ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಆದರ್ಶಮಯ ಬದುಕು, ದೂರದೃಷ್ಟಿ ಮತ್ತು ಭವ್ಯ ಪರಂಪರೆಯನ್ನು ಬೆಳ್ಳಿತೆರೆಯ ಮೇಲೆ ಅನಾವರಣಗೊಳಿಸಲು ‘ಕೆಂಪಾಂಬುಧಿ’ ಚಿತ್ರ ಸಜ್ಜಾಗಿದೆ. ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಪ್ರಸ್ತುತಪಡಿಸಿರುವ ಹಾಗೂ ಹೊಂಬಾಳೆ ಮ್ಯೂಸಿಕ್ ಸಹಯೋಗ ಹೊಂದಿರುವ ಈ ಬಹುನಿರೀಕ್ಷಿತ ಚಿತ್ರದ ಭವ್ಯ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಮುಖ್ಯಭೂಮಿಕೆಯಲ್ಲಿ ನಟ ʻನೆನಪಿರಲಿʼ ಪ್ರೇಮ್
ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ತಾರೆಯರ ದಂಡೇ ಇದ್ದು, 'ನೆನಪಿರಲಿ' ಪ್ರೇಮ್, ಮೇಘನಾ ಗಾಂವ್ಕರ್, ರಾಜೇಶ್ ನಟರಂಗ ಮತ್ತು ಸುಧಾ ಬೆಳವಾಡಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಸಂಯುಕ್ತಾ ಹೊರನಾಡು, ನಾಗಶ್ರೀ ಬೇಗಾರ್, ರಾಜೇಂದ್ರ ಕಾರಂತ್, ರಮೇಶ್ ಹಂಡಿತ್, ಬಿ.ಎಲ್. ರವಿಕುಮಾರ್ ಮತ್ತು ನಟರಾಜ್ ರಾವ್ ಸೇರಿದಂತೆ ಹಲವರು ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
Chikkaballapur News: ಅಂತ:ಕರಣದ ನಾಯಕತ್ವಕ್ಕೆ ಬಹುದೊಡ್ಡ ಮಾದರಿ ನಾಡು ಪ್ರಭು ಕೆಂಪೇಗೌಡ : ಜಿಲ್ಲಾಧಿಕಾರಿ ಜಿ.ಪ್ರಭು
ಜಾಣಗೆರೆ ವೆಂಕಟರಾಮಯ್ಯ ಅವರ ಮೂಲ ಕಾದಂಬರಿಯನ್ನು ಆಧರಿಸಿದ ಈ ಚಿತ್ರಕ್ಕೆ ರಮೇಶ್ ಬೇಗಾರ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವೀರ್ ಸಮರ್ಥ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತವಿದ್ದು, ಶಶೀರ್ ಶೃಂಗೇರಿ ಅವರ ಛಾಯಾಗ್ರಹಣ, ಅವಿನಾಶ್ ಶೃಂಗೇರಿ ಅವರ ಸಂಕಲನ ಮತ್ತು ಅಭಿಷೇಕ್ ಹೆಬ್ಬಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಕೆಂಪೇಗೌಡರ ಚಿಂತನೆಗಳು ಬೆಂಗಳೂರಿನ ಅಸ್ತಿತ್ವದ ಅವಿಭಾಜ್ಯ ಭಾಗ
ದೂರದೃಷ್ಟಿಯ ಆಡಳಿತಗಾರ, ಜನಪರ ನಾಯಕ ಹಾಗೂ ಪರಿಸರ ಪ್ರೇಮಿಯಾಗಿದ್ದ ಕೆಂಪೇಗೌಡರ ಚಿಂತನೆಗಳು ಇಂದಿಗೂ ಬೆಂಗಳೂರಿನ ಅಸ್ತಿತ್ವದ ಅವಿಭಾಜ್ಯ ಭಾಗವಾಗಿದೆ. ಪ್ರಸಿದ್ಧ ಲೇಖಕ ಜಾಣಗೆರೆ ವೆಂಕಟರಾಮಯ್ಯ ಅವರ ಜನಪ್ರಿಯ ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ರೂಪಿಸಲಾಗಿದೆ. ಇತಿಹಾಸ, ಜನಪದ, ದಂತಕಥೆಗಳು ಹಾಗೂ ಸಾಂಸ್ಕೃತಿಕ ನೆನಪುಗಳನ್ನು ಒಗ್ಗೂಡಿಸಿ ಈ ವಿಶಿಷ್ಟ ಸಿನಿಮಾ ಕಥನವನ್ನು ಕಟ್ಟಿಕೊಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಇದು ಕೇವಲ ಐತಿಹಾಸಿಕ ಕಥೆಯಷ್ಟೇ ಅಲ್ಲದೆ, ಅಂದಿನ ಮತ್ತು ಇಂದಿನ ಬೆಂಗಳೂರನ್ನು ಜೋಡಿಸುವ ಮಹತ್ವದ ಕೊಂಡಿಯಾಗಿದೆ. ವೇಗವಾಗಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿಯಲ್ಲಿ ನಿಧಾನವಾಗಿ ಮರೆಯಾಗುತ್ತಿರುವ ‘ಗಾರ್ಡನ್ ಸಿಟಿ’ಯ ಹಸಿರು ವೈಭವವನ್ನು ನೆನಪಿಸುವುದರ ಜೊತೆಗೆ, ಪರಿಸರ ಸಂರಕ್ಷಣೆ ಮತ್ತು ನಗರದ ಮೂಲ ಮೌಲ್ಯಗಳ ಕಡೆಗೆ ಸಮಾಜದ ಗಮನ ಸೆಳೆಯುವ ಪ್ರಯತ್ನವನ್ನು ಈ ಸಿನಿಮಾ ಮಾಡುತ್ತದೆ. ಈ ಮೂಲಕ ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಬೆಂಗಳೂರಿನ ಹಸಿರು ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ತನ್ನ ಬದ್ಧತೆಯನ್ನು ತೋರ್ಪಡಿಸಿದೆ.
ವಿಜಯ್ ಕಿರಗಂದೂರು ಹೇಳಿದ್ದೇನು?
"ನಮ್ಮ ಸಮಾಜಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಮಹನೀಯರನ್ನು ನೆನಪಿಸುವ ‘ಕೆಂಪಾಂಬುಧಿ’ಯಂತಹ ಕಥೆಗಳು ನಿಜಕ್ಕೂ ಮೌಲ್ಯಯುತವಾದವು. ಕೆಂಪೇಗೌಡರ ಅಪ್ರತಿಮ ಕೊಡುಗೆ ಹಾಗೂ ಬೆಂಗಳೂರಿನ ಭವ್ಯ ಇತಿಹಾಸವನ್ನು ಗೌರವಿಸುವ ಇಂತಹ ಚಿತ್ರಕ್ಕೆ ಕೈಜೋಡಿಸಿದ ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್‌ನ ಕಾಳಜಿ ಶ್ಲಾಘನೀಯ. ನಗರದ ಹಸಿರು ಭವಿಷ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಮುಂದಿನ ಪೀಳಿಗೆಯಲ್ಲಿ ಮೂಡಿಸುತ್ತಿರುವ ಈ ಪ್ರಯತ್ನ ನನ್ನ ಮನಸ್ಸಿಗೆ ತುಂಬ ಹತ್ತಿರವೆನಿಸಿದೆ" ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ವಿಜಯ್ ಕಿರಗಂದೂರು ಹೇಳಿದ್ದಾರೆ.
ಕುತೂಹಲ ಮೂಡಿಸಿದ ಟೀಸರ್
ಈಗಾಗಲೇ ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ‘ಕೆಂಪಾಂಬುಧಿ’ ಟೀಸರ್, ಕರ್ನಾಟಕದ ಮಹಾನ್ ದಾರ್ಶನಿಕ ನಾಯಕನಿಗೆ ಸಲ್ಲಿಸಿರುವ ಭಾವಪೂರ್ಣ ಸಿನೆಮಾ ನಮನದಂತೆ ಮೂಡಿಬಂದಿದ್ದು, ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ಕುತೂಹಲ ಮತ್ತು ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.