ಹಣ ಪಡೆದಿದ್ದರೂ ನಟ ಕಿಚ್ಚ ಸುದೀಪ್ ಅವರು ತಮ್ಮ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ ಎಂದು ಆರೋಪ ಮಾಡಿದ್ದ ನಿರ್ಮಾಪಕ ಎಂ ಎನ್ ಕುಮಾರ್ ಮತ್ತು ಎಂ ಎನ್ ಸುರೇಶ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಮೂರು ವರ್ಷಗಳ ಹಿಂದೆ ನಿರ್ಮಾಪಕರ ಮೇಲೆ ಸುದೀಪ್ ಅವರು ಮಾನನಷ್ಟ ಕೇಸ್ ದಾಖಲಿಸಿದ್ದರು. ಇದೀಗ ಈ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ.
ಶನಿವಾರ ಕೋರ್ಟ್‌ಗೆ ಬಂದ ಕಿಚ್ಚ
ಎಂ ಎನ್ ಕುಮಾರ್ ಮತ್ತು ಎಂ ಎನ್ ಸುರೇಶ್ ಮೇಲೆ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಯ ಹಿನ್ನೆಲೆಯಲ್ಲಿ 7ನೇ ಎಸಿಜೆಎಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಸುದೀಪ್ ದಾಖಲಿಸಿದ್ದರು. ಸುದೀಪ್ ತಮ್ಮಿಂದ 9 ಕೋಟಿ ರೂ. ಪಡೆದು ಈಗ ಸಿನಿಮಾ ಮಾಡುತ್ತಿಲ್ಲ ಎಂಬ ಆರೋಪ ಮಾಡಲಾಗಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಸುದೀಪ್ ಕೇಸ್ ದಾಖಲಿಸಿದ್ದರು.
Kiccha Sudeepa: ಸಮಾಜಸೇವೆಗೆ ಟೊಂಕ ಕಟ್ಟಿ ನಿಂತ ಕಿಚ್ಚ ಸುದೀಪ್ ಕೇರ್ ಫೌಂಡೇಶನ್; ಲೋಗೋ ಲಾಂಚ್ ಮಾಡಿದ ಜೂ.ಕಿಚ್ಚ
ಶನಿವಾರ (ಏ.4) ಪಾಟಿ ಸವಾಲ್‌ನಲ್ಲಿ ಭಾಗಿಯಾಗಲು ಸುದೀಪ್ ಕೋರ್ಟ್‌ಗೆ ಆಗಮಿಸಿದ್ದರು. ನಿರ್ಮಾಪಕರ ಪರ ವಕೀಲರು ಸುದೀಪ್ ಅವರಿಗೆ ಕ್ರಾಸ್ ಎಕ್ಸಾಮಿನೇಷನ್ ಮಾಡಿದ್ದಾರೆ. ಮುಂದಿನ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿ, ನ್ಯಾಯಾಲಯ ಆದೇಶಿಸಿದೆ. ಸದ್ಯ ಈ ಪ್ರಕರಣವು ಎವಿಡೆನ್ಸ್ ಹಂತದಲ್ಲಿದೆ. ಇನ್ನು, ಕೋರ್ಟ್‌ಗೆ ಆಗಮಿಸಿದ್ದ ಸುದೀಪ್ ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸುದೀಪ್ ಕೋರ್ಟ್‌ನಿಂದ ಹೊರಗೆ ಹೋಗುತ್ತಿರುವ ವಿಡಿಯೋ ವೈರಲ್
ಮಾನಹಾನಿ ಪ್ರಕರಣ ರದ್ದುಪಡಿಸಲು ಮನವಿ
ತಮ್ಮ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣವನ್ನು ರದ್ದು ಮಾಡುವಂತೆ ನಿರ್ಮಾಪಕರು ಹೈಕೋರ್ಟ್ ಮೊರೆಹೋಗಿದ್ದರು. ಆದರೆ ಕೇಸ್ ಅನ್ನು ರದ್ದು ಪಡಿಸಲು ಹೈಕೋರ್ಟ್ ನಿರಾಕರಿಸಿತ್ತು.
"ದೂರು ಮತ್ತು ಸ್ವಯಂಪ್ರೇರಿತ ಹೇಳಿಕೆಯಲ್ಲಿ ಅರ್ಜಿದಾರರ ವಿರುದ್ಧ ನಿರ್ದಿಷ್ಟ ಆರೋಪಗಳಿದ್ದು, ದೂರುದಾರರ ಪ್ರಕಾರ ಅವು ಸುದೀಪ್ ಅವರಿಗೆ ಮಾನಹಾನಿ ಉಂಟು ಮಾಡಿದ್ದು, ಸಮಾಜದಲ್ಲಿ ಅವರ ವರ್ಚಸ್ಸಿಗೆ ಹಾನಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಸಮನ್ಸ್ ಜಾರಿ ಮಾಡಿರುವುದರಲ್ಲಿ ಕಾನೂನುಬಾಹಿರ ನಡೆ ಕಾಣುತ್ತಿಲ್ಲ" ಎಂದು ನ್ಯಾಯಾಲಯವು ತಿಳಿಸಿತ್ತು. ಅಂದಹಾಗೆ, ಈ ನಿರ್ಮಾಪಕರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 499 ಮತ್ತು 500ರ ಅಡಿ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಲಾಗಿದೆ.