ತಮಿಳು ನಟ ಸೂರ್ಯ ನಟನೆಯ 'ಕರುಪ್ಪು' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಆರ್‌ಜೆ ಬಾಲಾಜಿ ಅವರೇ ನಿರ್ದೇಶಿಸಿ, ಖಳ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ತ್ರಿಷಾ ಕೃಷ್ಣನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಯಶಸ್ಸು ಸಾಧಿಸಿದೆ. ಇದೀಗ ಕಲೆಕ್ಷನ್ ವಿಚಾರದಲ್ಲಿ ಈ ಸಿನಿಮಾ ಹೊಸ ಮೈಲಿಗಲ್ಲು ಸೃಷ್ಟಿಸಿದ್ದು, ಈವರೆಗೂ ಸುಮಾರು 300 ಕೋಟಿ ರೂ. ಬಾಚಿಕೊಂಡಿದೆ. ಇದು ಸೂರ್ಯ ಕರಿಯರ್‌ನಲ್ಲೇ ದೊಡ್ಡ ಮೊತ್ತದ ಗಳಿಕೆ ಆಗಿದೆ.
ಐಷಾರಾಮಿ ಕಾರುಗಳನ್ನು ಗಿಫ್ಟ್ ನೀಡುತ್ತಿದ್ದಾರೆ ಸೂರ್ಯ
ತಮ್ಮ ಸಿನಿಮಾವೊಂದು ಬಹಳ ವರ್ಷಗಳ ನಂತರ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದರಿಂದ ಖುಷಿಯಾಗಿರುವ ನಟ ಸೂರ್ಯ ಅವರು ಚಿತ್ರದ ಗೆಲುವಿಗೆ ಕಾರಣಕರ್ತರಾದವರಿಗೆ ದುಬಾರಿ ಕಾರುಗಳನ್ನು ಉಡುಗೊರೆ ನೀಡುತ್ತಿದ್ದಾರೆ. ಕರುಪ್ಪು ಚಿತ್ರಕ್ಕೆ ಅದ್ಭುತವಾದ ದೃಶ್ಯವೈಭವ ನೀಡಿದ ಸಿನಿಮಾಟೋಗ್ರಾಫರ್ ಜಿ.ಕೆ. ವಿಷ್ಣು ಅವರಿಗೆ ನಟ ಸೂರ್ಯ ‘ಮಹೀಂದ್ರಾ BE 6 ಬ್ಯಾಟ್‌ಮ್ಯಾನ್ ಎಡಿಷನ್’ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಷಯವನ್ನು ವಿಷ್ಣು ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಇದೆಲ್ಲವೂ ದೈವಲೀಲೆ. ಥ್ಯಾಂಕ್ ಯೂ ಸೂರ್ಯ ಸರ್.. ನಿಮ್ಮದು ವಿಶಾಲವಾದ ಹೃದಯ" ಎಂದು ಬರೆದುಕೊಂಡು, ಹೊಸ ಕಾರಿನೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
Trisha Krishnan: ಕರುಪ್ಪು ಯಶಸ್ಸಿನ ಬೆನ್ನಲ್ಲೇ ತ್ರಿಷಾ ಹೊಸ ಪೋಸ್ಟ್! ವಿಜಯ್ ಚರ್ಚೆ ಏಕೀಗ?
ಛಾಯಾಗ್ರಾಹಕ ಜಿ ಕೆ ವಿಷ್ಣುಗೆ ನೀಡಿರುವ ಕಾರು
ಈ ಕಾರಿನ ಆನ್-ರೋಡ್ ಬೆಲೆ 30 ಲಕ್ಷ ರೂಪಾಯಿಗೂ ಅಧಿಕವಾಗಿದೆ. ಇದನ್ನು ಪಡೆಯಲು ಕೆಲವು ತಿಂಗಳು ಮುಂಚಿತವಾಗಿಯೇ ಬುಕ್ ಮಾಡಬೇಕಾಗುತ್ತದೆ. ಇದನ್ನು ಗಮನಿಸಿದರೆ, ಸೂರ್ಯ ಅವರು ಚಿತ್ರದ ಯಶಸ್ಸಿನ ಮೇಲೆ ಅಪಾರ ನಂಬಿಕೆ ಇಟ್ಟು ಮುಂಚಿತವಾಗಿಯೇ ಈ ಕಾರನ್ನು ಬುಕ್ ಮಾಡಿದ್ದರು ಎನ್ನಲಾಗುತ್ತಿದೆ. ಜಿ.ಕೆ. ವಿಷ್ಣು ಅವರ ಜೊತೆಗೆ ಚಿತ್ರಕ್ಕಾಗಿ ಅದ್ಭುತವಾದ ಸಂಗೀತ ನೀಡಿರುವ ಯುವ ಪ್ರತಿಭೆ ಸಾಯಿ ಅಭ್ಯಂಕರ್ ಅವರಿಗೂ ಸೂರ್ಯ ಕಡೆಯಿಂದ ‘ಮಹೀಂದ್ರಾ BE 6 ಬ್ಯಾಟ್‌ಮ್ಯಾನ್ ಎಡಿಷನ್’ ಕಾರು ಗಿಫ್ಟ್ ಆಗಿ ಸಿಕ್ಕಿದೆ. ಆದರೆ, ನಿರ್ದೇಶಕ ಆರ್‌ಜೆ ಬಾಲಾಜಿಗೆ ಮಾತ್ರ ಇನ್ನೂ ಯಾವುದೇ ಗಿಫ್ಟ್ ಸಿಕ್ಕಿಲ್ಲ. ಆ ಬಗ್ಗೆ ಅವರೇನೂ ಪೋಸ್ಟ್ ಹಂಚಿಕೊಂಡಿಲ್ಲ.
ಬಹುಶಃ ತಮ್ಮ ಕರಿಯರ್‌ಗೆ ಇಂಥ ದೊಡ್ಡ ಹಿಟ್ ನೀಡಿದ ಬಾಲಾಜಿಗೆ ನಟ ಸೂರ್ಯ ಭಾರಿ ಉಡುಗೊರೆಯನ್ನೇ ನೀಡಲು ಪ್ಲ್ಯಾನ್ ಮಾಡಿರಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಕೆಲವೇ ದಿನಗಳಲ್ಲಿ ಆ ಕುರಿತ ಕುತೂಹಲಕ್ಕೆ ತೆರೆಬೀಳಲಿದೆ.
ಸಾಯಿ ಅಭ್ಯಂಕರ್‌ಗೆ ಕೊಟ್ಟಿರುವ ಕಾರು
ಬ್ಲಾಕ್ ಬಸ್ಟರ್ ಹಿಟ್ ಆದ ʻಕರುಪ್ಪುʼ
'ಕರುಪ್ಪು' ಸಿನಿಮಾ ಮೇ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ತೆಲುಗಿನಲ್ಲಿ ಈ ಚಿತ್ರವನ್ನು 'ವೀರಭದ್ರುಡು' ಹೆಸರಿನಲ್ಲಿ ಅನ್ನಪೂರ್ಣ ಸ್ಟುಡಿಯೋಸ್ ಸಂಸ್ಥೆ ವಿತರಣೆ ಮಾಡಿತ್ತು. ಬಿಡುಗಡೆಯಾಗಿ ಎರಡು ವಾರಗಳು ಕಳೆದರೂ ಈಗಲೂ ಚಿತ್ರದ ಬುಕಿಂಗ್ಸ್ ಇನ್ನೂ ಉತ್ತಮವಾಗಿದೆ. ಸದ್ಯದ ಟ್ರೆಂಡ್ ನೋಡಿದರೆ, ಜೂನ್ 4 ರಂದು ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾ ರಿಲೀಸ್ ಆಗುವವರೆಗೂ ಬಾಕ್ಸ್ ಆಫೀಸ್‌ನಲ್ಲಿ ಸೂರ್ಯ ಚಿತ್ರದ ಅಬ್ಬರ ಹೀಗೆಯೇ ಮುಂದುವರಿಯುವ ಸಾಧ್ಯತೆ ಇದೆ.