ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻದಿ ಕೇರಳ ಸ್ಟೋರಿ 2ʼ ಸಿನಿಮಾಗೆ ನೀಡಿದ್ದ ತಡೆಯಾಜ್ಞೆ ರದ್ದು; ಯಾವಾಗ ರಿಲೀಸ್‌ ಆಗಲಿದೆ ಈ ಚಿತ್ರ?

The Kerala Story 2 Release Updates: 'ದಿ ಕೇರಳ ಸ್ಟೋರಿ 2' ಚಿತ್ರಕ್ಕೆ ಎದುರಾಗಿದ್ದ ಕಾನೂನು ಸಂಕಷ್ಟಕ್ಕೆ ಸದ್ಯ ಪರಿಹಾರ ಸಿಕ್ಕಂತಾಗಿದೆ. ಏಕಸದಸ್ಯ ಪೀಠ ನೀಡಿದ್ದ 15 ದಿನಗಳ ತಡೆಯಾಜ್ಞೆಯನ್ನು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ರದ್ದುಗೊಳಿಸಿದೆ.

ತೀವ್ರ ವಿವಾದಕ್ಕೀಡಾಗಿರುವ 'ದಿ ಕೇರಳ ಸ್ಟೋರಿ 2-ಗೋಸ್ ಬಿಯಾಂಡ್' (The Kerala Story 2-Goes Beyond) ಚಿತ್ರದ ಬಿಡುಗಡೆಗೆ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠದಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಈ ಚಿತ್ರವನ್ನು ಬಿಡುಗಡೆ ಮಾಡದಂತೆ 15 ದಿನಗಳ ಕಾಲ ಏಕಸದಸ್ಯ ಪೀಠ ತಡೆ ನೀಡಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀವು, ಮೊದಲು ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ 2 ವಾರಗಳ ಕಾಲ ತಡೆ ನೀಡಿದೆ.

ತುರ್ತು ವಿಚಾರಣೆ ಮಾಡಲಾಗಿತ್ತು

ಫೆ. 26ರ ಮಧ್ಯಾಹ್ನ 3 ಗಂಟೆಗೆ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಏಕಸದಸ್ಯ ಪೀಠವು ಈ ಚಿತ್ರದ ಬಿಡುಗಡೆಗೆ 15 ದಿನಗಳ ಕಾಲ ತಡೆಯಾಜ್ಞೆ ನೀಡಿತ್ತು. ಅಲ್ಲದೆ, ಚಿತ್ರದ ವಿರುದ್ಧ ಸಲ್ಲಿಕೆಯಾಗಿರುವ ದೂರುಗಳನ್ನು ಪರಿಶೀಲಿಸುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಸೂಚಿಸಿತ್ತು. ಆದರೆ ಚಿತ್ರದ ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಸಲ್ಲಿಸಿದ ತುರ್ತು ಮೇಲ್ಮನವಿಯನ್ನು ಗುರುವಾರ ತಡರಾತ್ರಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಮತ್ತು ಪಿ.ವಿ. ಬಾಲಕೃಷ್ಣನ್ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿದೆ.

`ದಿ ಕೇರಳ ಸ್ಟೋರಿ 2' ಸಿನಿಮಾವನ್ನು ವೀಕ್ಷಿಸಲಿರುವ ಹೈಕೋರ್ಟ್‌ ನ್ಯಾಯಾಧೀಶರು; ನಿರ್ಮಾಪಕರಿಗೆ ಜಡ್ಜ್‌ ಕೇಳಿದ ಪ್ರಶ್ನೆಗಳೇನು?

"ಚಿತ್ರವು ಕೇರಳ ರಾಜ್ಯವನ್ನಾಗಲಿ ಅಥವಾ ಯಾವುದೇ ಧಾರ್ಮಿಕ ಸಮುದಾಯವನ್ನಾಗಲಿ ಅವಮಾನಿಸುವುದಿಲ್ಲ, ಬದಲಿಗೆ ಕೇವಲ ಸಾಮಾಜಿಕ ಪಿತೂರಿಯನ್ನು ಮಾತ್ರ ಚಿತ್ರಿಸುತ್ತದೆ" ಎಂದು ಶಾ ಪರ ವಕೀಲರು ವಾದ ಮಂಡಿಸಿದ್ದರು. "ಒಂದು ವೇಳೆ ಚಿತ್ರದ ಬಿಡುಗಡೆಗೆ ತಡೆ ನೀಡಿದರೆ ನಿರ್ಮಾಪಕರಿಗೆ ಭಾರಿ ಆರ್ಥಿಕ ನಷ್ಟವಾಗಲಿದೆ. ಫೆಬ್ರವರಿ 27 ರಂದು ಭಾರತದ 1,500 ಮತ್ತು ವಿದೇಶದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದ್ದು, ತಡೆ ನೀಡಿದರೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ" ಎಂದು ವಕೀಲರು ತಮ್ಮ ವಾದದಲ್ಲಿ ಆತಂಕ ವ್ಯಕ್ತಪಡಿಸಿದ್ದರು.

ಆದರೆ, ಇದಕ್ಕೂ ಮೊದಲು ತೀರ್ಪು ನೀಡಿದ್ದ ಏಕಸದಸ್ಯ ಪೀಠವು, ಸೆನ್ಸಾರ್ ಮಂಡಳಿಯು (CBFC) ಕಾನೂನಿನ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಈ ಸಿನಿಮಾ ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಅಥವಾ ಒಂದು ನಿರ್ದಿಷ್ಟ ಸಮುದಾಯವನ್ನು ಹೀಯಾಳಿಸುವ ಸಾಧ್ಯತೆಯಿದೆ ಎಂದು ಬಿಡುಗಡೆಗೆ ತಡೆ ನೀಡಿತ್ತು.

'ದಿ ಕೇರಳ ಸ್ಟೋರಿ 2' ಚಿತ್ರತಂಡದ ವಿರುದ್ಧ ಪಿಣರಾಯಿ ವಿಜಯನ್ ಕೆಂಡ; ʻಸಿನಿಮಾ ಅಲ್ಲ, ಸುಳ್ಳು ಪ್ರಚಾರʼ ಎಂದ ಸಿಎಂ!

ದಿ ಕೇರಳ ಸ್ಟೋರಿ 2 ಸಿನಿಮಾ ಬಗ್ಗೆ..

ಕಾಮಾಖ್ಯ ನಾರಾಯಣ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಮತ್ತು ಐಶ್ವರ್ಯಾ ಓಜಾ ನಟಿಸಿದ್ದಾರೆ. ಘೋಷಣೆಯಾದ ದಿನದಿಂದಲೂ ಈ ಸಿನಿಮಾ ಟೀಕೆ ಮತ್ತು ಕಾನೂನು ಸಂಘರ್ಷಕ್ಕೆ ಗುರಿಯಾಗಿದೆ. ಸದ್ಯ ವಿಭಾಗೀಯ ಪೀಠದ ಆದೇಶದಿಂದಾಗಿ ಚಿತ್ರದ ಬಿಡುಗಡೆಗೆ ಇದ್ದ ಅಡ್ಡಿ ಸದ್ಯಕ್ಕೆ ದೂರವಾಗಿದೆ. ಸದ್ಯ ಬುಕ್‌ ಮೈ ಶೋ ಆಪ್‌ನಲ್ಲಿ ಫೆ.27ರ ರಾತ್ರಿಯ ಶೋಗಳಿಗೆ ಬುಕಿಂಗ್‌ ಓಪನ್‌ ಆಗಿದೆ. ಹಾಗಾಗಿ, ಚಿತ್ರಕ್ಕೆ ಎದುರಾಗಿದ್ದ ಎಲ್ಲಾ ತೊಂದರೆಗಳು ಸದ್ಯಕ್ಕೆ ನಿವಾರಣೆ ಆದಂತಿವೆ.