಹೂರ್ತ ನೆರವೇರಿರುವುದು ವಿಶೇಷ. ಅದರಲ್ಲಿ ಒಂದು ಸಿನಿಮಾಕ್ಕೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರು ಹೀರೋ ಆದರೆ, ಮತ್ತೊಂದು ಸಿನಿಮಾಕ್ಕೆ ಪೃಥ್ವಿ ಅಂಬಾರ್ ನಾಯಕ. ಇನ್ನೂ ಹೆಸರಿಡದ ಮೂರನೇ ಚಿತ್ರದಲ್ಲಿ ತಬಲಾ ನಾಣಿ ಪ್ರಮುಖ ಪಾತ್ರ ಮಾಡಲಿದ್ದಾರೆ.
ಆ ನಿರ್ಮಾಪಕರು ಯಾರು?
ಅರುಣಕುಮಾರ್ ಅವರ ಮಾಲೀಕತ್ವದ ಮ್ಯಾಟ್ರಿಕ್ ಮೂವೀ ಮೇಕರ್ಸ್ ಅಡಿಯಲ್ಲಿ ಈ ಮೂರು ಚಿತ್ರಗಳು ನಿರ್ಮಾಣವಾಗುತ್ತಿವೆ. ಗವಿಪುರದ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈಚೆಗೆ ಈ ಸಿನಿಮಾಗಳಿಗೆ ಮುಹೂರ್ತ ನಡೆದಿದೆ. ʻಅಂದೊಂದಿತ್ತು ಕಾಲʼ ಖ್ಯಾತಿಯ ಕೀರ್ತಿ ಕೃಷ್ಣ ನಿರ್ದೇಶನದ ʻಸೀತಾ ರಾಮ ರಾಜುʼ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಹೀರೋ ಆಗಿ ಕಾಣಿಸಿಕೊಂಡರೆ, ಸ್ವಸ್ತಿಕ್ ನಿದೇಶನದ ಚಿತ್ರಕ್ಕೆ ʻದರ್ಶನʼ ಎಂದು ಹೆಸರಿಡಲಾಗಿದೆ. ಇದರಲ್ಲಿ ಪೃಥ್ವಿ ಅಂಬಾರ್ ಹೀರೋ. ʻಕೆಮಿಸ್ಟ್ರಿ ಆಫ್ ಕರಿಯಪ್ಪʼ ಖ್ಯಾತಿಯ ಕುಮಾರ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ತಬಲಾ ನಾಣಿ ಇದ್ದಾರೆ.
ನಿರ್ಮಾಪಕರು ಹೇಳಿದ್ದೇನು?
"ನಮಗೆ ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸೆ ತುಂಬಾ ವರ್ಷಗಳಿಂದ ಇತ್ತು. ಸಾಕಷ್ಟು ಕಥೆಗಳನ್ನು ಕೇಳಿದ್ದೇವೆ, ಅದೀಗ ಕಾರ್ಯರೂಪಕ್ಕೆ ಬರುತ್ತಿದೆ" ಎನ್ನುವ ಅರುಣ್‌ಕುಮಾರ್ ಅವರಿಗೆ ಸಹ ನಿರ್ಮಾಪಕಿಯಾಗಿ ಸಾಥ್ ನೀಡಿದ್ದಾರೆ ಭವ್ಯಾ ಅರುಣ್‌ಕುಮಾರ್. "ಹಲವಾರು ವರ್ಷದಿಂದ ಸುಮಾರು ಕಥೆಗಳನ್ನು ಕೇಳಿದ್ದೇವೆ. ಅದರಲ್ಲಿ ಈ ಮೂರು ಕಥೆಗಳು ನಮಗೆ ತುಂಬಾ ಹಿಡಿಸಿದವು, ಹಾಗಾಗಿ ನಿರ್ಮಾಣಕ್ಕೆ ನಾವೀಗ ಮುಂದಾಗಿದ್ದೇವೆ" ಎನ್ನುತ್ತಾರೆ ಭವ್ಯಾ.
ಸೀತಾ ರಾಮ ರಾಜು
ʻಸೀತಾ ರಾಮ ರಾಜುʼ ಚಿತ್ರದಲ್ಲಿ ಕಾರ್ತೀಕ್ ಮಹೇಶ್‌ಗೆ ಜೋಡಿಯಾಗಿ ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದಾರೆ, ಉಳಿದಂತೆ ರವಿಶಂಕರ್, ಜಗಪ್ಪ, ಮಹಾನಟಿ ಖ್ಯಾತಿಯ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. "ಸೀತಾ ರಾಮನ ಜತೆಗೆ ಹನುಮನಾಗಿ ರಾಜು ಪಾತ್ರವೂ ಬರುತ್ತದೆ. ಚಿಕ್ಕಮಗಳೂರು, ಬೆಂಗಳೂರು ಸುತ್ತ ನಡೆಯುವ ಕಥೆ ಇದು" ಎನ್ನುತ್ತಾರೆ ನಿರ್ದೇಶಕ ಕೀರ್ತಿ ಕೃಷ್ಣ. "ಒಂದೇ ದಿನ 3 ಸಿನಿಮಾಗಳನ್ನು ಪ್ರಾರಂಭಿಸುವುದು ಸುಲಭದ ಮಾತಲ್ಲ. ನನಗೆ ತುಂಬಾ ಕಾಡಿದಂಥ ಕಥೆ ಇದು. ಒಂದು ಸುಂದರವಾದ ಲವ್ ಸ್ಟೋರಿ ಈ ಸಿನಿಮಾಲ್ಲಿದೆ" ಎನ್ನುತ್ತಾರೆ ಕಾರ್ತಿಕ್ ಮಹೇಶ್.
Karthik Mahesh: ಬಿಗ್ ಬಾಸ್ನಿಂದ ಬಂದ ಹಣದಿಂದ ಹೊಸ ಬ್ಯುಸಿನೆಸ್ ಶುರು ಮಾಡಿದ ಕಾರ್ತಿಕ್ ಮಹೇಶ್
ʻಸೀತಾ ರಾಮ ರಾಜುʼ ಚಿತ್ರಕ್ಕೆ ಸಂಭಾಷಣೆಯನ್ನು ಕ್ರಾಂತಿಕುಮಾರ್ ಬರೆದರೆ, ಸಂಗೀತ ನಿರ್ದೇಶನವನ್ನು ರಾಘವೇಂದ್ರ. ವಿ ಮಾಡಿದ್ದಾರೆ. ಅಭಿಲಾಶ್ ಕಳತಿ ಛಾಯಾಗ್ರಹಣ ನಿಭಾಯಿಸಲಿದ್ದಾರೆ.
ಪೃಥ್ವಿ ಅಂಬಾರ್ ನಟನೆಯ ʻದರ್ಶನʼ
ಸ್ವಸ್ತಿಕ್ ನಿದೇಶನದ ʻದರ್ಶನʼ ಚಿತ್ರದಲ್ಲಿ ಪೃಥ್ವಿ ಅಂಬಾರ್ ಹೀರೋ ಆಗಿ ನಟಿಸುತ್ತಿದ್ದು, ನಾಯಕಿ ಪಾತ್ರದಲ್ಲಿ ನಿಶಾ ರವಿಕೃಷ್ಣನ್ ಅವರು ಕಾಣಿಸಿಕೊಳ್ಳಲಿದ್ದಾರೆ. "ಇದೊಂದು ಕಾಮಿಡಿ ಡ್ರಾಮಾ ಜಾನರ್ ಚಿತ್ರ. ಬೆಂಗಳೂರು ಸುತ್ತಮುತ್ತ ನಮ್ಮ ಚಿತ್ರದ ಚಿತ್ರೀಕರಣ ನಡೆಯಲಿದೆ, ಗೌರವ ಶೆಟ್ಟಿ, ಸಂತು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೇ ಏಪ್ರಿಲ್ 8 ರಿಂದ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ" ಎಂದು ಹೇಳುತ್ತಾರೆ ನಿರ್ದೇಶಕ ಸ್ವಸ್ತಿಕ್.
ತಬಲಾ ನಾಣಿ ಚಿತ್ರಕ್ಕೆ ಎದ್ದೇಳು ಮಂಜುನಾಥ ಕನೆಕ್ಷನ್
ʻಕೆಮಿಸ್ಟ್ರಿ ಆಫ್ ಕರಿಯಪ್ಪʼ, ʻಲವ್ ಯು ಮುದ್ದುʼ ಖ್ಯಾತಿಯ ಕುಮಾರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ತಬಲಾ ನಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಇನ್ನೂ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯಬೇಕಿದೆ. "ನನಗೆ ಎದ್ದೇಳು ಮಂಜುನಾಥ ಚಿತ್ರದಲ್ಲಿನ ತಬಲಾ ನಾಣಿ ಅವರ ಪಾತ್ರ ತುಂಬಾ ದಿನಗಳಿಂದ ಕಾಡುತ್ತಿತ್ತು, ಅದೇ ಪಾತ್ರವನ್ನು ಈ ಚಿತ್ರದಲ್ಲೂ ಮುಂದುವರೆಸುತ್ತಿದ್ದೇವೆ. ಆದರೆ ಆ ಕಥೆಗೂ ಈ ಚಿತ್ರದ ಕಥೆಗೂ ಯಾವುದೇ ಸಂಬಧವಿಲ್ಲ, ಆ ಪಾತ್ರದ ಸುತ್ತ ನಡೆಯುವ ಕಥೆಯಿದು. ಪ್ರೇಕ್ಷಕರನ್ನು ನಗಿಸಲೇಬೇಕು ಅಂತ ಮಾಡ್ತಿರುವ ಚಿತ್ರ" ಎನ್ನುತ್ತಾರೆ ನಿರ್ದೇಶಕ ಕುಮಾರ್.